Audio by Vidwan Sumukh Moudgalya
ತಂದೆ ಶ್ರೀಪತಿವಿಟ್ಠಲದಾಸಾರ್ಯ ವಿರಚಿತ
(ಶ್ರೀಪತಿವಿಟ್ಠಲದಾಸರಿಂದ ಅಂಕಿತೋಪದೇಶ. ಕಾಲ-1830)
ಶ್ರೀ ವಾದಿರಾಜಗುರುಸಾರ್ವಭೌಮರ ಸ್ತೋತ್ರ ಸುಳಾದಿ
ರಾಗ : ಭೈರವಿ
ಧೃವತಾಳ
ವಾದಿರಾಜ ಗುರುವೇ ಭಕುತಿಯಿಂದಲಿ ನಿಮ್ಮ
ಪಾದ ಕಂಜವನು ನಂಬಿದ ಮಾನವ
ಈ ಧರೆಯೊಳಗೆಲ್ಲಾ ವೈರಾಗ್ಯ ಭಕ್ತಿ ಜ್ಞಾ-
ನಾದಿಗಳಿಂದ ಪರಿಪೂರ್ಣನಾಗಿದ್ದು ಮಹ
ಮೋದ ಪಡುವನು ಸಕಲದೊಳಗ-
ಗಾಧ ಸತ್ಕೀರ್ತಿಯನು ಪಡೆದು ನಿತ್ಯ
ಭೂದೇವರಿಂದ ಬಲು ಪೂಜೆಗೊಂಡ ನಂತರ
ಆದಿತೇಯರೊಳು ಮಾನ್ಯನಾಗುವ
ಮೇದಿನಿಯೊಳು ನಿಮ್ಮ ದಯ ಮಾತ್ರ ಪಡೆಯಲು
ಮಾಧವರನು ಕರ ಬಿಡದೆ ಪೊರೆವ
ಮೇಧಾವಿ ತಂದೆಶ್ರೀಪತಿವಿಟ್ಠಲನ
ಪಾದಾರಾಧಕರ ನಂಬಿದವರಿಗೆ ಸುರಧೇನು ॥೧॥
ಮಟ್ಟತಾಳ
ಸುರುಚಿರ ಸತ್ಸೋದೆಪುರದಲ್ಲಿ ನೆಲೆಸಿದ್ದು
ವರ ಧವಳಗಂಗಾದಿ ತೀರ್ಥಗಳನು
ಧರೆಯಲ್ಲಿ ವಿರಚಿಸಿ ಮಹಮಹಿಮೆಯನಿಟ್ಟು
ಹರ ಮಾರುತಿ ಗೋಪಾಲಕೃಷ್ಣರನು ಸ್ಥಾಪಿಸಿ ಮೋದದಲಿ
ವರ ಕ್ರೂರ ನಾರಾಯಣ ಭೂತರ ಕೈಲಿ
ಬದರಿಯಿಂದಲಿ ತ್ರಿವಿಕ್ರಮ ದೇವರನು
ಅರೆಘಳಿಗೆಯೊಳಗೆ ರಥದಿಸಹಿತ
ತರಿಸಿ ಪ್ರತಿಷ್ಠೆಯನು ಮಾಡಿದ ಧೀರ
ಪರಮಪುರುಷ ತಂದೆಶ್ರೀಪತಿವಿಟ್ಠಲನ
ವರಕರುಣಾ ಪಾತ್ರ ವಿದ್ವಜ್ಜನ ಮಿತ್ರ ॥೨॥
ತ್ರಿಪುಟತಾಳ
ವಾಗೀಶತೀರ್ಥರ ಕರಪದ್ಮೋದ್ಭವರೆ ವೈ-
ರಾಗ್ಯಾದಿಗುಣದಿಂದ ಪರಿಪೂರ್ಣನೆ
ಯೋಗಿ ಜನರಿಗೆ ಅತಿ ಪ್ರಿಯರೆ ತ್ವತ್ಪಾದ
ಹೇಗೆ ಕಾಂಬುವೆನಾ ಇನ್ಹ್ಯಾಂಗೆ ಕಾಂಬುವೆ
