ಶ್ರೀ ಪುರಂದರದಾಸಾರ್ಯರ ಸ್ವರೂಪವನ್ನು ತಿಳಿಸಿದ ಶ್ರೀ ವಿಜಯಪ್ರಭುಗಳ ರಚನೆ
ಬಂದ ದುರಿತ ವಿನಾಶನಾ
ಬಂದ ದುರಿತ ವಿನಾಶ ಇಂದು ಪುರಂದರನ
ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ
ಹಿಂದೆ ಮುಂದು ಕುಲಕೋಟಿಗಳು ಉದ್ಧಾರ ಸಂದೇಹ ಸಲ್ಲದಿದಕೆ ॥ ಅ.ಪ ॥
ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ
ಚಾರುಮಂಡಿತನಾಗಿ ಕುಳಿತಿರಲು ಯದು ಪರಿ-
ವಾರ ವಾಲಗ ಮಾಡೆ ಸುತ್ತಲಿಹ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ
ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ
ಧೀರರಾರಾರೆಂದು ಪೊಗಳಲಾ ನಭದಿಂದ ನಾರದನು ಧರೆಗಿಳಿದನು ||1||
ಬರುತಲೇ ವೈಕುಂಠಪುರದರಸಗೆರಗಿದನು
ಕರಗಳನು ಮುಗಿದು ಕಿನ್ನರಿ ಧರಿಸಿ
ಹರುಷದಲಿ ಸ್ವರವೆತ್ತಿ ಮೂವತ್ತೆರಡು ರಾಗಗಳಲಿದಿರು ನಿಂದು
ಎರಡು ಕಂಗಳ ಧಾರೆ ಸುರಿಯೆ ಪುಳಕೋತ್ಸಹದಿ
ಕೊರುಳುಬ್ಬಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ-
ಹರಿ ಹರೀ ಹರಿಯೆಂದು ಹರಿದಾಡುತಿರಲಾಗ ಸುರರು ಶಿರವನೆ ತೂಗಲು ||2||
ಅಚ್ಯುತನು ಪರಮ ಭಾಗವತನ್ನ ಭಕುತಿಗೆ
ಮೆಚ್ಚಿದೆನು ಬೇಡುವುದು ವರವಧಿಕವೆಂದೆನಲು ಮುಚ್ಚಿದಂಬಕಗಳನು ತೆರೆದು ಗೀರ್ವಾಣಮುನಿ
ಎಚ್ಚರಿಕೆಯನು ಪೇಳುತ ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ-
ಹೆಚ್ಚಿದಾ ಯುಗದಲ್ಲಿ ಸಲಿಸುವೆನು ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ ||3||
ವರ ಪಡೆದು ನಾರದನು ಇರುತಿರಲು ತಾವಿತ್ತ
ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ
ಸಿರಿವರನ ದಯದಿಂದ ಜನಿತರಾದರು ಪುರಂದರವೆಂಬ ನಗರಿಯಲ್ಲಿ
ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ
ಜರಿದು ವೈರಾಗ್ಯವನು ತೊಟ್ಟು ದೃಢ ಮನಸಿನಲಿ
ತರುಣಿ ಮಕ್ಕಳು ಸಹಿತ ಸೇರಿದರು ಕಿಷ್ಕಿಂಧಗಿರಿ ತುಂಗಪಂಪದಲ್ಲಿ ||4||
ಅಂದು ಭಕುತಗೆ ಇತ್ತ ಭಾಷೆ ತಪ್ಪಲಿ ಬಾರ-
ದೆಂದು ಇಂದಿರಾಪತಿಯು ದಯದಿಂದ ಒಲಿದವರ
ಮುಂದೆ ಒಂದರಘಳಿಗೆ ತೊಲಗದೆಲೆ ಕುಣಿಕುಣಿದಾನಂದವನೆ ತೋರಿಕೊಳುತಾ
ಮಂದಭಾಗ್ಯರಿಗೆಲ್ಲ ಈ ಪರಿಯ ಸೊಬಗುಂಟೆ ನಾ- ರಂದರಿವರಾದ ಕಾರಣದಿಂದ ಪರಬೊಮ್ಮ
ಬಂದು ನಿಲುಕಿದನೆಂಬುದಿದಕೆ ಇದಕೆ ಪ್ರಮಾಣವೆಂದು ತಿಳಿವುದು ಸುಜನರು ||5||
ವಾಸವನೆ ಮಾಡಿದರು ಪ್ರಹ್ಲಾದನವತಾರ
ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ-
ದೇಶ ಕೈಗೊಂಡು ವೈಷ್ಣವರಾಗಿ ಪುರಂದರದಾಸರೆಂಬುವ ಪೆಸರಲಿ
ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ
ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳಿ ದು-
ರಾಸೆಯನು ತೊರೆದು ವಿಠ್ಠಲನ ಸನ್ನಿಧಿಯಲಿ ವಸಿಸಿದರು ಧರ್ಮ ಬಿಡದೆ ||6||
ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ
ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ
ಗುಪಿತಚರಿತೆಯ ಕಂಡು ದೇವಮುನಿ ತಟಿನಿಗಳು ತಪಸು ಫಲವಾಯಿತೆಂದು
ತಪನಕಾಲದಲೆದ್ದು ದಾಸರಾ ಸದನದಲಿ
ಜಪಿಸಿ ತಮತಮ ತಕ್ಕ ತಾರತಮ್ಯಗಳಿಂದ
ಉಪಚಾರ ಕೈಗೊಂಡು ಧನ್ಯರಾದೆವೆಂದು ಸುಪಥವನು ಇಚ್ಛಿಸುವರು ||7||
ಅವರಂದ ವಚನಗಳೆಲ್ಲ ವೇದಾರ್ಥವಾಗಿ
ಅವನಿಯೊಳು ತುಂಬಿಹವು ಬಂದರೆ ಗ್ರಹಿಸಿದರ
ಭವರೋಗ ಭಸಿತರಾಗಿ ಸುಜ್ಞಾನವೆಂಬಂಥ ಭುವನನದಿಯೊಳಗೆ ಮುಳುಗಿ
ಪವನಮತವಿಡಿದು ಪರಿಪೂರ್ಣಮಾಚಾರದಲಿ
ತವಕದಿಂದಲಿ ಹರಿಯ ಪಾದವನೆ ಪಡಕೊಂಡು
ಜವನಪುರದಾಟಿ ಜನ ತಪ ಸತ್ಯ ಲೋಕದಲಿ ನವರೂಪಿನಲಿ ಇಪ್ಪರು ||8||
ಏನು ಇದು ಎಂತೆಂದು ದೂಷಿಸದಿರಿ ದಾಸರ-
ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ
ಆ ನಾರದರೆ ಪುರಂದರ ದಾಸರೆಂಬಂಥ ಸೂನೃತದಸಿದ್ಧಾಂತದ ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ-
ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ
ಆನಂದಮಯ ವಿಜಯವಿಠ್ಠಲನ್ನ ಪಾದಾಂಬುಜ ಕಾಣುವಾ ಜನ ಲಾಲಿಸೆ ||9||
***
meaning
ಶ್ರೀ ವಿಜಯಪ್ರಭುಗಳು ತಮಗೆ ಅಂಕಿತ ನೀಡಿದ ಗುರುಗಳಾದ ಕಾರಣವೂ, ಹಾಗೂ ತಾವು ಶ್ರೀ ಪುರಂದರದಾಸರ ಮಗನಾಗಿ ಹುಟ್ಟಿದ ಕಾರಣದಿಂದಲೂ ಅವರ ಸ್ವರೂಪವನ್ನು ತಿಳಿದವರಾದಕಾರಣ ಶ್ರೀ ಪುರಂದರದಾಸರು ನಾರದಾವತಾರಿಗಳೆಂದು ಉದ್ಘೋಷಣೆಯನ್ನು ಮಾಡಿದ ಪರಮಾದ್ಭುತವಾದ ಪದವಿದು.
ನುಡಿ - 1
ದ್ವಾರಕಾಪಟ್ಟಣದಲ್ಲಿ ಶ್ರೀಕೃಷ್ಣಪರಮಾತ್ಮನು ಸಭೆಯಲ್ಲಿ ಕುಳಿತಾಗ, ಯಾದವರೆಲ್ಲರೂ ಆ ಪರಮಾತ್ಮನ ಓಲಗವನ್ನು(ಸೇವೆಯನ್ನು) ಮಾಡುತ್ತಿದ್ದಾಗ, ನರ್ತನೆಗಳು, ಗಾಯನ ಸೇವೆ , ಗಟ್ಟಿಯಾಗು ವಾದ್ಯಗಳ ನಾದ, ಹೀಗೆಲ್ಲ ನಡೆಯುತ್ತಿರುವಾಗ ಆ ಸಭೆಗೆ ಆಕಾಶದಿಂದ ನಾರದರು ಇಳಿದು ಬಂದರು.
ನುಡಿ - 2
ಬರುತ್ತಲೇ ವೈಕುಂಠಪುರದರಸನಿಗೆ (ಕೃಷ್ಣ ಪರಮಾತ್ಮನಿಗೆ) ನಮಸ್ಕಾರಮಾಡಿ, ಕೈ ಜೋಡಿಸಿ, ಕಿನ್ನರಿಯನು(ಒಂದು ರೀತಿಯ ತಂತೀ ವಾದ್ಯ) ಧರಿಸಿ ಸಂತೋಷದಿಂದ 32 ರಾಗಗಳಲ್ಲಿ ಪರಮಾತ್ಮನನ್ನು ಸ್ತುತಿಸುತ್ತಾ, ಆನಂದ ಭಾಷ್ಪಗಳು ಸುರಿಯುತ್ತಿರಲು ಪುಳಕಿತರಾಗಿ , ತನ್ಮಯರಾಗಿ ತಮ್ಮನ್ನು ತಾವು ಮರೆತು ಗಾಯನವನ್ನು ಮಾಡಿದರು.
ನುಡಿ - 3
ನಾರದರ ಭಕ್ತಿಗೆ ಮೆಚ್ಚಿದ ಪರಮಾತ್ಮನು ವರ ಒಂದನ್ನು ಬೇಡು ಎಂದು ಕೇಳಿದಾಗ, ಮುಚ್ಚಿದಂಬಕಗಳನು ತೆರೆದು - ತನ್ಮಯತ್ವದಿಂದ ಕಣ್ಗಳು ಮುಚ್ಚಿಕೊಂಡು ಗಾನವನ್ನು ಮಾಡ್ತಿರುವ ಗೀರ್ವಾಣಮುನಿ (ಗೀರ್ವಾಣ ಭಾಷೆ ಎಂದು ಸಂಸ್ಕೃತಕ್ಕೆ ಹೆಸರು, ಸಂಸ್ಕೃತ ಭಾಷೆ ದೇವ ಭಾಷೆ, ದೇವತೆಗಳು ಮಾತನಾಡುವ ಭಾಷೆ ಹೀಗಾಗಿ ಗೀರ್ವಾಣ ಮುನಿ, ದೇವ ಮುನಿ ನಾರದರು) ನಾರದರು ಎಚ್ಚರಿಕೆಯನು ಹೇಳುತ - ಪರಮಾತ್ಮನಲ್ಲಿ ಪರಮಪ್ರೀತಿವಂತರಾಗಿ, ಅಚ್ಚಗನ್ನಿಕೆ ರಮಣ(ಲಕ್ಷ್ಮೀದೇವಿಯರಿಗೆ ಮಾತ್ರ ರಮಣನು. ಗೋಪಿಕೆಯರಾಗಲಿ, ಅಷ್ಟ ಮಹಿಷೆಯರಾಗಲೀ ಪರಮಾತ್ಮನ ಮಡದಿಯರಾಗಬೇಕಾದರೂ, ಪರಮಾತ್ಮನ ಸ್ಪರ್ಶವಾಗಬೇಕಾದರೂ ಅವರಲ್ಲಿ ತಾಯಿ ಲಕ್ಷ್ಮೀದೇವಿಯರ ಅಂಶವಿರಲೇಬೇಕು) - ಲಕ್ಷ್ಮೀದೇವಿಯ ರಮಣನಾದ ಸ್ವಾಮೀ ದಯವಿಟ್ಟು ನನ್ನ ಮಾತು ಮನ್ನಿಸು . ಈಗ ಯಾವ ವರವೂ ಬೇಡ. ಕಲಿ ಹೆಚ್ಚಿ ಸಜ್ಜನರಿಗೆ ತೊಂದರೆ ಉಂಟಾಗುವ ಕಲಿಕಾಲದಲ್ಲಿ ಹುಟ್ಟಿ ಬರುವ ವರವನ್ನು ನೀಡು ಎಂದು ಬೇಡಿಕೊಂಡರು.
ನುಡಿ - 4
ವರವನ್ನು ಪಡೆದ ನಾರದರು ಕಲಿಯ ದೊರೆತನ ಹೆಚ್ಚಾಗುತ್ತಿದ್ದದ್ದನ್ನು ಕಂಡು ಸಿರಿವರನ ದಯದಿಂದ - ಪರಮಾತ್ಮನ ದಯೆಯಿಂದ, ವರದಂತೆ ಪುರಂದರವೆಂಬ ನಗರಿಯಲ್ಲಿ - ಪುರಂದರಘಡದಲ್ಲಿ ಹುಟ್ಟಿ ಬಂದರು. ಕೆಲವು ಕಾಲ ಸಂಸಾರ ವೃತ್ತಿಯಲಿ ಬದುಕಿ, ವೈರಾಗ್ಯವನು ತಾಳಿ(ಮೂಗುತಿಯ ಕಥೆ, ವಿಠಲನ ಅನುಗ್ರಹ ಎಲ್ಲರಿಗೂ ಗೊತ್ತಿದೆ) ತರುಣಿ ಮಕ್ಕಳು ಸಹಿತ - ಮಡದಿ ಮಕ್ಕಳೊಂದಿಗೆ ಕಿಷ್ಕಿಂಧಗಿರಿ ತುಂಗ ಪಂಪದಲ್ಲಿ - ಕಿಷ್ಕಿಂಧಾಪುರಿ ಎಂದೇ ಹೆಸರಾದ ಪಂಪಾಪುರದಲ್ಲಿ ಅರ್ಥಾತ್ ಹಂಪೆಗೆ ಬಂದು ಸೇರಿದರು.
ನುಡಿ - 5
ದ್ವಾರಕೆಯ ಸಭೆಯಲ್ಲಿ ಇಂದಿರಾರಮಣನು ಕೊಟ್ಟ ವರದಿಂದ ಹುಟ್ಟಿಬಂದರಾದ ಕಾರಣ ಇವರ ಮುಂದೆ ಒಂದರಘಳೆಗೆಯೂ ಬಿಡದೆ ಪರಮಾತ್ಮ ಕುಣಿದಾಡುತ್ತಿರುವನೆಂದು ಹಂತ ಹಂತದಲ್ಲಿ ಶ್ರೀ ಪುರಂದರದಾಸರ ಚರಿತ್ರೆಯಲ್ಲಿ ಕಾಣುತ್ತೇವು( ನೀನು ದಾಸನಾಗಿ ಹುಟ್ಟಿ ಬಂದರೆ ನಾನು ನಿನ್ನೆದುರಿಗೆ ಕುಣಿದಾಡುತ್ತೇನೆ ಎಂದು ಪರಮಾತ್ಮ ಮಾತನ್ನು ಕೊಟ್ಟಿರುವುದು). ಈ ರೀತಿ ಪರಮಾತ್ಮ ಬಂದು ಎದುರಿಗೆ ಕುಣಿದಾಡುವುದು ಮಂದ ಭಾಗ್ಯರಿಗೆ ಸಾಧ್ಯವಿಲ್ಲದ ಕೆಲಸ. ಹೀಗಾಗಿ ಇವರ ಮುಂದೆ ಪರಬೊಮ್ಮ - ಸರ್ವೋತ್ತಮನೇ ಬಂದು ನಿಲುಕಿದನೆಂದು ಪ್ರಮಾಣವನ್ನಾಗಿ ತಿಳಿಯುವುದು ಎಂದು ಹೇಳುತ್ತಾ ಶ್ರೀ ವಿಜಯಪ್ರಭುಗಳು - ಸುಜನರು ಅಂತ ಪದ ಸೂಕ್ಷ್ಮವಾಗಿ ಬಳಸುತ್ತಾರೆ. ಸಜ್ಜನರಿಗೆ ಮಾತ್ರ ಇವರು ನಾರದರೆಂದು ನಂಬುವರು ಹೊರತು ದುರ್ಜನರಿಗೆ ಇವರ ಸ್ವರೂಪವೂ ಅರ್ಥವಾಗದು, ಇವರ ರಚನೆಗಳೂ ಅರ್ಥವಾಗವು.
ನುಡಿ - 6
ಪ್ರಲ್ಹಾದಾವತಾರಿಗಳಾದ ಶ್ರೀ ವ್ಯಾಸರಾಯರಲ್ಲಿ ಶಿಷ್ಯತ್ವ ವಹಿಸಿ ಮುದ್ರೆ ಗುರುಮಂತ್ರ ಉಪದೇಶವನ್ನು ಗೈದು ಪರಮವೈಷ್ಣವರಾಗಿ(ಇಲ್ಲಿ ವೈಷ್ಣವರಾಗಿ ಎಂದರೆ ಇವರು ಮೊದಲಿಗೆ ಮಾಧ್ವರಲ್ಲವಾ ಅಂತ ಅನುಮಾನ ಸಲ್ಲದು, ದ್ವಾದಶಮುದ್ರೆಗಳು ಧರಿಸಿದವರು ಮಾತ್ರ ವೈಷ್ಣವರು ಎನ್ನುವ ಅರ್ಥ ತಗೋಬೇಕು) - ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಪುರಂದರವಿಠಲ ಎಂದು ಅಂಕಿತವನ್ನು ಪಡೆದು, ಪುರಂದರದಾಸರೆಂಬ ಹೆಸರಿನಲಿ ದೇಶಗಳ ತಿರುಗಿ(ಇಲ್ಲಿ ದೇಶಗಳೆಂದರೆ ಈಗಿನ ಕಾಲದಂತೆ ವಿದೇಶಗಳಲ್ಲ - ಶ್ರೀಮದಾಚಾರ್ಯರ ತತ್ವದಂತೆ ಭಾರತವನ್ನು ಬಿಟ್ಟು ಬೇರೆಯ ದೇಶಕ್ಕೆ ಹೋಗಿ ಬದುಕಿದವರ ಬ್ರಾಹ್ಮಣತ್ವವೇ ಹೋಗುತ್ತದೆ. ಹೀಗಾಗಿ ಇಲ್ಲಿ ದೇಶಗಳೆಂದರೆ ದೇಶಾದ್ಯಂತದ ಕ್ಷೇತ್ರಗಳು ತಿರುಗಿ ಎಂದರ್ಥ - ಸುಮಾರು ಕೃತಿಗಳಲ್ಲಿ ನೋಡ್ತೇವೆ ಛಪ್ಪನ್ನ ದೇಶಗಳು ಅಂತ ