Showing posts with label ಎಲ್ಲೆ ವೈಭೋಗಾವಿದು vijaya vittala ankita suladi ಶ್ರೀಕೃಷ್ಣ ಸುಳಾದಿ ELLE VAIBHOGAVIDU SRI KRISHNA SULADI. Show all posts
Showing posts with label ಎಲ್ಲೆ ವೈಭೋಗಾವಿದು vijaya vittala ankita suladi ಶ್ರೀಕೃಷ್ಣ ಸುಳಾದಿ ELLE VAIBHOGAVIDU SRI KRISHNA SULADI. Show all posts

Thursday, 28 January 2021

ಎಲ್ಲೆ ವೈಭೋಗಾವಿದು vijaya vittala ankita suladi ಶ್ರೀಕೃಷ್ಣ ಸುಳಾದಿ ELLE VAIBHOGAVIDU SRI KRISHNA SULADI

 

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ ಉಡುಪಿ ಶ್ರೀಕೃಷ್ಣ ದೇವರ ಸುಳಾದಿ - ೩ 

(ಉಡುಪಿಯ ಕೃಷ್ಣನನ್ನು ಸ್ತೋತ್ರಗೈಯುವ ಸುಳಾದಿ)


 ರಾಗ:ಕಾಂಬೋಧಿ 


 ಧ್ರುವತಾಳ 


ಎಲ್ಲೆ ವೈಭೋಗಾವಿದು ಎಲ್ಲೆ ವೈಭವವಿದು 

ಎಲ್ಲೆ ಆನಂದಾವಿದು ಎಲ್ಲಿ ಅದ್ಭೂತವಿದು 

ಸುಳಾದಿ ಎಲ್ಲಿ ಸೌಖ್ಯಾವಿದು ಎಲ್ಲಿ ವಿಚಿತ್ರವಿದು 

ಎಲ್ಲೆ ಐಶ್ವರ್ಯವಿದು ಎಲ್ಲಿ ನಾಟಕವಿದು 

ಎಲ್ಲೆ ಅಮೋಘವಿದು ಎಲ್ಲಿ ಪರಾಕು ಇದು 

ಎಲ್ಲಿ ಸ್ತೋತ್ರವಿದು ಎಲ್ಲಿ ಪರಿವಾರವಿದು 

ಎಲ್ಲಿ ವಾಲಗವಿದು ಎಲ್ಲೆಲ್ಲಿ ನೋಡಿದರು 

ಇಲ್ಲವೊ ನಿನ್ನ ಸರಿ ಬಲ್ಲಿದರಿಳಿಯೊಳು 

ಸಲ್ಲುವಾದಿದು ಇಂದೆ ಅಲ್ಲದೆ ದ್ವಾರಾವತಿ 

ವಲ್ಲಭಾ ಗೋಕುಲದಲ್ಲಿ ನಿಂದಾಡಿದಾಗ 

ಗೊಲ್ಲರ ಮಕ್ಕಳೊಡನೆ ಕಳ್ಳತನಕೆ ಸರುವಾ 

ದಲ್ಲಿ ಸಂಚರಿಸಿದ್ದು ಎಲ್ಲ ದೇವರದೇವ 

ಕಲ್ಲಿದಾಗರ ಪೆಗಲಿನಲ್ಲಿ ಪೊತ್ತುಕೊಂಡು 

ಬಳ್ಳಿ ಉಡಿಗೆ ಉಟ್ಟ ಗುಲ್ಲಿ ಮಾಡುವ ಚೀಲ 

ಸೊಲ್ಲು ಸೊಲ್ಲಿಗೆ ಬಂದು ಸುಳ್ಳು ಮಾತುಗಳಲ್ಲಿ 

ನಿಲ್ಲಾ ದಿನಕಳದಾದ್ಯೆಲ್ಲಾ ಎಲ್ಲಿ ಪೋಯಿತೊ 