ಬಾಗಿ ಬೇಡುವೆನಾ ಇನ್ನೊಂದು ಭಾಗ್ಯವನೊಲ್ಲೆ
ಹೇಗಾದರೂ ನಿಮ್ಮ ಪಾದಯುಗಳವ
ಬೇಗದಿಂದಲಿ ತೋರಿ ಸಂಸಾರವೆಂಬಂಥ
ಸಾಗರದಿಂದಲಿ ಕಡೆಹಾಯಿಸೋ
ಶ್ರೀಗುರು ತಂದೆಶ್ರೀಪತಿವಿಟ್ಠಲ
ಯೋಗದಿಂದಲಿ ಭಜಿಪ ಸುಮತಿ ಪಾಲಿಸೊ ಮುನಿಪ ॥೩॥
ಅಟ್ಟತಾಳ
ನಿಷ್ಠೆಯಿಂದಲಿ ಮನಮುಟ್ಟಿ ನಿಮ್ಮ ಪಾದ
ಘಟ್ಯಾಗಿ ಭಜಿಸಲು ಇಷ್ಟ ಪ್ರಾಪ್ತವು ಅ-
ನಿಷ್ಟವು ಪರಿಹಾರ ಕುಷ್ಠಿಯಾದವ ಬಲು
ಶಿಷ್ಟನೆಂದೆನಿಸುವ ಕಷ್ಟ ದಾರಿದ್ರ್ಯವು
ಮುಟ್ಟವು ಕೇಳು ಕಣ್ಣು ಮಿಟ್ಟಿಸದಿದ್ದರು
ದೃಷ್ಟಿವಂತನಾಗುವ ಹುಟ್ಟು ಮೂಕನು-
ತ್ಕೃಷ್ಟ ಮಾತಾಡುವ ಪುಟ್ಟುವುದು ಜ್ಞಾನ-
ದುಷ್ಟ ಗ್ರಹಾದಿಗಳು ನಷ್ಟವಾಗುವವು
ಶ್ರೇಷ್ಠ ಮಾರುತಿ ತಂದೆಶ್ರೀಪತಿವಿಟ್ಠಲನ
ಪುಟ್ಟುವುದಕೆ ನಿಮ್ಮ ದಯ ಮೊದಲಲಿ ಬೇಕು ॥೪॥
ಆದಿತಾಳ
ಪರಮಹಂಸರೆ ನಿಮ್ಮ ಸುರುಚಿರ ಮಹಿಮೆಯನು
ಧರೆಯೊಳು ಸುಜನರಾಡುವುದು ನಿಜವೆಂದು ನಾ
ಮರೆಯ ಹೊಕ್ಕೆ ನಿಮ್ಮ ಅರೆಮನ ಮಾಡದೆಲೆ
ಪರಮ ರಜತಪೀಠ ಪುರದಲ್ಲಿ ನೆಲೆಸಿಪ್ಪ
ಹರಿಯ ಪಾದವ ತೋರಿ , ತರುವಾಯ ನಿಮ್ಮ ಪಾದ
ಸರಸಿಜವ ತೋರಿ ಎನ್ನ ಕರಕರಿ ಮತಿಯನ್ನು
ಪರಿಹಾರ ಮಾಡಿ ಬೇಗ ಪರಮ ಭಕುತಿ ಜ್ಞಾನ
ವಿರಕ್ತಿಯನ್ನು ಕೊಟ್ಟು ಪೊರೆವುದೋ ನಿಮ್ಮ ಪಾದ
ಶರಣರೊಳಾಡಿಸಿರಿ ಗುರುವೆ ನೀ ಮರೆಯದಲೆ
ಹರುಷವೀವುದು ತಂದೆಶ್ರೀಪತಿವಿಟ್ಠಲನ
ನೆರ ನಂಬುವಂತೆ ಮಾಡೊ ಅರೆಮನ ಮಾಡದಲೆ ॥೫॥
ಜತೆ
ತಂದೆಶ್ರೀಪತಿವಿಟ್ಠಲ ಪ್ರೀಯ ವಾದಿರಾ-
ಜೇಂದ್ರಾರ್ಯ ಶ್ರೀಮದಾನಂದತೀರ್ಥ ಮುಂದೆ ನಿಜ ॥೬॥
********