Showing posts with label ಪಶ್ಚಿಮಕೆ ತಿರುಗಿದಾ ಪರಿಯದೇನೋ ಅಚ್ಯುತಾನಂತ gopalakrishna vittala. Show all posts
Showing posts with label ಪಶ್ಚಿಮಕೆ ತಿರುಗಿದಾ ಪರಿಯದೇನೋ ಅಚ್ಯುತಾನಂತ gopalakrishna vittala. Show all posts

Monday 2 August 2021

ಪಶ್ಚಿಮಕೆ ತಿರುಗಿದಾ ಪರಿಯದೇನೋ ಅಚ್ಯುತಾನಂತ ankita gopalakrishna vittala

ಪಶ್ಚಿಮಕೆ ತಿರುಗಿದಾ ಪರಿಯದೇನೋ

ಅಚ್ಯುತಾನಂತ ಗೋವಿಂದ ಗೋಪಾಲ ಪ.


ಪವನ ಮುನಿಗಳು ನಿನ್ನ ಪರಿ ಪರೀ ಸ್ತುತಿಗೈದು

ಪೂರ್ವಾಭಿಮುಖವಾಗಿ ಸ್ಥಾಪಿಸಿರಲೂ

ಆವಕಾಲಕು ಪವನ ಮತದಂತೆ ನಟನೆಯವ

ಈ ವಿಧದಿ ಅವರ ಮನಮೀರಿ ತಿರುಗಿಹುದೂ 1

ಕ್ಷೀರ ಸಾಗರ ಜಾತೆ ನೋಡುವಳೆಂದು

ನಾರಿ ಹಂಬಲನೆನಸಿ ಕಡಲ ಕಡೆಗೇ

ಸೇರಬೇಕೆಂದು ವೈಕುಂಠವನು ತಿರುಗಿದ್ಯಾ

ಕಾರಣವದೇನೈಯ್ಯ ನಾರದ ಸ್ತುತನೇ 2

ಕ್ಷೀರಸಾಗರ ಮಧ್ಯೆ ತೋರುವೋ ದಿವ್ಯಪುರ

ಸೇರಿದಾ ಮುಕ್ತ ಸ್ತುತಿಯನಾಲೈಸಿ

ಹಾರಿಹೋಗಲು ಮನಸು ಹಾರಿತೇ ಮಮತೆಯಲಿ

ದ್ವಾರಕಿಯ ನೆನಪಾಯಿತೇನೋ ಕೃಷ್ಣಯ್ಯ 3

ದುರ್ಜನಕೆ ದುರ್ಮನಸು ಮರುಕಲಿ ಪುಟ್ಟಲೂ

ಸರ್ಜನಕೆ ಸರ್ವೇಶ ನೀನೇನಿಸಲೂ

ಮೂರ್ಜಗದಿ ನಿನ್ನ ಮೀರಿದರಿಲ್ಲವೆನಿಸಲೂ

ಅಬ್ಜಭವಪದರಲ್ಲಿ ಸಲುಗೆ ಬಹಳಿರಲೂ 4

ಎಲ್ಲ ಕಾರಣವಿರಲಿ ಬಲ್ಲ ಕನಕನು ಬರಲು

ಗುಲ್ಲು ಮಾಡುತ ಕುರುಬನೆಂದೊಳಗೆ ಬಿಡದೇ

ನಿಲ್ಲಿಸಲು ಕಲ್ಲೊಡೆದು ಪಶ್ಚಿಮಕೆ ತಿರುಗಿ ನೀ

ಅಲ್ಲೆ ಕನಕಗೆ ದಿವ್ಯ ದರುಶನ ಕೊಡಲೂ 5

ಸಿರಿಬೊಮ್ಮ ಸುರರ ಲೆಕ್ಕಿಸದೆ ಸದ್ಭಕ್ತರಾ

ಗರುವ ರಹಿತರ ಸ್ತುತಿಗೆ ಮೈದೋರುವಾ

ಪರಿಯ ತೋರಲು ಇತ್ತ ತಿರುಗಿದ್ಯಾ ಪೇಳಿನ್ನು

ಪರಮ ಪುರುಷನೆ ನಿನ್ನ ಪರಿ ತಿಳಿವರಾರೈ6

ಆನಂದ ಗುಣಪೂರ್ಣ ಆನಂದ ಮುನಿವರದ

ಆನಂದ ಕಂದ ಪಶ್ಚಿಮ ತಡಿಯವಾಸಾ

ಆನಂದ ಗೋಕುಲದಿ ಆನಂದ ತೋರಿದಾ

ಆನಂದ ಗೋಪಾಲಕೃಷ್ಣವಿಠಲೈಯ್ಯಾ 7

****