Showing posts with label ಶ್ರೀಶೈಲಾ ಪಂಚ vijaya vittala ankita suladi ಶ್ರೀಶೈಲಕ್ಷೇತ್ರ ಸುಳಾದಿ SRISHAILA PANCHA SRISHAILA KSHETRA SULADI. Show all posts
Showing posts with label ಶ್ರೀಶೈಲಾ ಪಂಚ vijaya vittala ankita suladi ಶ್ರೀಶೈಲಕ್ಷೇತ್ರ ಸುಳಾದಿ SRISHAILA PANCHA SRISHAILA KSHETRA SULADI. Show all posts

Sunday, 17 January 2021

ಶ್ರೀಶೈಲಾ ಪಂಚ vijaya vittala ankita suladi ಶ್ರೀಶೈಲಕ್ಷೇತ್ರ ಸುಳಾದಿ SRISHAILA PANCHA SRISHAILA KSHETRA SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀಶೈಲಕ್ಷೇತ್ರ ಸುಳಾದಿ 


 ರಾಗ : ತಿಲಂಗ್ 


 ಧ್ರುವತಾಳ 


ಶ್ರೀಶೈಲಾ ಪಂಚಪಂಚಕ್ರೋಶಾ ಯಾತ್ರೆಯುಂಟು 

ಶೇಷಾದ್ರಿ ಪುಚ್ಛಭಾಗಾವೆಂದು ತಿಳಿದೂ 

ಶೇಷಭೂಷಣನಿಲ್ಲಿ ವಾಸವಾಗಿಪ್ಪನು 

ಶ್ರೀಶನ ದಯದಿಂದ ತೀರ್ಥಾಸವನೀವುತ್ತ 

ದೇಶದೊಳಗೆ ಭೂಕೈಲಾಸದಿಕವಿದು 

ಕಾಶಿ ರಾಮೇಶ್ವರ ಮಧ್ಯದಲ್ಲೀ 

ದೋಷವಿಬಂಧನಾ ಪಾಶಾನೆ ಹರಿಸೋದು 

ವಿಸಜನ್ಮದ ಕ್ಲೇಶನಾಶನವಾಗುವದೂ 

ಕೇಶವನ ಧೀರ್ಘದ್ವೇಷಿಗಳು ಇಲ್ಲಿ 

ವಾಸವಾದರು ಫಲಾ ಲೇಶವಿಲ್ಲ 

ವಾಸುದೇವನಾಮಾ ವಿಜಯವಿಠಲರೇಯನ 

ದಾಸನಲ್ಲಾದವಗೆ ಈ ಸುಲಭ ದೊರಕೋದೆ ॥೧॥


 ಮಟ್ಟತಾಳ 


ಸುತನ ಸ್ನೇಹದಿಂದ ಪಿತಾಮಹನು ಬಂದು 

ಅತಿಶಯದೀಶನಾ  ಹಿತವಾಗಿ ಪೂಜಿಸಿದ 

ಸತತ ವಲ್ಮೀಕದೊಳು ಮಿತಿಯಿಲ್ಲದ ವರುಷಾ 

ಹುತನೇತ್ರನಿರಲು 

ಜಿತಮನ್ಯುನಾಮಾ ವಿಜಯವಿಠಲನ್ನ ಅ -

ಮೃತ ನಾಮವನ್ನು ಪ್ರತಿದಿನ ನೆನೆಸುತ್ತ ॥೨॥


 ರೂಪಕತಾಳ 


ಚಂದ್ರಗುಪ್ತನೃಪನಾ ಮಂದಿರದಿಂದಲ್ಲಿ 

ಬಂದು ಉತ್ತಮವಾದ ಅಂದಾವುಳ್ಳಕಳೂ 

ಬಂದು ನಿರಂತರ ಚಂದವಾಗಿ ಕ್ಷೀರ 

ಬಿಂದು ಮಾತುರ ಇಡದೆ ಅಂದು ಕರವುತಿರೆ 

ಒಂದುದಿನ ನೃಪತಿ ಅಂದು ಗೋವನು ಕರ 

ತಂದು ದಂಡಿಸಲಾಗ ಬಂದಾಗ ಪರೀಕ್ಷಿಸಿದ 

ಸಂಧಿಮಾತೆ ನಾಮಾ ವಿಜಯವಿಠಲನಾ ಕೃಪೆ 