ಒಳ್ಳೆಯವನಾಗಿ ಉಡುಪಿಯಲ್ಲಿ ನೆಲಸಿ ಅರ್ಥಿ -

ಯಲ್ಲಿ ಯತಿಗಳಿಂದ ಸಲ್ಲಿಲಿತ ಸಂಪೂಜೆ 

ಗೊಳ್ಳುತ ಮೆರವವ ಭಳಿರೆ ಭಳಿರೆ ಹೊ ಹೊ 

ಎಲ್ಲ ಉಪಾಯವನ್ನು ಬಲ್ಲ ಬಲವಂತರೊಡಿಯಾ 

ಬಲ್ಲವರಾರು ಗುಣವಲ್ಲಿಗಳು ನಿನ್ನವು 

ಬೆಳ್ಳಿಗದ್ದುಗಿ ಪುರದಲ್ಲಿ ಇಪ್ಪ ವಿಜಯವಿ -

 ಠಲ ಉಡುಪಿನ ಶ್ರೀ ಕೃಷ್ಣ 

ಪಳ್ಳಿಗೋವಳ ಹಟ್ಟಿಯಲ್ಲಿ ಮೆರದೆ ನೀನು ॥೧॥


 ಮಟ್ಟತಾಳ 


ನಾಕಜನರ ಸನಕಾದಿಗಳ ಶೌನಕಾದ್ಯರ ಮ-

ನಕೆ ತೋರದ ಕನಕಾಂಬರಧರ 

ನಾ ಕಾಣೆನೊ ನಿನ್ನ ಕಪಟತನಕೆ ಎಲ್ಲೆಲ್ಲಿ ಪಿ-

ನಾಕಧರಾಪ್ತ ಜ್ಞಾನ ಕಾಯಾ ಸಿದ್ಧ ವಿಜಯವಿಠಲ ಕೃಷ್ಣ 

ನಾ ಕರಮುಗಿಪೆ ಘನಕಾರದೇವ ॥೨॥


 ತ್ರಿವಿಡಿತಾಳ 


ಜಾರ ಚೋರನಾಗಿ ಜಗದೊಳು ಪೆಸರಾಗಿ 

ನಾರೇರಮನ ಅಪಹಾರಗೈಸಿದೆ ಅಂದು 

ಪೋರರ ಸಂಗಡ ಕೆಲವಾಡಿ ಕಂಡಲ್ಲಿ 

ಹಾರ್ಯಾಡಿ ಹರಬಾರಿಂದಲಿ ಕೊಂಡಾಡಿ 

ಊರ ಜನಕೆ ಎಲ್ಲ ತಲೆ ಹೊರೆಯಾಗಿ ಸಂ-

ಸಾರವಕೊಂಡಿ ಎಲ್ಲೊ ಪರಸ್ತ್ರೀಯರ 

ಆ ರಾಸ ಕ್ರೀಡೆಯಲ್ಲಿತ್ತೆ ಮತ್ತೆವನದೊಳಬ್ಬ 

ನಾರೀಯ ಪೆಗಲೀಲಿ ಪೊತ್ತು ನಡದೆ 

ಪೋರಾತನದಲಲಿ ನೀಚೋಚ್ಚಾ ನೋಡದೆ 

ಸಾರಿಸಾರಿಗೆ ಎಂಜಲು ಮೆಲವುತ್ತ 

ಈ ರೀತಿಯಲಿ ಇದ್ದೆ ಒಬ್ಬರಾದರೂ ನಿನ್ನ 

ಆರಾಧನೆ ಮಾಡಿದವರಲ್ಲಾ ಕಾರುಣ್ಯ 

ಮೂರುತಿ ಉಡುಪಿಯ ಕೃಷ್ಣ ವಿ-

ಸ್ತಾರ ಮಹಿಮ ಸಿರಿ ವಿಜಯವಿಠಲರೇಯಾ ॥೩॥


 ಅಟ್ಟತಾಳ 


ಚೆಲುವನು ನಮಗೆಂದು ನಂದಗೋಪಗೋಪಿ 

ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ 

ಗೆಳಿ ರಾವು ಎಂದು ಗೋಮಕ್ಕಳು ಅಂದು 

ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ 

ಬಲು ನಾರಿಯರು ಕಾಮಾತುರದಿಂದ 

ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ 

