Showing posts with label ಏನೆಂದು ಕಾಣೆನು ಎನಗುಸುರು ಹರಿಯೆ others. Show all posts
Showing posts with label ಏನೆಂದು ಕಾಣೆನು ಎನಗುಸುರು ಹರಿಯೆ others. Show all posts

Friday, 27 December 2019

ಏನೆಂದು ಕಾಣೆನು ಎನಗುಸುರು ಹರಿಯೆ others

ರಾಗ ಕಲ್ಯಾಣಿ ಝಂಪೆತಾಳ

ಏನೆಂದು ಕಾಣೆನು ಎನಗುಸುರು ಹರಿಯೆ

ಈ ನಾರಿಗಳ ರೂಪು ಚೆಲುವೆಂದು ವರ್ಣಿಪರು ||ಪ||

ಹುಳುಕು ಮೋರೆಯ ಕಂಡು ಕುಮುದಬಾಂಧವನೆಂದು

ಕೊಳಕುಮೂಗನು ಎಳ್ಳಿನರಳೆನ್ನುತ
ಪಳಿತ ಕೇಶಗಳನು ಚೂರ್ಣ ಕುಂತಳವೆನುತ
ನಳಿನನಾಭನೆ ಕವಿಗಳೆಂತು ವರ್ಣಿಪರೋ ||೧||

ಉಚ್ಚೆಯಾ ದ್ವಾರವನು ಮದನಮಂದಿರವೆಂದು

ತುಚ್ಛವಾದಂಡ ಕರಿಕುಂಭವೆಂದು
ಮಚ್ಚರದ ಹೃದಯವನು ಕುಸುಮಕೋಮಲವೆಂದು
ಇಚ್ಛೆ ಬಂದಂತೆ ಕವಿಗಳು ಪೇಳ್ವರಯ್ಯ ||೨||

ಅಡಬಲದ ಗ್ರಂಥಿಯನು ಕಲಶಕುಚವೆಂಬರು

ಕಡು ಒರಟು ಪಾಣಿಯನು ತಳಿರೆಂಬರು
ತಡಬಡುವ ಡೊಂಕು ಕಾಲನು ಕಮಲವೆಂದೆನುತ
ಕಡುಪಾಪಿ ಕಬ್ಬಿಗರು ಬಣ್ಣಿಸುವರಯ್ಯ ||೩||

ತೊಗಲು ಮಾಂಸಗಳಿಂದ ಕೂಡಿರುವ ಕಾಯವನು

ಬೊಗಳುವರು ಬಂಗಾರಬಳ್ಳಿಯೆಂದು
ಜಗವು ಎಲ್ಲವು ಇವರ ಕೆಟ್ಟ ಕವಿತೆಯ ಕೇಳಿ
ಅಗಲದವರಲಿ ಬಿದ್ದು ಮುಳುಗಿ ಪೋಗುವುದು ||೪||

ಮಾಯಕಾತಿಯರಿವರ ಕಂಡು ಭಯಗೊಳ್ಳುವೆನು

ಕಾಯಜನ ಪಿತನೆ ನೀ ಸಲಹು ಎನ್ನ
ಶ್ರೀ ಅರಸ ವೈಕುಂಠಪತಿಯೆ ನಿನ್ನಯ ಚರಣ
ತೋಯಜವ ನಂಬಿದೆನು ಕೈಯ ಬಿಡಬೇಡ ||೫||
*******