ಮತ್ತೆ ಮತ್ತೇ ಸಿಗದು ಇಂಥಹಣ್ಣೂ
ಕಿತ್ತಿಕೊಳ್ಳಿರಿ ನಿಮಗ ಸಿಕ್ಕಷ್ಟು ಹಣ್ಣೂ ॥ ಪಲ್ಲವೀ ॥
ಮುತ್ತು ರತ್ನಗಳಿತ್ತು ಬೆಲೆಯಕಟ್ಟುವದಲ್ಲ
ಮತ್ತೆ ಅದಕಿಂತ ಬೆಲೆ ಹೆಚ್ಚಾದುದೂ
ಹತ್ತುನೂರೂಸಾವಿರದಲೊಂದಾದರೂ
ಕಿತ್ತಿತಿಂದೂ ರುಚಿಯ ನೋಡಿರಣ್ಣಗಳಾ ॥ ೧ ॥
ಸಸಿಯಾಗಿ ಗಿಡವಾಗಿ ಮರವಾಗಿ ಹೂವಾಗಿ
ಕಸರು ಪಿಂಜೆ ಕಾಯಾಗಿ ಹಣ್ಣಾಗೀ
ರಸುತುಂಬಿದ್ಹಣ್ಣುಗಳಲೊಂದಾದರೂ ತಿಂದು
ಹಸಿವೆ ಅಡಗಿಸಿಕೊಳ್ಳಿರಕ್ಕಗಳಿರಾ ॥ ೨ ॥
ಭಕ್ತಿಬೀಜವ ಬಿತ್ತಿ ಜ್ಞಾನದಾ ನೀರೆರದು
ಸುತ್ತಲೂ ವೈರಾಗ್ಯ ಕಾವಲಿರಿಸೀ
ಹತ್ತುನೂರೂ ಸಾವಿರವಾಗಿ ಬೆಳೆಸಿರುವ
ಭಕ್ತವತ್ಸಲ ವೆಂಕಟರಮಣನಾ ನಾಮಾ ॥ ೩ ॥
***
ಹರಿನಾಮದ ಹಣ್ಣು
ಶ್ರೀ ವೇದವ್ಯಾಸದೇವರಿಂದ ರಚಿತವಾದ ಶಾಸ್ತ್ರ, ಅದರ ವ್ಯಾಖ್ಯಾನವಾಗಿ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ವ್ಯಾಖ್ಯಾನ, ಅದಕ್ಕೆ ಶ್ರೀಮಟ್ಟೀಕಾಕೃತ್ಪಾದರ ವ್ಯಾಖ್ಯಾನ, ಶ್ರೀ ವಿಜಯಧ್ವಜತೀರ್ಥರ, ಮತ್ತೆ ಶ್ರೀಮಚ್ಚಂದ್ರಿಕಾಚಾರ್ಯರ, ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಎಲ್ಲ ಮಹಾನುಭಾವರ ವ್ಯಾಖ್ಯಾನಗಳಿಂದ ಭರಿತವಾದ ನಮ್ಮ ಮಾಧ್ವಶಾಸ್ತ್ರವನ್ನು ಅಧ್ಯಯನ ಮಾಡಲು ಒಂದು ಜೀವನವಂತೂ ಸಾಲುವುದಿಲ್ಲ. ಅವೆಲ್ಲವನ್ನೂ ಓದಲು ಯೋಗ್ಯತೆ ಇಲ್ಲದವರಿಗೆ, ಅಶಕ್ತರಿಗೆ ವರವಾಗಿ ಸಿಕ್ಕಿದ್ದು ಹರಿದಾಸಸಾಹಿತ್ಯ. ಶಾಸ್ತ್ರದ ಸಾರವನ್ನೂ ಪರಮಾತ್ಮನ ಮಾಹತ್ಮ್ಯವನ್ನು ಸರಳಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಸಿಕ್ಕಿದ ದಾಸರ ಪದಗಳನ್ನು ಹಾಡುವುದೆಂದರೇ ಭಗವಂತನ ಸಮೀಪದಲ್ಲಿರುವುದು ಎಂದರ್ಥ.
