Showing posts with label ತೊಳಸದಕ್ಕಿಯ ತಿಂಬ ಕಿಲುಬು ankita vijaya vittala JAYA MANGALAM TOLASADAKKIYA TIMBA ನಿಂದಾಸ್ತುತಿ NINDASTUTI. Show all posts
Showing posts with label ತೊಳಸದಕ್ಕಿಯ ತಿಂಬ ಕಿಲುಬು ankita vijaya vittala JAYA MANGALAM TOLASADAKKIYA TIMBA ನಿಂದಾಸ್ತುತಿ NINDASTUTI. Show all posts

Wednesday 1 December 2021

ತೊಳಸದಕ್ಕಿಯ ತಿಂಬ ಕಿಲುಬು ankita vijaya vittala JAYA MANGALAM TOLASADAKKIYA TIMBA ನಿಂದಾಸ್ತುತಿ NINDASTUTI


ವಿಜಯದಾಸರ ಒಂದು ಅಪರೂಪದ ದೇವರನಾಮ ಇಲ್ಲಿದೆ. ವಿಜಯದಾಸರು [ತಿರುಪತಿ ] ಶ್ರೀನಿವಾಸನ ದರ್ಶನಕ್ಕೆಂದು ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ಇದನ್ನು ರಚಿಸಿದ್ದು ಎಂದು ಹೇಳಲಾಗುತ್ತದೆ. [ನಿಂದಾಸ್ತುತಿ] ಗಳ ಪ್ರಕಾರಕ್ಕೆ ಸೇರುವ ರಚನೆಯಿದು -

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ. 

ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ 
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ| 

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
***

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ತನ್ನ ನೋಡೇನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರುಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|
***


explantion by- ಡಾ ವಿಜಯೇಂದ್ರ ದೇಸಾಯಿ.

ಸಿರಿವೇಂಕಟೇಶನ ಮಹಾತ್ಮೆ. ಸಿರಿವೇಂಕಟೇಶನ ಮಹಾತ್ಮೆ. ವಿಜಯದಾಸರ ಮಾತಿನಲ್ಲಿ. ಅಮೂಲ್ಯ ಮಂಗಳಾಚರಣೆ. ದೂರ ದೂರದಿಂದ ಕಷ್ಟಪಟ್ಟು ನಡೆದು ಬರುತ್ತಾರೆ ಸ್ವಾಮಿ ದರ್ಶನಕ್ಕೆಂದು, ತಂದ ಹಣವನ್ನೆಲ್ಲ ಹುಂಡಿಗೆ ಸುರಿಯುತ್ತಾರೆ. ಗದ್ದಲವೋ ಗದ್ದಲ. ಮುಗಿಯದ ಸರತಿಸಾಲು ದರುಶನಕೆ. ವೆಂಕಪ್ಪನ ಎದುರಿಗೇ ಬಂದೆವು. ಇನ್ನೇನು ಕಂಡೆವು ದೊರೆಯ. 


ಅಷ್ಟರಲ್ಲಿ ಕೈ ಹಿಡಿದು ಮುಂದೆ ಕಳಿಸಿದರು. ಹಿಂದೆ ದುಗಿಸಿದರು. ʻಮುಂದೆ – ಮುಂದೆʼ ಕೂಗು. ಹೆಚ್ಚು ಕಡಿಮೆ ಕೆಲವರ ಬೆನ್ನಿಗೆ ಏಟು ಬಿತ್ತು ಮುಂದೆ ಕಳಿಸಲು.


ಇತ್ತ ಹಣವೂ ಹೋಯಿತು. ಸರಿ ದರ್ಶನವೂ ಇಲ್ಲ. ಏನಪಾ ಸ್ವಾಮಿ ನಮ್ಮಪ್ಪಾ ಇದು? ಭಕ್ತರ ಉದ್ಗಾರ!


ಭಕ್ತರ ಉದ್ಧಾರ ಮಡುವ ಸ್ವಾಮಿ ನೀನು. ಶರಣು ಬಂದಿದ್ದೇವೆ ಎನಲು ಉದ್ಧರಿಸುವ ನಮ್ಮ ಶ್ರೀನಿವಾಸ. ಇದು ಮೇಲ್ನೋಟದ ಅರ್ಥ. ತಾತ್ವಿಕವಾಗಿ ನೋಡೋಣ. --



ಜಯಮಂಗಳಂ ನಿತ್ಯಶುಭ ಮಂಗಳಂ |ಪ| 


ಶ್ರೀಶ್ರೀನಿವಾಸಗೆ ಜಯವಾಗಲಿ. ಮಂಗಲವಾಗಲಿ. ಬ್ರಹ್ಮಾಂಡದ ಒಡೆಯಗೆ ಅದೆಂಥ ಜಯ, ಶುಭ, ಮಂಗಳ? 


