ರಾಗ : ಹಂಸಾನಂದೀ ತಾಳ : ಆದಿ
ನೆರೆ ನಂಬಿದೆ ಗುರು ಮನ ಮಂದಿರದೊಳು ।
ಪರಿತೋಷಿಸು ಗುರು ರಾಘವೇಂದ್ರ ।। ಪಲ್ಲವಿ ।।
ವರ ತುಂಗಾ ತೀರದಿ ಮಂತ್ರಾಲಯದಿ ।
ನಿರುತ ನೆಲೆಸಿದ ಮಂಗಳ ಮಹಿಮನೆ ರಾಘವೇಂದ್ರ ।। ಅ ಪ ।।
ಮುದವಾದರು ಬಲು ಖೇದವಾದರೂ ।
ಭೇದವ ಮಾಡದಿರು ರಾಘವೇಂದ್ರ ।
ಮುದಮುನಿ ಶಾಸ್ತ್ರಾರ್ಥ ಸದಮಲ ಹೃದಯದಿ ।
ಭೋಧಿಸುತಿರು ನೀ ರಾಘವೇಂದ್ರ ।। ಚರಣ ।।
ಶರಣೆಂದವರಘ ತ್ವರಿತದಿ ನೀಗುವ ।
ಶರಣರ ಸುರಧೇನು ರಾಘವೇಂದ್ರ ।
ಪರಿಪರಿ ಮೋದವ ಭರದಲಿ ಬೀರುತ ।
ಪರಮ ಕರುಣಿ ಜಯ ರಾಘವೇಂದ್ರ ।। ಚರಣ ।।
ಭವ ರೋಗಂಗಳ ಜವದಲಿ ನೀಗುವ ।
ಭವರೋಗ ವೈದ್ಯನೇ ರಾಘವೇಂದ್ರ ।
ರವಿ ಶತ ತೇಜ ಶ್ರೀ ರಾಮನ ಪೂಜಿಪ ।
ಕವಿಯಗ್ರೇಸರ ರಾಘವೇಂದ್ರ ।। ಚರಣ ।।
ಕುಷ್ಠ ಕುಬ್ಜ ಬದಿರಾದಿ ವ್ಯಾಧಿಗಳ ।
ನಷ್ಟವ ಗೊಳಿಸುವ ರಾಘವೇಂದ್ರ ।
ನಿಷ್ಠೆಯಿಂದ ಅಷ್ಟೋತ್ತರ ಪಠಿಸಲು ।
ಇಷ್ಟವ ಗರೆಯುವ ರಾಘವೇಂದ್ರ ।। ಚರಣ ।।
ವರ ಸುಧಾ ಗ್ರಂಥಕೆ ಪರಿಮಳ ಟೀಕೆಯ ।
ಸರಸದಿ ರಚಿಸಿದ ರಾಘವೇಂದ್ರ ।
ಹರಿಮತ ಶರಧಿಗೆ ಚೆಂದಿರ ನೆನೆಪನೆ ।
ಹರಿ ಗುಣ ನಾಯಕ ರಾಘವೇಂದ್ರ ।। ಚರಣ ।।
ಪ್ರತಿ ಗುರುವಾರದಿ ಅಂದಣವೇರುವ ।
ಯತಿ ಕುಲ ತಿಲಕನೆ ರಾಘವೇಂದ್ರ ।
ಅತಿಶಯ ಭಕುತಿಲಿ ಸ್ತುತಿಸುವ ಜನರಿಗೆ ।
ಮತಿ ಶುಭವೀಯುವ ರಾಘವೇಂದ್ರ ।। ಚರಣ ।।
ಭಕುತರ ಮೊರೆ ಕೇಳಿ ಯುಕುತಿಯಿಂದಲಿ ।
ಮುಕುತಿ ಪಥವ ತೋರೋ ರಾಘವೇಂದ್ರ ।
ಅಕಳಂಕ ಮಹಿಮ ಶ್ರೀ ರಘುಪತಿ ವಿಠ್ಠನ ।
ಸುಖ ಸಂತಸ ನೀಡೋ ರಾಘವೇಂದ್ರ ।। ಚರಣ ।।
*****