ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೇಂಕಟೇಶದೇವರ ನಖದ ಮಹಿಮಾ ಸುಳಾದಿ
ರಾಗ ಹಿಂದೋಳ
ಧ್ರುವತಾಳ
ಇಂದಿರಾ ದೇವಿ ಗುಣಿಸಿ ಎಣಿಸುವೇನೆಂದು
ಒಂದು ಸಾರಿ ನೋಡಲು ಬೆಡಗು ತೋರಿದ ನಖ
ಅಂದು ಒಂದೊಂದು ಪರಿ ಪರಿ ವರ್ನಂಗಳ ತೋರಿ
ಅಂದವಾಗಿ ಪೊಳೆದ ಮಾಯಾ ಲೀಲಾದ ನಖ
ಮಂದಮತಿಗಳು ನಮಿಸಲವರ ಪಾಪ -
ವೃಂದಾವ ಕಳೆದು ಸುಜ್ಞಾನ ಕೊಡುವ ನಖ
ಕುಂದದನಾಮಾ ಸಿರಿ ವಿಜಯವಿಟ್ಠಲ ನಿನ್ನ
ಸುಂದರ ನಖಗಳಿಗೆ ನಮೊ ನಮೊ ಎಂಬೆ ॥ 1 ॥
ಮಟ್ಟತಾಳ
ಬಲಿಯ ಮನಿಗೆ ಪೋಗಿ ನೆಲನ ದಾನವ ಬೇಡಿ
ಜಲಜಾಂಡಕೆ ಬೆಳೆದು
ಬಲಿದ ಖರ್ಪರವನ್ನಪ್ಪಳಿಸಿ ಸೀಳಿದ ನಖ
ಕಿಲಿಕಿಲಿ ನಗುತ ಗೋವಳ ಸತಿಯರ ಮೊಗ್ಗೆ -
ಮೊಲೆಯ ಮೇಲೆ ತುಳಿವುತ್ತ ವಲಿದು ವತ್ತಿದ ನಖ
ಕಲಕಾಲ ಮುನಿಗಳು ವೊಲಿಸಿ ವೊಲಿಸಿ ನೋಡೆ
ನೆಳಲಗಾಣದೆ ಪೋಗಿ ತೊಳಲಿ ತುತಿಪ ನಖ
ಸುಲಭ ಮಹಾವೀರ್ಯ ವಿಜಯವಿಟ್ಠಲ ನಿನ್ನ
ಪೊಳೆವ ನಖಗಳಿಗೆ ಗೆಲುವದಾವದು ಇಲ್ಲ ॥ 2 ॥
ರೂಪಕತಾಳ
ಬಣ್ಣಾಬಣ್ಣಾವಾಗಿ ಬಲು ಸೋಜಿಗದ ನಖ
ಕಣ್ಣಿಂದ ನೋಡಲು ಥಳಥಳಿಸುವ ನಖ
ಚಿಣ್ಣತನದಲಿ ಗೋಮಕ್ಕಳ ವೊಡಗೂಡಿ
ಚಿನ್ನಾಟಕೆ ಗೋಲಿ ನೆಗದು ಚಿಮ್ಮಿದ ನಖ
ಪನ್ನಗಶಯನ ವ್ಯಕ್ತ ವಿಜಯವಿಟ್ಠಲ
ಚನ್ನಿಗನ ಪಾದ ಪಾವನ್ನವಾದ ನಖ ॥ 3 ॥
ಝಂಪೆತಾಳ
ಸಕಲ ಬೊಮ್ಮಾಂಡಗಳ ವ್ಯಾಪಿಸಿಕೊಂಡ ನಖ
ಅಕಳಂಕ ಚರಿತವಾದ ಆದಿಅನಾದಿ ನಖ
