kruti by Nidaguruki Jeevubai
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ
ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ
ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ
ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ
ಪಂಕಜನಾಭನ ಕಿಂಕರರ ಭಯ
ಚಿಂತೆಯ ನೀಗುವರ
ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1
ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ
ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ
ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ-
ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2
ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ
ದೇಶ ದೇಶದ ಭಕುತರ ಉಲ್ಲಾಸ ಕೊಡುವರ
ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ
ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3
ಕಂಗೊಳಿಪ ಕೋರೆಯಿಂದ
ಬಂದ ಭದ್ರೆಯ ತೀರದಿ
ಚಂದದಿಂದ ಮೆರೆವ ರಾಘ-
ವೇಂದ್ರ ರಾಯರ
ಕೊಂಡಾಡಿ ಪಾಡಿರೊ ಮನಕೆ
ಸಂಭ್ರಮ ನೀಡುವರು
ಪೊಂದಿದ ಪಾಪಗಳೆಲ್ಲವ ನೀಗಿಸಿ
ಚಂದದಿ ಸಲಹುವರು 4
ಕರುಣದಿಂದ ಭಕ್ತರನೆಲ್ಲ
ಸಲಹುತಿರ್ಪರ
ಕಮಲನಾಭ ವಿಠ್ಠಲನಂಘ್ರಿ
ಭಜನೆ ಮಾಳ್ಪರ
ಕನಕಮಯದ ಮಂಟಪದಲಿ
ಮರೆಯುತಿರ್ಪರ
ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5
***