ನಮ್ಮ ಶ್ರೇಷ್ಠ ಹರಿದಾಸ ಪರಂಪರೆಯಲ್ಲಿ ದಾಸರೆಲ್ಲರೂ ಪರಮಾತ್ಮನನ್ನು ಹಣ್ಣಿನಿಂದ, ಮಿಠಾಯಿಯಿಂದ, ಮುತ್ತುಗಳಿಂದ, ಪಂಚಾಮೃತಕ್ಕಿಂತಲೂ ಮಿಗಿಲಾಗಿ ರುಚಿಯವನು ಅಂತಲೂ ಮತ್ತಿತರ ಉಪಮಾನಗಳಿಂದ ಹೋಲಿಸಿದ್ದು ಕಾಣ್ತಿರ್ತೇವೆ.
ಹಣ್ಣು ಬಂದಿದೆ ಕೊಳ್ಳಿರೊ
ಮುತ್ತು ಬಂದಿದೆ ಕೇರಿಗೆ
ಮಧುರವು ಮಧುರಾನಾಥನ ನಾಮವು ದಧಿ ಮಧು ದ್ರಾಕ್ಷಾ ಸುಧೆರಸಗಳಿಗಿಂತ
ಹೀಗೆಲ್ಲ ಕರೆದು ಸುಖಪಟ್ಟದ್ದು ಕಂಡಿದ್ದೇವೆ..
ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನುಮನವೆ
ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ॥
ಎನ್ನುವ ಪದದಲ್ಲಿ ನಮ್ಮ ನಾರದಾವತಾರಿಗಳಾದ ಶ್ರೀಮತ್ಪುರಂದರದಾಸಾರ್ಯರು ಹರಿನಾಮವನ್ನ ಬೀಜದ ಜೊತೆಗೆ ಹೋಲಿಸಿದ್ದು ಕಾಣುತ್ತೇವೆ. ಆ ಹರಿನಾಮದ ಬೀಜ ಹೇಗೆ ಮೊಳಕೆಹೊಡೆಯಿತು, ಹೇಗೆ ಚಿಗುರಿತು, ಯಾವರೀತಿಯಿಂದ ಫಲಪ್ರದವಾಯಿತು ಎನ್ನುವುದನ್ನು ಶ್ರೀಮತ್ಪುರಂದರದಾಸಾರ್ಯರು ಅದ್ಭುತವಾಗಿ ತಿಳಿಸಿ ನಮಗೆ ಹರಿನಾಮದ ಮಾಹಾತ್ಮ್ಯವನ್ನು ತೋರಿಸಿ ಆ ನಾಮದ ಬೀಜವನ್ನು ಮನಸೆಂಬ ಹೊಲದಲ್ಲಿ ಬಿತ್ತಿಕೊಳ್ಳಿ ಎಂದು ಹೇಳಿಕೊಟ್ಟಿದ್ದಾರೆ.
ಹಾಗೆಯೇ ನಮ್ಮ ಶ್ರೀ ಕನಕಪ್ಪ ಸಹ ಹರಿನಾಮದರಗಿಣಿಯು ಹಾರುತಿದೆ ಜಗದಿ ಎಂದು ಹರಿನಾಮವನ್ನು ಗಿಳಿಯ ಜೊತೆ ಹೋಲಿಸಿದ್ದುಂಟು.
ಹೀಗೆ ಅವರ ಹಾದಿಯಲ್ಲೇ ನಡೆದು ಬಂದ ಅನೇಕ ಹಿರಿಯ ದಾಸಾರ್ಯರ ಪದಗಳನ್ನು ನಾವು ಕಾಣುತ್ತೇವೆ.