ಭುಕುತಿ ಭಕುತಿ ಯುಕುತಿ ಶಕುತಿ ಕೊಡುವ ನಖ
ಮುಕುತಿ ಬೇಡಿದರೆ ಚಚ್ಚಾರದಲ್ಲಿ ನೀವ ನಖ
ಕಕುಭಾ ಹತ್ತಕೆ ಮೀರಿ ಬೆಳಗು ತೋರುವ ನಖ
ಸಕಲೇಶ ಚತುರ್ಭುಜ ವಿಜಯವಿಟ್ಠಲರೇಯನ
ವಿಕಸಿತ ಕೆಂದಳಕೆ ಸದೃಶವಾದ ನಖ ॥ 4 ॥
ತ್ರಿವಿಡಿತಾಳ
ಮಂದಾಕಿನಿಯ ಪಡದು ಮಹ ವೇಗದಿಂದಲಿ
ಇಂದುಮೌಳಿಯ ಕಾಯ ಪಾವನ್ನ ಮಾಡಿದ ನಖ
ಹಿಂದೆ ಕುರು ರಣದಲ್ಲಿ ಸುತ್ರಾಮ ನಂದನನ
ಶ್ಯಂದನ ಎಳೆವ ವಾಜಿಯ ನಡಿಸಿದ ನಖ
ಸಂದೋಹ ಭಕ್ತರು ನಮಿಸಿ ಸ್ತೋತ್ರವ ಮಾಡೆ
ಚಂದದಿಂದಲಿ ಕೇಳಿ ಹಿಗ್ಗಿ ನಗುವ ನಖ
ಕುಂದನಾಮಾ ಸಿರಿ ವಿಜಯವಿಟ್ಠಲ ನಿನ್ನ
ನಂದದಾ ನಖದ ಲೀಲೇನೆಂದು ಬಣ್ಣಿಸುವೇ ॥ 5 ॥
ಅಟ್ಟತಾಳ
ಗೋಕುಲ ಭೂಮಿಯ ಯಮುನಾ ನದಿಯ ತೀರ
ಸೋಕಿ ರಜದಿ ಪಾವನ್ನ ಮಾಡಿದ ನಖ
ಆ ಕಮಲಾಜಾಂಡವನಂತಾ ನಂತಾ -
ನೇಕ ಬಗೆಯಿಂದ ವೊಳಗೆ ತೋರುವ ನಖ
ಪಾಕಶಾಸನಾದಿ ಮಕುಟ ಮಣಿಯ ಕಾಂತಿ
ನೂಕಿ ಹಿಂದುಮಾಡಿ ಧಿಕ್ಕರಿಸುವ ನಖ
ನೈಕಾದ ವಿಜಯವಿಟ್ಠಲ ಗುಣಪೂರ್ಣ ರ -
ತ್ನಾಕರವಾಗಿ ರಂಜಿಸುವ ಭದ್ರನಖ ॥ 6 ॥
ಆದಿತಾಳ
ಮುಕ್ತಾಮುಕ್ತಾ ಬೊಮ್ಮಾದಿಗಳು
ಸಿಕ್ಕಾದೆಂದು ಜಪಿಸುವ ನಖ
ಅರ್ಕಾಸೋಮ ಕೋಟಿ ಕಿರಣಾ
ನಕ್ಕು ಹಾಸ್ಯ ಮಾಡುವ ನಖ
ರಕ್ಕಸರ ಸಮುದಾಯದಾಯದಾ
ಸೊಕ್ಕು ಮುರಿದು ಕಳವ ನಖ
ಅರ್ಕನಾಮಾ ವಿಜಯವಿಟ್ಠಲ
ಭಕ್ತರಿಗೆ ವೊಲಿದ ನಖ ॥ 7 ॥
ಜತೆ
ಅರ್ಚಿಪರ ಹೃದಯದೊಳಗೆ ಮಿನಗುವ ನಖ
ಅರ್ಚಿತ ವಿಜಯವಿಟ್ಠಲರೇಯನ ನಖ ॥
*******