Showing posts with label ಎಲ್ಲಿಹ ಮಧುರಾಪುರ vaikunta vittala ankita suladi ಶ್ರೀಕೃಷ್ಣ ಸುಳಾದಿ ELLIHA MADHURAPURA SRIKRISHNA SULADI. Show all posts
Showing posts with label ಎಲ್ಲಿಹ ಮಧುರಾಪುರ vaikunta vittala ankita suladi ಶ್ರೀಕೃಷ್ಣ ಸುಳಾದಿ ELLIHA MADHURAPURA SRIKRISHNA SULADI. Show all posts

Thursday 22 July 2021

ಎಲ್ಲಿಹ ಮಧುರಾಪುರ vaikunta vittala ankita suladi ಶ್ರೀಕೃಷ್ಣ ಸುಳಾದಿ ELLIHA MADHURAPURA SRIKRISHNA SULADI

Audio by Vidwan Sumukh Moudgalya

 

ಶ್ರೀ ವೈಕುಂಠದಾಸಾರ್ಯ ವಿರಚಿತ 


 ಶ್ರೀಕೃಷ್ಣ ಸುಳಾದಿ 


 ರಾಗ : ಬೃಂದಾವನಸಾರಂಗ 


 ಧ್ರುವತಾಳ 


ಎಲ್ಲಿಹ ಮಧುರಾಪುರ ಇನ್ನೆಲ್ಲಿಹ ಕಂಸಾಸುರನೆ

ಎಲ್ಲಿಂದ ಬಂದುದೆ ಬಿಲ್ಲುಹಬ್ಬ ತಾನು

ಎಲ್ಲಿಹನಕ್ರೂರನಿವ ತಾನಲ್ಲಿಂದ ಬಂದನೆ

ಎಲ್ಲಿ ನಮ್ಮ ಗೋವಿಂದನೊಡಗೊಂಡುನೊಯ್ದನೆ

ಎಲ್ಲಿಯ ಮನೆ ನಮಗಿನ್ನೆಲ್ಲಿಯ ಮನೆವಾರತೆ

ಎಲ್ಲಿ ನಮ್ಮ ವೈಕುಂಠವಿಠ್ಠಲ 

ಎಲ್ಲಿಗ್ಹೋದಡಲ್ಲಿಗೆ ಹೋಹ ನೋಡೆ ಕೆಳದಿ॥೧॥


 ಮಟ್ಟತಾಳ 


ಈತಗೆಲ್ಲಿ ದೊರಕಿತೆ ಮಾತಿನ ಅಕ್ರೂರತನ ನೋಡೇ ಕೆಳದಿ

ಭೂತಳಕೆ ಪೆಸರಾದಕ್ರೂರಗೆ ಮಾತಿನ ಕ್ರೂರತನ ನೋಡೆ ಕೆಳದಿ

ಯಾತಕೆ ವೈಕುಂಠವಿಠ್ಠಲ ನಗಲಿಸುವಗೆ

ಮಾತಿನ ಕ್ರೂರತನ ನೋಡೆ ಕೆಳದಿ॥೨॥


 ರೂಪಕತಾಳ 


ಬಿಲ್ಲುಹಬ್ಬ ಮಧುರಾಪುರದಲ್ಲಿ ನಿನಗೆ ಕೃಷ್ಣಯ್ಯಾ ನಿನ್ನ

ಬಿಲ್ಲುಹಬ್ಬ ಸ್ಮರಗೆಮ್ಮನೊಪ್ಪಿಸಿತು ನಿನ್ನ

ಬಿಲ್ಲು ವಲ್ಲಭ ವೈಕುಂಠವಿಠ್ಠಲ ನಿನ್ನ ಬಿಲ್ಲುಹಬ್ಬ॥೩॥


 ಝಂಪೆತಾಳ 


ಚರಣಸರಸಿಜವು ನಮ್ಮ ಶಿರದ ಮೇಲಿಡು ಕೃಷ್ಣ

ಮರಳಿ ನಮ್ಮ ಗೋಕುಲಕ್ಕೆ ಬಾಹವೆಂತ

ಪರಮಪುರುಷ ಪುರುಷೋತ್ತಮ

ಮರಳಿ ನಮ್ಮ ಗೋಕುಲಕೆ ಬಾಹದೆಂತು

ಸಿರಿರಮಣ ವೈಕುಂಠವಿಠ್ಠಲ ಮರಳೆ॥೪॥


 ತ್ರಿವಿಡಿತಾಳ 


ಮೂರುತಿ ಮನದಲ್ಲಿ ಕೀರುತಿ ಕಿವಿಯಲ್ಲಿ

 ಇರಿಸು ರಮಾರಮಣನೆ ಅನ್ಯ ವಿ-

ಚಾರ ನಮಗ್ಯಾತಕಯ್ಯಾ ಮಾರಮಣನೆ

ವಾರಿಜಾಕ್ಷ ವೈಕುಂಠವಿಠ್ಠಲ 

ಕರುಣಾಕರೆನ್ನ ಮಾರಮಣನೆ॥೫॥


 ಅಟ್ಟತಾಳ 


ಹರಿ ಕರುಣಾಮೃತಂಬುಧಿಯಲೋಲಾಡಿ

ಮರಳಿ ವಿಯೋಗ ದು:ಖದಿ ಮುಳುಗಾಡಿ

ಹರಿ ವಿರಹದಿ ಕಳ್ಳರಾಗಿ ತಿರುಗಿ

ಮರಳೆ ವಿಯೋಗ

ಸಿರಿರಮಣ ವೈಕುಂಠವಿಠ್ಠಲರೇಯಾ 

ಪೊರೆಯಬೇಕು ನಿನ್ನ ನೆರೆ ನಂಬಿದವರ॥೬॥


 ಆದಿತಾಳ 


ಹರಿ ವಿರಹದಿ ಬೆಚ್ಚಂತರಂಗದಿ

ಸ್ಮರನರಳಂಬಿಗೊಡ್ಡಿದ ಬಹಿರಂಗದಿ

ತರುಣಿಯ ಜನರತ್ತ ಹರಿ ವಿರಹದಿ ಕಳ್ಳರಾಗಿ

ತಿರುಗುವ ತರುಣಿಯ ಜನರನ್ನ

ಸಿರಿರಮಣ ವೈಕುಂಠವಿಠಲರೇಯಾ 

ಪೊರೆಯಬೇಕು ನಿನ್ನ ನೆರೆ ನಂಬಿದವರನ್ನ

ತರುಣಿಯ ಜನರನ್ನ॥೭॥


 ಜತಿ 


ಗೋಕುಲದ ಗೋಪಾಂಗನೆಯರುಗಳು

ಲೋಕೇಶ ವೈಕುಂಠವಿಠ್ಠಲನ್ನ ನೆನೆದರು ಗೋಕುಲದಿ॥೮॥

****