ಮತ್ತೆ ಮತ್ತೇ ಸಿಗದು ಇಂಥಹಣ್ಣೂ
ಕಿತ್ತಿಕೊಳ್ಳಿರಿ ನಿಮಗ ಸಿಕ್ಕಷ್ಟು ಹಣ್ಣೂ ॥ ಪಲ್ಲವೀ ॥
ಮುತ್ತು ರತ್ನಗಳಿತ್ತು ಬೆಲೆಯಕಟ್ಟುವದಲ್ಲ
ಮತ್ತೆ ಅದಕಿಂತ ಬೆಲೆ ಹೆಚ್ಚಾದುದೂ
ಹತ್ತುನೂರೂಸಾವಿರದಲೊಂದಾದರೂ
ಕಿತ್ತಿತಿಂದೂ ರುಚಿಯ ನೋಡಿರಣ್ಣಗಳಾ ॥ ೧ ॥
ಸಸಿಯಾಗಿ ಗಿಡವಾಗಿ ಮರವಾಗಿ ಹೂವಾಗಿ
ಕಸರು ಪಿಂಜೆ ಕಾಯಾಗಿ ಹಣ್ಣಾಗೀ
ರಸುತುಂಬಿದ್ಹಣ್ಣುಗಳಲೊಂದಾದರೂ ತಿಂದು
ಹಸಿವೆ ಅಡಗಿಸಿಕೊಳ್ಳಿರಕ್ಕಗಳಿರಾ ॥ ೨ ॥
ಭಕ್ತಿಬೀಜವ ಬಿತ್ತಿ ಜ್ಞಾನದಾ ನೀರೆರದು
ಸುತ್ತಲೂ ವೈರಾಗ್ಯ ಕಾವಲಿರಿಸೀ
ಹತ್ತುನೂರೂ ಸಾವಿರವಾಗಿ ಬೆಳೆಸಿರುವ
ಭಕ್ತವತ್ಸಲ ವೆಂಕಟರಮಣನಾ ನಾಮಾ ॥ ೩ ॥
ಹೀಗೆ ಹರಿನಾಮದ ಮಾಹಾತ್ಮ್ಯವನ್ನು ತಿಳಿಸಿದ ವೆಂಕಟರಮಣ ಎನ್ನುವ ಈ ಅಂಕಿತದ ಪದ *ಹರಿದಾಸಿ ತಾಯಿ ಕುಪ್ಪಮ್ಮನವರ ರಚನೆಯಾಗಿದೆ. ಪರಮವೈರಾಗ್ಯಶಾಲಿಯಾದ ಆ ಸಾಧ್ವೀಮಣಿ ಅನುಭವಿಸಿ ರಚಿಸಿದ ಕೃತಿಯಾಗಿದೆ ಎಂದು ಅವರ ಈ ರಚನೆಯಲ್ಲಿ ಎದ್ದುಕಾಣುತ್ತದೆ.
ಈ ಪದವೂ ನೋಡಿ ಎಷ್ಟು ಸೊಗಸಾಗಿದೆ. ಮತ್ತೆ ಮತ್ತೆ ಸಿಗದು ಇಂಥ ಹಣ್ಣು ಕಿತ್ತಿಕೊಳ್ಳಿರಿ ನಿಮಗೆ ಸಿಕ್ಕಷ್ಟು ಹಣ್ಣು ಎಂದು ಪಲ್ಲವಿಯಲ್ಲಿಯೇ ಕೃತಿಯ ಸಾರಾಂಶವನ್ನು ತಿಳಿಸಿಬಿಟ್ಟಿದ್ದಾರೆ..
ಹರಿನಾಮವೆಂಬಂತಹ ಹಣ್ಣಿನ ರುಚಿ ಈ ಮಾನವ ಜನ್ಮದಲ್ಲಿ ಮಾತ್ರವೇ ಸವಿಯಲು ಸಾಧ್ಯ. ಮತ್ತೆ ಬೇಕಾದರೆ ೮೪ ಲಕ್ಷ ಜೀವರಾಶಿಗಳನ್ನು ದಾಟಿಬಂದರೆ ಮಾತ್ರ ಉಂಟು ಇಲ್ಲದಿದ್ದರೆ ಇಲ್ಲ. ಅಲ್ಲವೆ?..
ಮೊದಲನೆಯ ನುಡಿಯಲ್ಲಿ ಈ ಹಣ್ಣು ಬೇಕಾದರೆ ಅದಕ್ಕೆ ಮುತ್ತು ರತ್ನಗಳಿಂದ ಬೆಲೆ ಕಟ್ಟಿ ಪಡಿಯೋಣ ಎಂದು ಯೋಚನೆ ಮಾಡೋದೂ ವ್ಯರ್ಥ ಪ್ರಯಾಸವೇ ಸರಿ. ಅವೆಲ್ಲದಕ್ಕಿಂತಲೂ ಹೆಚ್ಚಿನ ಬೆಲೆ ಈ ಹರಿನಾಮದ ಹಣ್ಣಿಗಿದೆ. ಒಂದುಸಲವಾದರೂ ರುಚಿ ನೋಡಿ. ರುಚಿ ನೋಡಿದವರಂತೂ ಈ ಹಣ್ಣನ್ನು ಮತ್ತೆ ಮತ್ತೆ ಸವಿಯಬೇಕೆಂತಲೇ ತವಕದಿಂದಿರುತ್ತಾರೆ ಎನ್ನುವ ವಿಷಯವನ್ನು ತಿಳಿಸುತ್ತಾ.. ಹರಿನಾಮದ ಮಾಧುರ್ಯವನ್ನು ಸವಿಯಬೇಕೇ ಹೊರತು ಅದಕ್ಕೆ ಬೆಲೆಕಟ್ಟಲಸಾಧ್ಯ ಎನ್ನುವುದನ್ನು ಹೇಳುತ್ತಿದ್ದಾರೆ.