ಯಿಂದ ಪೆಸರಾದಾನೆಂದು ತಿಳಿವುದೂ ॥೩॥


 ಝಂಪೆತಾಳ 


ಈ ತೆರದಲಿರುತಿರಲು ಭೂತನಾಥನು ಮುಂದೆ 

ಸೀತಾಂಶಳಾಗುಪ್ತಜಳು ಮಲ್ಲಿಕಾ ಎಂಬುವಳು 

ಚಾತುರ್ಯವಂತೆ ಯವ್ವನಾತುರದಿ ಒಪ್ಪುತಿರೆ 

ಸೋತನಾಗವಳ ಪಿತ ಕೈದುಡುಕಲು 

ಕಾತುರದಲಿ ಪಿತನ ಶಾಪಿಸಿ ವೇಗದಲಿ 

ಭೂತೇಶನೊಳಗೆ ಗೋಪಾಲ ಸಮ್ಮೇತಾ 

ತಾ ತವಕದಲ್ಲಿ ಪ್ರವೇಶವಾದಳಂದು 

ಮಾತು ಪುಶಿಯಲ್ಲನಿಶ್ಚಯವೆನ್ನಿರೊ 

ಜ್ಯೋತಿರಾದಿತ್ಯ ಶಿರಿ ವಿಜಯವಿಠಲನ್ನ 

ಪ್ರೀತಿ ಸಂಪಾದಿಸಿ ಲಾಲಿಸುವದಿದನೂ ॥೪॥


 ತ್ರಿವಿಡಿತಾಳ 


ಇಲ್ಲಿ ಈರ್ವರು ಬಂದು ಪೊಕ್ಕಾ ಕಾರಣದಿಂದ 

ಮಲ್ಲಿಕಾರ್ಜುನನೆಂಬ ನಾಮಾದಲ್ಲೀ 

ಎಲ್ಲ ಲೋಕದಲೀಶ ಕರಿಸಿಕೊಂಡನು ಸುರ 

ರೆಲ್ಲಾರು ಕೊಂಡಾಡೆ ವಿಜಯದಿಂದಾ 

ಬಲ್ಲಿದ ಶಶಿಗುಪ್ತಾ ಕೂಪಿತಾದಲ್ಲಿ ಗಿರಿಜಾ 

ವಲ್ಲಭಗೆ ಶಪಿಸೀದಾ ನಿನ್ನಾ ನೋಡಲು ಗತಿ 

ಇಲ್ಲಾದೆ ಪೋಗಲಿ ಎನುತಾ ಪೇಳಲು ಗಿರಿಜಾ 

ವಲ್ಲಭ ಕರುಣದಲಿ ಶಿಖರಕ್ಕೆ ವರವಿತ್ತಾ 

ಖುಲ್ಲಾದಲ್ಲಣ ಶ್ರೇಷ್ಠಾ ವಿಜಯವಿಠಲರೇಯಾ 

ಸಲ್ಲಿಸುವನು ಭಕುತಿಯಲ್ಲಿ ನಡೆದರೆ ಪುಣ್ಯ ॥೫॥


 ಅಟ್ಟತಾಳ 


ನವಭಕುತಿಯಲಿಂದ ನವನದಿಯಲಿ ಸ್ನಾ -

ನವನು ಮಾಡಿದ ಮಾನವನ ಪುಣ್ಯಕಿ ಇ -

ನ್ನವನಿಯೊಳಗಾವನಾವನು ವಿಧಿತ ಸಾಧ 

ನವನು ತೀರಿಸಿದ ಮಾನವಗೆ ಪಡಿಯುಂಟೆ 

ನವನೀತ ಚೋರ ವಿಜಯವಿಠಲನ ಧ್ಯಾ-

ನವನು ಕೈಕೊಂಡಾಗಾನವ ನೀತರಾಗಿ ॥೬॥


 ಆದಿತಾಳ 


ಶ್ರೀಗಿರಿಯಲ್ಲಿ ವಾಸವಾಗಿ ಒಂದು ನಿಮಿಷಾ ನಿಜಾ 

ಭಾಗವತರೊಡಗೂಡಿ ಜಾಗರತನದಿಂದಲಿ 

ಆಗಮ ಸಿದ್ಧಾಂತವುಳ್ಳ ಸಾಗರದೊಳಗೆ ವಿ -

ಯೋಗವಾಗದತಿ ಇದ್ದು ಸಾಗರಶಯನನ ಸೇವೆ 

ಜಾಗುಮಾಡದತಿಮಾಡಿ ನೀಗಿ ಭವರೋಗಗಳು 

ಯೋಗಿಗಳು ಬಲ್ಲರಿದು ಈಗಿನ ಮಾತಲ್ಲವಲ್ಲ 

ಭೂಗರ್ಭನಾಮ ಸಿರಿ ವಿಜಯವಿಠಲ ಬಲ್ಲಾ 

ಕಾಗಿಯಂತೆ ಮುಣುಗಿದರು 

ಆಗದಾಗದು ಕೈವಲ್ಯಾ ॥೭॥


 ಜತೆ 


ಎಂದಿಗಾದರು ಒಮ್ಮೆ ಜ್ಞಾನದಿಂದಲಿ ನೋಡೆ 

ಬಂದು ಮಹವೀರ್ಯಾ ವಿಜಯವಿಠಲನೊಲಿವಾ ॥೮॥

********