ಆತ ಅಜಿತ. ಅಜೇಯ. ನಿತ್ಯ ಜಯವಂತ. ಆತನ ನಾಮ ಸ್ಮರಣೆಯೇ ಸರ್ವರಿಗೂ ಶುಭಕಾರಕ. ಆತ ಅನಂತ ಮಂಗಲಕರ ಕಲ್ಯಾಣಗುಣಪೂರ್ಣ. ಆತ ಮಂಗಲಾನಾಂ ಮಂಗಲಂ. ಅವನಷ್ಟು ಮಂಗಲಕರ ವಸ್ತು ಮತ್ತೊಂದಿಲ್ಲ. 


ಹಾಗಾದರೆ ಏನಿದು ಜಯಮಂಗಲಂ?


ಪರಮಾತ್ಮ, ಭಕ್ತಿಯಿಂದ ನಾವು ನಿನಗೆ ಶರಣು ಬಂದಿದ್ದೇವೆ. ನಮಗೆ ಅನುಗ್ರಹಿಸು.ನಮಗೆ ಜಯ ಕೊಡು. ಮಂಗಲಕರವಾದ ಶುಭ ಕೊಡು. 


ಸಂಸಾರದಲ್ಲಿ ಬರುವ ಮದ, ಮತ್ಸರ, ಮೋಹ ಮೊದಲಾದ ಅರಿಷಡ್ ಗುಣಗಳೇ ಶತ್ರುಗಳು.


ಅವಗಳ ಮೇಲೆ ನಮಗೆ ಜಯ ಕೊಡು. ಸಂಸಾರ ಅಪಾರ ಸಾಗರ. ಅದನ್ನು ದಾಟುವ ಜಯ ಕೊಡು. 


ಶಾಶ್ವತ ಮಂಗಲ ಅಂದರೆ ಶಾಶ್ವತ ಸುಖ ಪರಮ ಪುರುಷಾರ್ಥ ಅನುಗ್ರಹಿಸು.


ಬಿಂಬಕ್ಕೆ ಅಲಂಕರಿಸಿದರೆ ಪ್ರತಿಬಿಂಬ ಅಲಂಕೃತ. ಕೊಟ್ಟದ್ದನ್ನು ಅನಂತ ಮಡಿಮಾಡಿ ಕೊಡುವ ಪರಮಾತ್ಮ. ಆತನಿಗೆ ಶುಭ ಮಂಳ ಜಯಕಾರ ಹೇಳಿ ಅವುಗಳನ್ನು ನಾವು ಪಡೆದುಕೊಳ್ಳಬೇಕು. ಇದು ಹಾಡಿನ ಪಲ್ಲವಿ ಅರ್ಥ.



ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬ ಅಕ್ಕಿಯಲ್ಲಿ ಎರಡು ವಿಧ –


ತೊಳಸಿದ ಅಕ್ಕಿ – ಪಾಲಿಶ ಮಾಡಿದ ಅಕ್ಕಿ. ಪಾಲಿಶ ಮಾಡುವದರಿಂದ ಅಕ್ಕಿಯ ಸತ್ವ ನಾಶವಾಗುತ್ತದೆ ವಿಜ್ಞಾನದ ಮಾತು. ನೋಡಲು ಬೆಳ್ಳಗೆ. ಮೋಹಕ. ಸಂಸಾರದ ಪ್ರತೀಕ.


ಅಂತೇ ತೊಳಸಿದ ಅಕ್ಕಿ = ಬಾಹ್ಯ ಡಂಭಾಚಾರದ ಜನ. ಆಧ್ಯಾತ್ಮಿಕ ನಟನೆ. ಲೌಕಿಕ ವಿಚಾರ, ಆಚಾರ, ಆಸಕ್ತಿ. ಸಾಧನೆಯ ಸತ್ವ ಇಲ್ಲದವರು. ತೊಳಸಿದ ಅಕ್ಕಿ ವಲ್ಲ ದೇವರು. ಇಂಥ ಸತ್ವವಿಲ್ಲದ, ಉದರ ವೈರಾಗ್ಯದ ಜನರ ಒಲ್ಲ ಪರಮಾತ್ಮ