ಮೂರನೆಯ ನುಡಿಯ ನಂತರ ಎರಡನೆಯ ನುಡಿ ಸ್ವಾರಸ್ಯ ಸಿಗುತ್ತದೆ ನೋಡಿ. ಮೂರನೆಯ ನುಡಿಯಿಂದ ಭಕ್ತಿಬೀಜವನ್ನು ಬಿತ್ತಿ ಅದಕ್ಕೆ ಜ್ಞಾನವೆಂಬ ನೀರನ್ನು ಎರೆದು ಮತ್ತೆ ಅದಕ್ಕೆ ಕಾವಲಾಗಿ ಅಂದರೆ ಆ ಜ್ಞಾನಕ್ಕೆ ಅಹಂಕಾರಾದಿಗಳು ತಾಕದಂತೆ ಸುತ್ತಲು ವೈರಾಗ್ಯವೆನ್ನುವ ಕಾವಲಿಯನ್ನು ಇರಿಸಬೇಕೆಂದು ಹೇಳುತ್ತಾರೆ.
ಅಂತಹ ಭಕ್ತವತ್ಸಲ ವೆಂಕಟರಮಣನ ನಾಮವೆನ್ನುವ ಈ ಹಣ್ಣು ಸಸಿಯಾಗಿದ್ದರೂ, ಗಿಡವಾಗಿ, ಮರವಾಗಿ ಅದರಲ್ಲಿ ಹುಟ್ಟಿದ ಹೂವಾಗಿ, ಕಸರುಪಿಂಜೆ, ಕಾಯಿ , ಹಣ್ಣಾಗಿ ಅದ್ಭುತವಾಗಿ ರಸತುಂಬಿದಾಗ ಅಂತಹ ಮಧುರವಾದ ಆ ಪರಮಾತ್ಮನ ನಾಮಗಳೆನ್ನುವ ಹಣ್ಣುಗಳಲ್ಲಿನ ಒಂದು ಹಣ್ಣಾದರೂ ತಿಂದು ನೋಡಿ. ನಿಮ್ಮ ಎಲ್ಲರೀತಿಯ ಹಸಿವೂ ಮಾಯವಾಗುತ್ತದೆ ಎಂದು ಹೇಳುತ್ತಾರೆ. ಹಸಿವು ಮಾಯಮಾಗುವುದೆಂದರೆ. ಜ್ಞಾನ ಭಕ್ತಿ ನೀಡುವುದರ ಮೂಲಕ ಮನಸಿಗೆ ತೃಪ್ತಿಯಾಗುವುದು ಎಂದರ್ಥ.
ಭಗವಂತನ್ನ ನಾಮವನ್ನು ರುಚಿಯಾದ ಹಣ್ಣಿನೊಂದಿಗೆ ಹೋಲಿಸಿದ್ದಾರೆ ಇಲ್ಲಿ ಹರಿದಾಸಿ ತಾಯಿ ಕುಪ್ಪಮ್ಮನವರು.
ಎರಡನೆಯ ನುಡಿಯಲ್ಲಿ ವಿಶೇಷವಾಗಿ ರಸತುಂಬಿದ್ಹಣ್ಣುಗಳಲೊಂದು ಹಣ್ಣನ್ನಾದರೂ ತಿನ್ನೋಣ ಬನ್ನಿ ಅದರಿಂದ ಹಸಿವು ನೀಗುತ್ತದೆ ಎಂದು ಹೇಳುವುದಲ್ಲಿ ವಿಶೇಷವನ್ನು ತಿಳಿಸಿದ್ದಾರೆ.
ಪರಮಾತ್ಮನ ಗುಣಗಳು ಅನಂತವೆಂಬಂತೆಯೇ ಆತನ ನಾಮಗಳೂ ಅನಂತವೇ. ನಾವು ಸಹಸ್ರ, ಶತ ಎಂದು ಹೆಸರಿಸಿದ್ದಷ್ಟೇ ಹೊರತು ಸರ್ವ ಶಬ್ದ ವಾಚ್ಯನಾದ ಪರಮಾತ್ಮನ ನಾಮಗಳನ್ನು ಇಷ್ಟು ಸಂಖ್ಯ ಎಂದು ಹೇಳಲು ಸಾಧ್ಯವೆ? ಹಾಗೆಯೇ ಅನಂತನಾಮಗಳಲ್ಲಿ ಒಂದು ನಾಮವಾದರೂ ಸ್ಮರಿಸಿ, ಅದರ ರುಚಿಯನ್ನು ಸವಿಯಿರಿ ಎನ್ನುತ್ತಾರೆ.