ಕುಲದಲ್ಲಿ ಪುಟ್ಟಿದನೆಂದು ಯಾದವರು 

ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ 

ಇಳಿಯ ವಲ್ಲಭ ಉಗ್ರಸೇನನು ನಿನ್ನನಾ 

ಕೆಳಗೆ ನಿಲ್ಲಿಸಿ ವಾಲಗಾಕೊಂಡನಯ್ಯಾ 

ತಿಳಿದುಕೋನಿನಗಂದು ಒಬ್ಬರಾದರು ನಿ 

ಶ್ಚಲ ಭಕುತಿಯಿಂದ ಭಜಿಸಲಿಲ್ಲ 

ಎಲೊದೇವ ಉಡುಪಿನ ಕೃಷ್ಣ ವಿಜಯವಿ -

 ಠಲ ನಿನಗೀ ಪೂಜೆ ಎಲ್ಲಿಂದ ಒದಗಿತು ॥೪॥


 ಆದಿತಾಳ 


ಇದ್ದರಿದ್ದಾರಾದಾರು ಒಂದಾರೆ ಅರ್ಚಕಾರು 

ಶುದ್ಧಯತಿಗಳಿಂದ ಪೂಜೆಗಳಂದು ನಿನಗೆ 

ಇದ್ದಿಲ್ಲವೆಂಬೋದು ಲೋಕವೆ ಬಲ್ಲೋದು 

ಕದ್ದು ತಿಂದವನಿಗೆ ಬಲು ಬಲು ಉಪಚಾರ 

ಉದ್ದಿನಕಾಳಷ್ಟು ಕೊರತೆಯಾಗದಂತೆ 

ಪದ್ಧತಿ ತಪ್ಪದೆ ಉದಯಾಸ್ತಮಾನ ತನಕ 

ತಿದ್ದಿಮಾಡಿದ ವಸ್ತಾದಿವ್ಯವಸನರತುನ 

ಗದ್ದುಗೆ ಮೇಲೆ ನಿಂದು ಮೇಲಾದ ಶಾಖಪಾಕ 

ಮಿದ್ದು ಮಾಡಿದ ಭಕ್ಷಾ ಪರಮಾನ್ನ ಓದನಾ 

ಮುದ್ಗನ್ನಾ ಮಿಗಿಲಾದ ಷಡುರಸ ಪದಾರ್ಥ 

ಮುದ್ದೆ ಮುದ್ದೆ ಕವಳ ತಪ್ಪದೆ ನಿರಂತರ 

ಮೆದ್ದು ಮಂಗಳಾರತಿ ಬೆಳಗಿನಿಂದಲಿ ಒಪ್ಪಿ 

ಪೊದ್ದಿಕೊಂಡಿಪ್ಪೆ ಸುಖ ಪಳ್ಳಿಯೊಳಗಿತ್ತೆ 

ಹೆದ್ದೈವತನಬಿಟ್ಟು ಚಿಕ್ಕ ಮಕ್ಕಳ ಕೈಯ್ಯಾ 

ಗುದ್ದಿಸಿಕೊಂಡದ್ದು ಮರದಿಯೊ ಎಲೊ ದೇವ 

ಬದ್ಧ ಪುಟಾಂಜಲಿ ಹಸ್ತದಿಂದಲಿ ನಿಂದು 

ಶುದ್ಧ ಯತಿಗಳು ಭಯ ಭಕುತಿಯಿಂದ 

ಎದ್ದು ಸಮ್ಮೊಗವಾಗಿ ತುತಿಸಿ ಕಾಲತ್ರಯಾ 

ಸಿದ್ಧಾಂತದಲಿ ನಿನ್ನ ಭಜಿಸುವ ಲೇಸು ನೋಡು 

ಗೆದ್ದಿಯೊ ಅಂದಿನ ಪಟ್ಟ ಪಡಿಪಾಟಲು 

ನಿದ್ರೆಕಾಣದೆ ಸ್ತ್ರೀಯರ ಕೂಡಲಿದ್ದದು 

ಬುದ್ಧಿವಂತರೊಡಿಯಾ ವಿಜಯವಿಠಲ ಕೃಷ್ಣ 

ಸಿದ್ಧಾರ್ಥ ಪಾಲಿಸುವ ಸಂತತ ನಿರ್ದೋಷ ॥೫॥


 ಜತೆ 


ಆವದಾದರು ನಿನಗೆ ವಿಹಿತಾವೆ ಸರಿ ಸರ್ವ-

ದೇವೇಶ ವಿಜಯವಿಠಲ ಉಡುಪಿನ ಕೃಷ್ಣ ॥೬॥

*******