.ತೊಳಸದ ಅಕ್ಕಿ- ಪಾಲಿಶ ಮಾಡದ ಅಕ್ಕಿ. ಕೆಂಪಕ್ಕಿ. ಮೋಹಕ ಅಲ್ಲ. ಆದರೆ ಸತ್ವಭರಿತ. ಅಲೌಕಿಕದಲ್ಲಿ ರತಿ. ಲೌಕಿಕದಲ್ಲಿ ವಿರತಿ. ಜ್ಞಾನ, ಭಕ್ತಿಯುತ. ತುಂಬಿದ ಸಾಧನೆ. 


ಇಂಥ ತೊಳಸದಿರುವ ಅಕ್ಕಿ ಉಣ್ಣುತ್ತಾನೆ ಪರಮಾತ್ಮ. ತಥ್ಯ ಸಾತ್ವಿಕ ಸಾಧಕರು ಬೇಕು. ಅವರ ಸಾಧನೆ ಗ್ರಾಹ್ಯ. ಬೂಟಾಟಿಕೆ ಬೇಡ.


ಕಿಲುಬು ತಳಿಗೆಯಲಿ ಉಂಬ -


ಕಿಲಬು = ಲಿಂಗದೇಹ. ತಳಿಗೆ = ಜೀವನ ಸ್ವರೂಪ.


ಕಿಲಬು ತಳಿಗೆಯಲ್ಲಿ ತೊಳಸದಿರುವ ಅಕ್ಕಿ ಉಂಬ. ಅಕ್ಕಿ = ಕರ್ಮಗಳು.


ಕಿಲಬು-ಲಿಂಗದೇಹ ಆವರಿತ ಸಾತ್ವಿಕರ –ತೊಳಸದಿರುವ ಅಕ್ಕಿ = ಸತ್ವ ಭರಿತ ಸಾಧನೆಯ ಕರ್ಮಗಳನು ಪರಮಾತ್ಮ ಸ್ವೀಕರಿಸುತ್ತಾನೆ,


ಕೊಳಗದಲಿ ಹಣಗಳನು ಅಳೆಸಿಕೊಂಬ –


ಕೊಳಗ ಶರೀರ.ಜನ್ಮ. ನಮಗೆ ಬಹು ಜನ್ಮಗಳು. ಬಹು ಶರೀರಗಳು. ಅನಂತ ಕರ್ಮಗಳು.


ಹಣ=ಕರ್ಮಗಳು. ಧನಕ್ಕಾಗಿ ಕರ್ಮ. ಕರ್ಮದಿಂದ ಧನ. ಅದಕ್ಕಾಗಿ ಹಣ ಎಂದರೆ ಕರ್ಮ. ಪ್ರತಿ ಜನ್ಮದಲ್ಲಿ ನಮ್ಮ ಶರೀರವೇ ಅಳೆಯುವ ಕೊಳಗ. ಸಂಚಿತ, ಆಗಾಮಿ, ಪ್ರಾರಬ್ಧ ಕರ್ಮಗಳನ್ನು ಅಳೆಯುತ್ತದೆ.


ಹಣದ ಆಶೆ ತೀರದು. ಹಾಗೇ ಕರ್ಮಗಳು ಎಂದೂ ಮುಗಿಯವು. ಕೆಸರನ್ನು ಕೆಸರಿನಿಂದ ತೊಳೆದರೆ ಕೆಸರು ಹೋಗಲಾರದು. ಹಾಗೇ ಕರ್ಮಗಳಿಂದ ಮುಕ್ತಿ ಅಸಾಧ್ಯ. ಅವನ ಕರುಣೆ ಬೇಕು.


ಕೊಳಗದಲಿ ತೊಳಸದ ಅಕ್ಕಿ ಅಳೆಸಿ ಕಿಲಬು ತಳಿಗೆಯಲಿ ಉಂಬ. –


ಬಹು ಜನ್ಮ, ಶರೀರ ಕೊಳಗಳನ್ನು ಕೊಡುತ್ತಾನೆ. ತೊಳಸದ ಅಕ್ಕಿ – ಸತ್ಕರ್ಮಗಳನ್ನು, ಕಿಲಬುತಳಿಗೆ – ಸಾತ್ವಿಕರಿಂದ ಸ್ವಯೋಗ್ಯತಾನುಸಾರ ಮಾಡಿಸಿ ಅಳೆಸಿ, ಸಾಧನೆ ಮುಗಿಸಿ ಕೊಳಗಗಳನ್ನು - ಜನ್ಮಗಳನ್ನು ನಿಲ್ಲಿಸಿ ಕಿಲಬು-ತೆಗೆದು ಅಂದರೆ ಲಿಂಗಭಂಗ ಮಾಡಿ ಸದ್ಗತಿ ಕೊಡುತ್ತಾನೆ.