ಹಳೆಯ ಕಾಲದಲ್ಲಿ ನಮ್ಮ ಹಿರಿಯರು ಪರಮಾತ್ಮನ ನಾಮಗಳನ್ನೇ ತಮ್ಮ ಮಕ್ಕಳಿಗೆ ಇಡುವ ಮೂಲಕ ಆ ಹೆಸರನ್ನು ಕರೆದಾಗೆಲ್ಲ ಪರಮಾತ್ಮನ, ಲಕ್ಷ್ಮೀದೇವಿಯರ, ದೇವತೆಗಳ, ಗುರುಗಳ ಸ್ಮರಣೆಯಾಗುತ್ತದಲ್ಲವೆಂದು ಯೋಚನೆ ಮಾಡಿ ಹೆಸರಿಸುತ್ತಿದ್ದರು. ಇದಕ್ಕೆ ಅಜಮಿಳನೇ ಸಾಕ್ಷಿ.
ಹಾಗೆಯೇ ನಾವು ಎದ್ದರೂ, ಕುಳಿತರೂ ಹರಿನಾಮದ ಜಪವನ್ನು ಮಾಡುತ್ತಲೇ ಇರ್ತೇವೆ. ಅಲ್ಲದೆ ಪರಮಾತ್ಮನ ನಾಮಗಳಲ್ಲಿ ಒಂದೊಂದು ನಾಮಕ್ಕೆ ಒಂದೊಂದು ವಿಶೇಷವಿದ್ದದೆ ಅನ್ನೋದು ಗೊತ್ತಿರುವ ವಿಷಯವೇ.
ನಾರಸಿಂಹ ನಾಮದ ಜಪದಿಂದ ಜ್ವರದಿಂದ ಮುಕ್ತರಾಗುತ್ತೇವೆ. ಧನ್ವಂತರೀ ರೂಪೀ ಪರಮಾತ್ಮನ ನಾಮದ ಜಪದಿಂದ ರೋಗಮುಕ್ತರಾಗುತ್ತೇವೆ. ಹಯಗ್ರೀವ ಹಯಗ್ರೀವ ಎಂದರೆ ಜ್ಞಾನವನ್ನು ಪಡೆಯುತ್ತೇವೆ. ಪುಂಡರೀಕಾಕ್ಷ ಎಂದರೆ ಪುನೀತರಾಗುತ್ತೇವೆ. ವಿಠ್ಠಲ ಎಂದರೆ ಹೃದ್ರೋಗಗಳಿಂದ ಮುಕ್ತರಾಗುತ್ತೇವೆ. ಕೃಷ್ಣಾ ಎಂದರೆ ಕಷ್ಟಗಳಿಂದ ಪಾರಾಗುತ್ತೇವೆ. ಹಾಗೆಯೇ ರುದ್ರದೇವರು ಪಾರ್ವತೀದೇವಿಯರಿಗೆ ತಿಳಿಸಿದ ರಾಮನಾಮದ ಮಾಹತ್ಮ್ಯವಂತೂ ಅನಂತವೇ ಸರಿ.... ಹೀಗೆ ಪರಮಾತ್ಮನ ಒಂದೊಂದು ನಾಮಕ್ಕೂ ಒಂದೊಂದು ವಿಶೇಷತೆ ಇದೆ. ಹಾಗಂತ ಒಂದುನಾಮಕ್ಕೆ ಹೆಚ್ಚು ಪ್ರಭಾವವಿದೆ ಒಂದಕ್ಕೆ ಕಮ್ಮಿ ಇದೆ ಅಂತ ಯೋಚನೆ ಮಾಡುವುದೂ ದ್ರೋಹವಾಗುತ್ತದೆ. ಅಪರೋಕ್ಷಜ್ಞಾನಿಗಳಿಂದ ರಚಿತವಾದ ಕೃತಿಗಳಲ್ಲಿ ಒಂದು ಚಂದ ಒಂದು ಚಂದಿಲ್ಲ ಅಂತ ಹೇಳಲು ಸಾಧ್ಯವೇ ? ಅಂತಹುದರಲ್ಲಿ ಜಗಜ್ಜನ್ಮಾದಿಕಾರಣನಾದ ಅನಂತಗುಣಪರಿಪೂರ್ಣನಾದ ಆ ಹರಮಾತ್ಮನ ಒಂದು ನಾಮದ ಸ್ಮರಣೆಯಾದರೂ ನಮ್ಮ ಉದ್ಧಾರಕ್ಕೆ ಹಾದಿಯಲ್ಲವೆ?
