..
ಕರುಣಾರ್ಣವ ಶ್ರೀ ಗುರುವರ
ಕರುಣಿಸೊ ನೀ ಎನ್ನ
ಕರುಣಾಗತ ರಕ್ಷಾಮಣಿ ತವ
ಚರಣಾಂಬುಜ ತೋರಿನ್ನ ಪ
ಆನತಜನತತಿಜ್ಞಾನದ ಎನ್ನ -
ಜ್ಞಾನವ ಕಳೆದಿನ್ನ
ಜ್ಞಾನ ಭಕುತಿ ಸುವಿರಕುತಿ(ಯ)ನಿತ್ತು
ಮಾನದಿ ಸಲಹೆನ್ನಾ 1
ಕಾಮಿತ ಫಲಪ್ರದ ಕಾಮ್ಯಾರ್ಥವನೂ
ಕಾಮಿಪ ಜನಕಿನ್ನ
ಪ್ರೇಮದಿ ಅವರಭಿಕಾಮವ ಪೂರ್ತಿಸಿ
ಕಾಮಧೇನುತೆರ ತೋರುವಿ ಘನ್ನ 2
ಶಿಷ್ಟೇಷ್ಟ ಪ್ರದನಿಷ್ಟಘ್ನನೆ ನೀ
ಕಷ್ಟವ ಪರಿಹರಿಸಿನ್ನಾ
ಎಷ್ಟೆಂಥೇಳಲಿ ಸೃಷ್ಟಿ ಯೊಳಗೆ ನಿನ್ನ
ಶ್ರೇಷ್ಠ ಮಹಿಮೆಗಳನ್ನಾ 3
ಶಿಷ್ಟನೆ ನೀ ಪರಮೇಷ್ಟಿಯ ಸತ್ಪದಾ -
ಧಿಷ್ಟತನೆಂದಿನ್ನಾ
ಪ್ರೇಷ್ಟನೆ ಎನ್ನಯಭೀಷ್ಟೆಯ ನಿತ್ತು
ಶ್ರೇಷ್ಠನ ಮಾಡಿನ್ನಾ 4
ಪಾತಕವನಕುಲ ವಿತಿಹೋತ್ರ ಸುಖ
ದಾತನೆ ನೀ ಇನ್ನಾ
ಈತೆರ ಮಾಡದೆ ನೀತ ಗುರುಜಗ -
ನ್ನಾಥವಿಠಲ ಪ್ರಪನ್ನಾ 5
***