ಪಾಲಿಸೋ ದಯಪಾಲಿಸೋ ಗುರುಪಾಲಿಸೋ ಪರಿಪಾಲಿಸೋ
ಮೂಲರಾಮ ಪದಾಬ್ಜಭೃಂಗ ಸುಶೀಲ ಮೂರುತಿ ಪಾಲಿಸೋ ಪ
ಮಂದಹಾಸ ಮುಕುಂದ ಮಾನಸದಿಂದ ರಾಜಿಪ ಸುಂದರ
ಇಂದಿರೇಶನ ಪೊಂದಿದಾಹೃದಯದಿಂದ ಶೋಭಿಪ ಚಂದಿರಾ
ಬಂದುಬೇಡಿದ ತಂದುನೀಡುವ ವೃಂದಾವನಧುರಂಧರಾ
ತಂದೆ ಕಾಯುವುದೆಮ್ಮ ಶ್ರೀಗುರು ಮಂತ್ರಾಲಯಮಂದಿರಾ 1
ನಂದತೀರ್ಥರ ದುಂದುಭಿ ಧ್ವನಿಯಿಂದ ಪೂರಿತ ಕಂಧರಾ
ನಂದಗೋಪನಕಂದ ಕೃಷ್ಣಮುಕುಂದ ಆಜ್ಞೆಗೆ ಬಂದರಾ
ಎಂದಿಗಾದರು ತಂದೆ ನೀ ಗತಿ ಎಂದರೊಳ್ ಕೃಪಾಸಿಂಧುರಾ
ಪೊಂದಿದೆ ಪದವೃಂದವಂ ಗುರುಮಂತ್ರಾಲಯಮಂದಿರಾ 2
ಸಾಧುಸಂತರ ಮೋದ ಚಿಂತಕ ಶ್ರೀಧರಾ ಸ್ವಜನೋದರಾ
ಯಾದವೇಶನಗಾಧ ಲೀಲೆ ವಿನೋದವಾದ ಯಶೋಧರಾ
ಬಾಧೆಯೊಳ್ ಭವಬಾಧೆ ತಾಳದೆ ಪಾದ ನಂಬಿರಲೀತೆರಾ-
ಗೈದ ಮುನ್ನ ಅಪರಾಧ ನೋಳ್ಪರೆ ಮಂತರಾಲಯಮಂದಿರಾ 3
ಶ್ರೀಶನಿಂದಪರೋಕ್ಷ ಭೂಷಿತ ಭಾಸುರಾಮರ ಭೂಸುರಾ
ದೋಷರಾಶಿವಿನಾಶ ನೇತ್ರ ಯತೀಶ್ವರಾ ನತಧೀಶ್ವರಾ
ಆಶೆಪಾಶೆದುರಾಶೆಯೊಳ್ ಬಲುಘಾಸಿಯಾದೆ ಮುನೀಶ್ವರಾ
ಕೂಸಿನಂದದಿ ಪೋಷಿಸೆನ್ನನು ಮಂತರಾಲಯಮಂದಿರಾ 4
ರಾಘವೇಂದ್ರ ಸದಾಗಮ ಶ್ರುತಮೇಘ(ಮೋಘ?) ಬೋಧ ಮಹಾಸ್ಮೃತಾ
ರಾಘವೇಶನ ಪಾದ ಸಂಸ್ಕೃತ ಯೋಗದೊಳ್ ಬಲುವಿಸ್ತೃತಾ
ನೀಗಲಾರದ ಭೋಗದೊಳ್ ಭವ ಸಾಗದಂತಿದೆ ಶ್ರೀ ಗುರೋ
ಬಾಗಿಬೇಡುವೆ ಬೇಗ ಕೈಪಿಡಿ ಮಂತರಾಲಯಮಂದಿರಾ 5
ವಾಣಿಯಿಂದಭಿಮಾನಿ ತಾನನ ಗಾನಸಂಪದ ಸಾಧನಾ
ಭಾನು ಚಿನ್ಮಯ ಧೇನು ಚಿಂತಿತ ಜ್ಞಾನ ಕೀರ್ತಿ ಮಹಾ ಘನ
ಧ್ಯಾನ ಚಿಂತನ ಗಾನಕೀರ್ತನೆ ಏನು ಇಲ್ಲದ ಹೀನ ನಾ
ಜ್ಞಾನಿ ನೀ ಮತಿಗಾಣಿಸೆನ್ನನು ಮಂತರಾಲಯಮಂದಿರಾ 6
ರಾಮನಾರ್ಚನೆ ನೇಮದಿಂಕೃತ ಶ್ರೀಮಹಾಕರಯುಗ್ಮನೆ
ಕಾಮಿತಾರ್ಥವನೀವ ಕಾರ್ಯ ವಿರಾಮವಿಲ್ಲದ ಭಾಗ್ಯನೆ
ನೀ ಮಹಾತ್ಮನು ನಾ ದುರಾತ್ಮನು ತಾಮಸಾಂದಧಿ ಪಾತನಾ
ಪ್ರೇಮದಿಂ ಪಥಗಾಣಿಸೋ ಪ್ರಭುವೆ ಮಂತರಾಲಯಮಂದಿರಾ 7
ತೀರ್ಥಗಂಗೆಯು ಸಾರ್ಥ ಸಾಧನೆ ತೀರ್ಥ ತೋಯ ಪದಾಂಬುಜಾ
ಆರ್ತರಂ ಸುಕೃತಾರ್ಥಗೈಯುವ ಕೀರ್ತಿ ಕಲ್ಪಧ್ರುಮಂ ನಿಜಾ
ಸ್ವಾರ್ಥದೊಳ್ ದಿನ ಜಾರ್ದು ಪೋದವು ತೀರ್ಥಪಾದ ಸುಧೀಂದ್ರಜಾ
ಪ್ರಾರ್ಥಿಸೆ ಪದ ಭಕ್ತಿಯಿಂ ಕೊಡು ಮಂತರಾಲಯಮಂದಿರಾ 8
ತೀರ್ಥ ಶ್ರೀ ಗುರು ರಾಘವೇಂದ್ರರ ಪ್ರಾರ್ಥಿಸಲ್ ಪದಕೋಮಲಾ
ಮೂರ್ತಿಗೊಂಡಿತು ಪ್ರಾರ್ಥನಾಷ್ಟಕ ಕೀರ್ತನಾಕೃತ ನಿರ್ಮಲಾ
ಪ್ರಾರ್ಥನಾಷ್ಟಕ ಪಾಡಿ ಶ್ರೀಗುರುಚಂದ್ರಿಕಾಮುಖ ಮಂಗಳಾ
ಕೀರ್ತಿ ಶ್ರೀಹರಿವಿಠಲೇಶಗೆ ಸಾಂದ್ರಮಾ ನಿರಲೀಕಲಾ 9
***