ಶ್ರೀ ಭೀಷ್ಮಾಚಾರ್ಯರಿಂದ ಅನುಗ್ರಹೀತವಾದ ಸಹಸ್ರನಾಮವನ್ನು ಪಠಿಸುವುದು ವಿಶೇಷ ಫಲವಾದರೆ, ಅದರಲ್ಲಿನ ಒಂದು ನಾಮವನ್ನು ಅದರ ರಸವನ್ನು ಸವಿಯುವುದು ಹಸಿವೆಯನ್ನು ನೀಗಿಸುವುದೆಂದು ಇಲ್ಲಿ ಪೂರ್ತಿ ಕೃತಿಯ ಮೂಲಕ ಭಗವನ್ನಾಮದ ಮಾಹತ್ಮ್ಯವನ್ನು ತಿಳಿಹೇಳಿದ್ದಾರೆ.
ಹರಿನಾಮ ಜಿಹ್ವೆಯೊಳಿರಬೇಕು ನರನಾದಮೇಲೆ ಎಂದು
ಶ್ರೀಮಚ್ಚಂದ್ರಿಕಾಚಾರ್ಯರು ತಿಳಿಸಿದಂತೆ. ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣಾ ಎನಬಾರದೆ ಎಂದು ಶ್ರೀಮತ್ಪುರಂದರದಾಸಾರ್ಯರು ತಿಳಿಸಿದಂತೆ. ಕೇಶವನ ನೆನೆದರೆ ಕಷ್ಟ ಒಂದಿಲ್ಲ ಎನ್ನುವುದರ ಮೂಲಕ ಕೇಶವನಾಮದ ಫಲವನ್ನು ಶ್ರೀ ರಾಜರು ತಿಳಿಸಿದಂತೆ ಪರಮಾತ್ಮನ ಒಂದೊಂದು ನಾಮದ ಸ್ಮರಣೆಯೂ ನಮ್ಮ ಉದ್ಧಾರದ ಹಾದಿಯೂ ಹೌದು, ಮೋಕ್ಷಸಾಧನೆಯ ಮಾರ್ಗವೂ ಹೌದು..
ಹೀಗೆ ಹಿರಿಯ ದಾಸಾರ್ಯರೆಲ್ಲರೂ ತಿಳಿಸಿದ ಹಾದಿಯಲ್ಲೇ ನಡೆದು ತಾಯಿ ಕುಪ್ಪಮ್ಮನವರೂ ಸಹ ಹರಿನಾಮದ ಮಾಹತ್ಮ್ಯವನ್ನು ತಿಳಿಸಲು ರುಚಿಯಾದ ಹಣ್ಣು ಬಂದಿದೆ ಭಗವನ್ನಾಮದ ಹಣ್ಣು ಆ ನಾಮಗಳೆಂಬುವ ಹಣ್ಣುಗಳಲ್ಲಿ ಒಂದನ್ನಾದರೂ ಸವಿದು ನೋಡಿ ಎಂದು ಹೇಳುತ್ತಾರೆ.
ನಾರದರೇ ಅವತರಿಸಿ ಬಂದು ಬಿತ್ತಿಹೋದ ಈ ಹರಿನಾಮದ ರುಚಿಯಾದ ರಸತುಂಬಿದ ಹಣ್ಣನ್ನು ನಾವೂ ಸವಿಯುತ್ತಲೇ ಇರುವಂತಾಗಲಿ.
ಹಾಡಿದರೆ ದಾಸರ ಪದ ಹಾಡಿ ಇಲ್ಲವಾದರೆ ಉಸಿರು ಬಿಡಿ ಎಂದು ಹೇಳಿದ ಹರಿದಾಸಿ ರಾಧಾಬಾಯಿಯವರ ಮಾತುಗಳನ್ನು ಪದೇ ಪದೇ ಮನದಲ್ಲಿ ನೆನೆಯುತ್ತಾ....
ಜೈ ವಿಜಯರಾಯ
smt padma sirish
ನಾದನೀರಾಜನದಿಂ ದಾಸಸುರಭಿ. 🙏🏽
***