ಶ್ರೀ ವಿಜಯದಾಸಾರ್ಯ ವಿರಚಿತ ಭೋಗಾನಂತ ದೇವರ ಮಹಾತ್ಮೆ ಸುಳಾದಿ
ರಾಗ : ಮಲಯಮಾರುತ
ಧ್ರುವತಾಳ
ಮಲಯಾ ಮಧ್ಯದಲ್ಲಿಪ್ಪುದೇನೊ ಪಾವಿನ ಮೇಲೆ
ಮಲಗಿ ಮುದದಿಂದ ನಸುನಗುವದೇನೊ
ಪೊಳೆವ ವೈಕುಂಠಾದಿ ಹೊಳಲಾ ತೊರದು ಈ
ನೆಲದಲ್ಲಿ ವಾಸವಾಗಿಪ್ಪದೇನೊ
ವಲಯಾಕಾರದ ಜಂಬುದ್ವೀಪದೊಳಗೆ ಉತ್ತುಮ
ನಿಲಯಾ ನೋಡಿಕೊಳದೆ ಬಂದಾಬಗಿ ಏನೋ
ಜಲಜ ಸಂಭವಾದ್ಯರು ಒಲಿದು ಪೂಜಿಸುತಿರಲು
ಇಳೆಯೊಳೀ ನರರಿಂದ ಪೂಜೆಗೊಂಬುವುದೇನೊ
ಸುಲಭ ಸಾಧ್ಯ ವಿಜಯವಿಠಲ ಭೋಗಾನಂತ
ಚಲುವ ದೇವರದೇವ ಒಲಿದವರಿಗೆ
ಗಲಭೆ ಮಲಿಯಾ ಮಧ್ಯವಿಪ್ಪದೇನೊ ll1ll
ಮಟ್ಟತಾಳ
ಎವೆ ಇಡದಲೆ ನಿನ್ನಾ ನೋಡುವ ಭಾಗ್ಯ
ಅವನಿಯೊಳಗೆ ನಿನ್ನಾ ನೋಡುವ ಭಾಗ್ಯ
ಯಾವತ್ತು ನಿನ್ನಾ ನೋಡುವ ಭಾಗ್ಯ
ಅವಯವಂಗಳು ಇಂದು ನೋಡುವ ಭಾಗ್ಯ
ದಿವಿಜಾದಿಗಳಿಗೆ ಮನಕೆ ದೂರ
ಭವ ಮನುಜಾ ನಿನ್ನಾ ನೋಡುವ ಭಾಗ್ಯ
ಮಾಣವಾದದುಪಾವನಕಾಯ
ನವಮೋಹನ ವಿಜಯವಿಠಲಾನಂತ
ಕವಿಗಳ ಮನೋಹರಾ ಭವಭಯವಿದೂರ
ದಿವಾಕರ ವರದ ದಿವಾಕರಕುಲಜಾತ ll2ll
ತ್ರಿವಿಡಿತಾಳ
ಒಂದು ಬಾಗಿಲಲ್ಲಿ ಆನಂದವಾದಾ ಪಾದಾ
ದ್ವಂದರವಿಂದವಾ ಬಿರುದಿನಾ ಪೆಂಡೆಯಾ
ಅಂದಿಗೆ ಪೊಂಗೆಜ್ಜೆ ಪರಡು ಬೆರಳಾ ಮುದ್ರೆ
ಇಂದು ಲಜ್ಜಿತನಾದ ಚಂಧಾ ಪಾದದ ಉಗುರು
ಮಂದಾಕಿನಿಯ ಪಡದಾ ಉಂಗುಟಾಗ್ರ ಜಂಘೆ
ಪೊಂದಿ ಪೊಳವಾಜಾನು ವಸನಪಾಟಿಸಿ ನೋಡುವ
ಇಂದಿರೆಯರಸಿ ಪಾದಾರ್ಚನೆ ಮಾಡುತ್ತ
ಒಂದೊಂದು ಪರಿಯಲ್ಲಿ ಎಣಿಸಿ ಗುಣಿಸುತಿರೆ
ಇಂದಾನಂತತಲ್ಪ ವಿಜಯವಿಠಲರೇಯನ
ಸಂದರುಶನವಾಗಿ ಇಂದು ಈ ಪರಿ ಕಂಡೆ ll3ll
ಮಟ್ಟತಾಳ
ಮಧ್ಯಬಾಗಿಲಲನಿರುದ್ಧನ್ನ ನಾಭಿಯ
ಪದ್ಮವನ್ನು ಕಟಿ ತಿದ್ದಿದ ಉಡಿದಾರ
ಮುದ್ದು ತ್ರಿವಳಿ ಹೇಮಾ ಅದ್ದಿದ ಶರಗು, ಪ್ರ -
ಸಿದ್ಧ ಉದರವಕ್ಷಶುದ್ಧ ಕೌಸ್ತುಭಮಣಿ
ಪದ್ಧತಿ ಸರ ಕರ ಪದ್ಮವನ್ನು ಪಿಡಿ
ದಿದ್ದು ಮನದಲ್ಲಿ ಇದ್ದವನಾ ಕಂಡೆ
ಉದ್ಧಂಡ ವಿಜಯವಿಠಲ ಭೋಗಾನಂತ
ಉದ್ಧಾರಮಾಳ್ಪ ಕ್ಷೀರಾಬ್ಧಿಶಯನನೀತಾ ॥4ll
ಆದಿತಾಳ
ಎರಡೊಂದನೆ ದ್ವಾರದಲ್ಲಿ ಶಿರಸಾಪೊಳವ ಮುಕುಟಾ
ಸರಸಕುಂಡಲ ಕರ್ನಧರ ವಕ್ತ್ರನಾಸರಿದ ಪೂ
ಸರಸಿಜನಯನ ಕಸ್ತುರಿನಾಮ ಫಣೆಯಲ್ಲಿ
ವರಪುಬ್ಬು ಮತ್ತೆ ಒಂದು ಕರವು ಶೃಂಗಾರದಿಂದ
ಪರಿಶೋಭಿಸಲು ಈ ಪರಿಯಲ್ಲೀ
ಉರಗನ್ನ ಪರಿಯಂಕದಲ್ಲಿ ಮಲಾ-
ಗಿರುತಿಪ್ಪ ಪರಮಾತ್ಮ ಸಿರಿಯರಸಾ ವಿಜಯವಿಠಲ
ಪರಮಭೋಗಾನಂತ ಪರಮರೂಪಶಾಂತ ll5ll
ಜತೆ
ಪೊಕ್ಕಳಿಂದಲಿ ಮಗನಾ ಪೆತ್ತ ಪದುಮನಾಭಾ
ರಕ್ಕಸರಿಪು ವಿಜಯವಿಠಲಾ ಭೋಗಾನಂತಾ ll6ll
*******