ಇಲ್ಲ ತನಗೆಂದು ಸುಳ್ಳು ಮಾತನಾಡಿದರೆ 


ಎಲ್ಲವನು ಕಸಗೊಂಬ ಕಳ್ಳ ದೊರೆಗೆ |೧|



ಶರೀರ ಕೊಟ್ಟಿದ್ದಾನೆ. ಬುದ್ಧಿ, ಆರೋಗ್ಯ, ಆಯುಷ್ಯ, ಸಂಪತ್ತು ಕೊಟ್ಟಿದ್ದಾನೆ. ಇಷ್ಟಾದರೂ ಸಾಧನೆಗೆ ತನ್ನಲ್ಲಿ ಎಷ್ಟೂ ಇಲ್ಲವೆಂದ. ಸುಳ್ಳು ಮಾತನಾಡಿದ. ಇದ್ದೆಲ್ಲವನ್ನೂ ಕಸಿದುಕೊಳ್ಳುತ್ತಾನೆ. 


ಉಣಲು ತನಗುಂಟು, ಹರಿಗೆ ಸಮರ್ಪಿಸಲು ಇಲ್ಲ ಎಂದರೆ ಎಲ್ಲ ಇಲ್ಲದಂತೆ ಮಾಡುತ್ತಾನೆ. 


ಸುಳ್ಳು ಸೇರನು ನಮ್ಮ ಕಳ್ಳ ದೊರೆ –


ನಮ್ಮ ಸ್ವಾಮಿ ಪರಮಾತ್ಮನಿಗೆ ಸುಳ್ಳು ಸೇರದು. ಚೋರತ್ವ ಸೊಗಸದು. ನಾನು ಸುಳ್ಳು ಆಡಿಲ್ಲ. ಕಳ್ಳತನ ಮಾಡಿಲ್ಲ ಎಂದು ಪ್ರತಿಜ್ಞೆ ಮಾಡಿ ಹೇಳಿದ್ದಾನೆ ನವನೀತ ಚೋರ ಶ್ರೀಕೃಷ್ಣ. ನಮ್ಮ ದೊರೆ ಪ್ರಸಿದ್ಧ ಕಳ್ಳ. ಯಾಕೆ? ʻಹರತಿ ಸರ್ವಸ್ಯ ಅಘಃʼ ಸಾತ್ವಿಕರ ಸರ್ವ ಪಾಪಗಳನ್ನು ಕದ್ದು ಉದ್ಧರಿಸುತ್ತಾನೆ.


ಸುಳ್ಳು ಹೇಳಿದರೆ –


ಈ ಜಗತ್ತು ಸುಳ್ಳು ಎಂದು ಸುಳ್ಳು ಹೇಳಿದರೆ ಸೇರನು ನಮ್ಮ ಸ್ವಾಮಿ. 



ತನ್ನ ನೋಡುವೆನೆಂದು ಮುನ್ನೂರ ಗಾವುದ ಬಂದು


ತನ್ನ ಗುಡಿಯಾ ಪೊಕ್ಕ ಜನರಿಗೆಲ್ಲಾ 


ಹೊನ್ನು ಹಣ ಕಸಿದುಕೊಂಡು ತನ್ನ ದರುಶನ ಕೊಡದೆ


ಬೆನ್ನೊಡೆಯ ಹೊಡೆಸುವ ಅನ್ಯಾಯಕಾರಿಗೆ |೨|


ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರು ಎರಡು ವಿಧ. ರಾಜಸರು. ಮತ್ತೆ ಸಾತ್ವಿಕರು.


ಇಬ್ಬರೂ ಬಹುದೂರ ನೂರಾರು ಗಾವುದ ನಡೆದು ಬಂದವರು.


ಒಬ್ಬರು ನಾನು ವೆಂಕಪ್ಪನನ್ನು ಕಂಡೇ ಬರುತ್ತೇನೆ. ಭಕ್ತಿ ಕಡಿಮೆ. ಅಪಕ್ವತೆ. ಕೊಂಚ ಹಮ್ಮು ಬಿಮ್ಮು. ನನಗೆ ದರ್ಶನ ಕೊಡದೇ ಏನು? ಭ್ರಮೆ. ರಾಜಸರು. ಗುಡಿಗೆ ಬಂದ. ವೆಂಕಪ್ಪ ನಕ್ಕ. ಹರಕೆ ಎಂದ. ಸಂಪತ್ತು ಹುಂಡಿಗೆ ಹಾಕಿಸಿಕೊಂಡ. ತಲೆ ಕೂದಲನ್ನೂ ಬಿಡಲಿಲ್ಲ. ಎಲ್ಲ ಕಸಗೊಂಡ. ಅಷ್ಟರಲ್ಲಿ ಮುಂದೆ ದುಗಿಸಿದರು. ದರ್ಶನ ಸಿಕ್ಕಿತೋ ಇಲ್ಲೋ, ಬೆನ್ನಿಗೆ ಬಿತ್ತು. ಹೊರ ಬಂದಿದ್ದ. ಏನರ್ಥ? - ಇನ್ನಷ್ಟು ಪಕ್ವವಾಗಿ ಬಾ. ಉದ್ಧರಿಸುತ್ತೇನೆ ಎಂದ.


ಇನ್ನೊಬ್ಬ ಜ್ಞಾನಿ. ಭಕ್ತಿಯಿಂದ ಬಾಗಿದ್ದ. ತತ್ವಜ್ಞಾನ ಅರಿತಿದ್ದ. ಪಕ್ವ. ಸಾತ್ವಿಕ. ನಿನ್ನ ದರ್ಶನ. ನೀನು ಕೊಟ್ಟರೆ ಉಂಟು. ಇಲ್ಲದಿರೆ ಇಲ್ಲ. ನಿನ್ನವನು ನಾನು ಎಂದ. ಬಂದ. ಶ್ರೀನಿವಾಸ ನಸುನಕ್ಕ. ಹರಕೆ ಎಂದ. ಎಲ್ಲ ಕಸಗೊಂಡ.


ಏನೇನು ಕಸಗೊಂಡ? ಸಾತ್ವಿಕನ ಪಾಪಾದಿ ಕರ್ಮಗಳ ಅಪಹರಿಸಿದ. ಇಲ್ಲೊಂದು ದರ್ಶನ. ಬಿಡು. ನಿನ್ನ ಹೃದಯಗುಹೆಯಲ್ಲಿ ದರ್ಶನ ಕೊಡುವೆ ಎಂದ. ಕೈ ಹಿಡಿದು ಎತ್ತಿದ. ಉದ್ಧರಿಸಿದ. 


ನೋಡಲು ಅನ್ಯಾಯ. ಅನ್ಯಾಯಕಾರಿ. ಎಲ್ಲ ಕಸಗೊಂಡ. ಕಳಿಸಿದ. ಆದರೆ ಅದು ಉದ್ಧಾರಕ್ಕಾಗಿ. ನಿಜನ್ಯಾಯ. ನ್ಯಾಯಕಾರಿʼ ನ್ಯಾಯದ ದೊರೆ. ಧರ್ಮದ ಅಧ್ಯಕ್ಷ.


ಇಂಥ ಭಗವಂತ ನಮಗೆ ಮಂಗಲ ಮಾಡಲಿ. ಜಯ ಕೊಡಲಿ.


ಗಿಡ್ಡಹಾರವನಾಗಿ ಒಡ್ಡಿ ದಾನ ಬೇಡಿ ದುಡ್ಡುಕಾಸುಗಳಿಗೆ ಕೈ ನೀಡಿ


ಮೇಲಿನ ನುಡಿಗೆ ಬೆಂಬಲವಾಗಿದೆ ಈ ನುಡಿ. ಸಾತ್ವಿಕರ ಉದ್ಧರಿಸಿದ ದೃಷ್ಟಾಂತ ಸಾರುತ್ತಾರೆ. ಗಿಡ್ಡ ಹಾರವನಾಗಿ – ವಾಮನ ಅವತಾರ ತಾಳಿದ ಸ್ವಾಮಿ. ಬಲಿಯ ಎದರು ಕೈ ಒಡ್ಡಿದ. ಮೂರುಪಾದ ನೆಲ ಬೇಡಿದ. ಮೂರುಲೋಕ ಅಳೆದ. ಏನೂ ಬಿಡಲಿಲ್ಲ. ಎಲ್ಲ ಕಸಿದುಕೊಂಡ ಬಲಿಯಿಂದ. ಯಾಕೆ? ಬಲಿಯ ಉದ್ಧರಿಸಲು. ಕಸಿದುಕೊಂಡು ಹಿಡಿಸಲಾರದಷ್ಟು ಕೊಟ್ಟ. ಪಾತಾಳರಾಜ್ಯ ಕೊಟ್ಟ. ಸಿರಿಸಂಪತ್ತು ಕೊಟ್ಟ. ಕೊನೆಗೆ ತನ್ನನ್ನೇ ಇಟ್ಟುಕೊಟ್ಟ. ಇನ್ನೇನು? ಇವನ ಪೋಲ್ವ ಕರುಣಿಗಳುಂಟೇ ಜಗದೊಳು?


ಚಿಕ್ಕ ವಾಮನನಾಗುತ್ತಾನೆ. ಸಾತ್ವಿಕರ ಸಾಧನೆ ಕರ್ಮಗಳನು ಕೈ ಒಡ್ಡಿ ಸ್ವೀಕರಿಸುತ್ತಾನೆ. ತ್ರಿವಿಕ್ರಮನಾಗಿ ಬೃಹದ್ ಫಲ ಕೊಡುತ್ತಾನೆ. ಇದು ಶ್ರೀನಿವಾಸನ ಕರುಣೆ.


ಅಡ್ಡಬಿದ್ದ ಜನರ ವಿಡ್ಡೂರಗಳ ಕಳೆದು ದೊಡ್ಡವರ ಮಾಳ್ಪ ಸಿರಿವಿಜಯವಿಠ್ಠಲಗೆ|೩| 


ಅಡ್ಡಬಿದ್ದ ಜನರು – ಶರಣಾಗತರಾದ ಭಕ್ತರು. ತನ್ನ ಹೊಣೆ ಅವರ ರಕ್ಷಣೆ ಎನ್ನುತ್ತಾನೆ. ಅವರ ವಿಘ್ನ ನಾಶ ಮಾಡುತ್ತಾನೆ. ರಕ್ಷಿಸುತ್ತಾನೆ. ಉದ್ಧರಿಸುತ್ತಾನೆ.


ಮಾಡಲಿಲ್ಲವೇ – ಚಿಕ್ಕಬಾಲಕರು ಧ್ರುವ, ಪ್ರಲ್ಹಾದ. ನಂಬಿದ್ದು, ಶರಣಾಗಿದ್ದು ಶ್ರೀಹರಿಗೆ. ಬಂದ ಬಹು ಆಪತ್ತು ನಿವಾರಿಸಿದ. ರಕ್ಷಿಸಿದ. ಎತ್ತಿಹಿಡಿದ. ದೊಡ್ಡವರ ಮಾಡಿದ. ಉದ್ಧರಿಸಿದ. ಗಜರಾಜ ಮೊಸಳೆ ಬಾಯಿಗೆ ಸಿಕ್ಕ. ಭಕ್ತಿಲಿ ಹರಿಗೆ ಶರಣಾದ. ವಿಷ್ಣು ಭರದಿ ಬಂದ. ಚಕ್ರದಿ ನಕ್ರನ ತರೆದ. ಇಬ್ಬರಿಗೂ ಸದ್ಗತಿ ಕೊಟ್ಟು ದೊಡ್ಡವರ ಮಾಡಿದ. ಇಂಥ ನೂರಾರು ದೃಷ್ಟಾಂತಗಳು.


ಇಂಥ ಮಹಾಪ್ರಭು ನಮ್ಮ ವಿಜಯವಿಠ್ಠಲರೇಯ. ಜಯ ಮಂಗಳಂ. – ಅಜಿತ. ಅಜೇಯ. ನಿತ್ಯ ಜಯಶಾಲಿ. ಶುಭಮಂಗಳಂ. - ಶುಭದಾಯಕ. ಸರ್ವರಿಗೂ ಮಂಳಕರ. ಎಂದು ಆರಾಧಿಸೋಣ. ಅವನ ಮಂಗಳ ಅನುಗ್ರಹ ಪಡೆಯೋಣ. ಭವದಿ ಜಯ ಪಡೆಯೋಣ. ಶಾಶ್ವತ ಶುಭ – ಸುಖ – ಪರಮಪುರುಷಾರ್ಥಕ್ಕೆ ಸಾಧನೆ ಮಾಡೋಣ. ಎನ್ನುತ್ತಾರೆ ದಾಸವರೇಣ್ಯ ವಿಜಯದಾಸರು.

ಡಾ ವಿಜಯೇಂದ್ರ ದೇಸಾಯಿ.

ಶ್ರೀಕೃಷ್ಣಾರ್ಪಣಮಸ್ತು.

***


ತುಂಬಾ ಅದ್ಭುತವಾಗಿ ನಮ್ಮ ತಿರುಪತಿ ತಿಮ್ಮಪ್ಪನ ನಿಂದಾಸ್ತುತಿಯನ್ನು .......

ಮಂಗಳ ಜಯಮಂಗಳ ಶುಭಮಂಗಳ

ನಿತ್ಯಮಂಗಳ 

ಮಂಗಲಾನಾಂ ಚ ಮಂಗಲಂ

ಎಂದು ಸಾರಿ ಸಾರಿ ಹೇಳುವ ಮೂಲಕ ನಮಗೆ ಮಂಗಳವನ್ನುಂಟು ಮಾಡು

ನಮ್ಮಲ್ಲಿರುವ ಅರಿಷಡ್ಗುಣಗಳನ್ನು 

ಅಷ್ಟಮದಗಳನ್ನು ನಾನು ನನ್ನದು ಎಂಬ ಅಹಂಕಾರವನ್ನು

ಎಲ್ಲವನ್ನೂ ಯಥಾಯೋಗ್ಯತಾನುಸಾರ ಕಿತ್ತಿಬಿಸಾಕಿ ಜ್ಞಾನಭಕ್ತ್ಯಾದಿಗಳನ್ನೂ ಯೋಗ್ಯತಾನುಸಾರವೇ ಕರುಣಿಸುವ ದ್ವಾರಾ ಅಹಂಕಾರವನ್ನು ಖಂಡಿಸಿ 

ತಲೆಯನ್ನು ತಗ್ಗಿಸಿ ಬಗ್ಗಿಸಿ ಪೂರ್ಣ ಶರಣಾಗತಿಯನ್ನು ಹೊಂದುವಂತೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ನೀನು ನನ್ನನ್ನು ಉದ್ಧಾರ ಮಾಸರ್

ಅನ್ಯಥಾ ಶರಣಂ ನಾಸ್ತಿ

ತ್ವಮೇವ ಶರಣಂ ಮಮ

ದೀನನಾಗಿ ದೂನನಾಗಿ ಆರ್ತನಾಗಿ ಶರಣಾಗತನಾಗಿ ಬಂದಿರುವ ನನ್ನನ್ನು ಉಪೇಕ್ಷಿಸುವುದಾಗಲಿ ದರ್ಶನ ಕೊಡದೇ ಹಾಗೇ ಮರಳಿ ಕಳಿಸುವದಾಗಲಿ ದಯವಿಟ್ಟು ಮಾಡಬ್ಯಾಡಾ ಅಂತ ಶ್ರೀ ವಿಜಯಪ್ರಭುಗಳು ( ದಾಸಾರ್ಯರು ಆಗಲೇ 

ಇಂದ್ರಿಯಗಳನ್ನು ಜಯಿಸುವುದರ ಮೂಲಕ

ಭಗವಂತನನ್ನು ಸಾಕ್ಷಾತ್ಕರಿಸಿಕೊಂಡಿದ್ದರು ವಿಜಯ ನಾಮ ಅನ್ವರ್ಥಕ ನಾಮವಾಗಿತ್ತು ಸಾರ್ಥಕವಾಗಿತ್ತು 

ನಮ್ಮ ಪರವಾಗಿ

ಪರಿಪರಿಯಾಗಿ ಪ್ರಾರ್ಥಿಸಿಕೊಂಡಿದ್ದಾರೆ

ನಿನ್ನ ದರ್ಶನಕ್ಕಾಗಿ ಬರುವ ಮೊದಲೇ ನೀನು ನನಗೆ ಇಂದ್ರಿಯಗಳ ಮೇಲೆ ಹತೋಟಿ ಸಾಧಿಸುವಂತೆ ಅನುಗ್ರಹಿಸು

 ನಿನ್ನ ದರ್ಶನ ಹೊರತಾಗಿ ನಿನ್ನ ಭಕ್ತರ ದರ್ಶನ ಭಾಗ್ಯವೂ ಪ್ರಾಪ್ತಿಯಾಗುವಂತೆ ಕರಣಿಸು

ಅಂದ್ರೆ ವಿಷ್ಣು-ವೈಷ್ಣವರ

ಸೇವೆ ಒಂದೇ ಬಾರಿಗೆ ಆಗುವಂತಾಗಬೇಕು

ಇಂದಿರೇಶ ನಿನ್ನದೊಂದೇ ಕ್ರಿಯಾ ದ್ವಂದ್ವವಾಯಿತು

ನಿನ್ನ ಕಾರುಣ್ಯಾತಿಶಯ ಅನ್ನೋ ಒಂದೇ ಕ್ರಿಯಾ ಭಗವಂತನ ಭಗವದ್ಭಕ್ತರ ದರ್ಶನವಾಗುವಂತಾಗಬೇಕು

ಹರಿ ನೈವೇದ್ಯಕೆ ಹರಿವೆ ಸೊಪ್ಪು

ಮಕ್ಕಳಿಗ್ಹಾಕಲು ಪಾಯಸ ತುಪ್ಪ

ಪುರಂದರ ವಿಠಲನ ಪಾಡುತಿರಪ್ಪ

ಬೇಡಿದ ವರಗಳ ಕೊಡುವ ತಿಮ್ಮಪ್ಪ

ದಾಸಶ್ರೇಷ್ಠರಾದ ಶ್ರೀ ಮತ್ಪುರಂದರದಾಸಾರ್ಯರು

ತಮ್ಮ ಒಂದು ಕೃತಿಯಲ್ಲಿ ಮಾನವನಾಗಿ ಹುಟ್ಟಿದ ಮೇಲೆ

ಮನುಷ್ಯನ ಪ್ರತಿಯೊಂದು ಅಂಗವೂ ಕೂಡ ಭಗವತ್ಪರವಾಗಿರಬೇಕು

ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ಹೆಜ್ಜೆಹೆಜ್ಜೆಗೂ ಎಚ್ಚರಿಸಿದ್ದಾರೆ

ದಾಸಾರ್ಯರ ಪದಪದಗಳಲ್ಲೂ

ಅಕ್ಷರಾಕ್ಷರಗಳಲ್ಲೂ ಭಗವಂತನ ಸರ್ವೋತ್ತಮತ್ವ ಸರ್ವತಂತ್ರ ಸ್ವತಂತ್ರತ್ವ ಸರ್ವಜ್ಞತ್ವ ದೋಷದೂರತ್ವ ಕಾರುಣ್ಯಾತಿಶಯವನ್ನು ಹೊಂದಿರತಕ್ಕಂಥ ಬಹು ದೊಡ್ಡ ಗುಣ ಈ ಗುಣದ ಮುಂದೆ ಎಲ್ಲ ಗುಣಗಳೂ ಗೌಣವಾಗುವ 

ಅಭಿಪ್ರಾಯ ಅಷ್ಟು ಕರುಣಾಮಯಿ ಕಾರುಣ್ಯಸಿಂಧು ಕೃಪಾಸಿಂಧು ದಯಾಸಿಂಧು

ಆ ಒಂದು ಗುಣಾತಿಶಯದಿಂದಲೇ ಸುಜೀವರು ಸಾಧನ ಮಾರ್ಗದಲ್ಲಿರೋದು ಜನ್ಮಾಂತರಗಳ ಸಾಧನಾನಂತರದಲ್ಲಿ ಮಹಾಪ್ರಸಾದರೂಪದಲ್ಲಿ

ಮೋಕ್ಷ ವನ್ನೂ ಕೂಡ ಹೊಂದುವರು ಎಂಬುದರಲ್ಲಿ ಸಂಶಯವಿಲ್ಲ ...

ಭಗವಂತನ ಕಾರುಣ್ಯಕ್ಕೆ ಎಣೆಯೇ ಇಲ್ಲ

ನಮ್ಮ ತಿಮ್ಮಪ್ಪನ ಸೇವಾರೂಪದಲ್ಲಿ ಕೇವಲ ವಾಕ್ ಶುದ್ಧಿಗಾಗಿ ಒಂದೆರಡು ವಾಕ್ ಕುಸುಮಗಳನ್ನು ಅವನ ಪದತಲದಲ್ಲಿಪ್ರಸಾದಾಚರ್ಯಮಿ ನಿಂದೇ ಇದೆಲ್ಲವೂ

 ‌(received in WhatsApp)

***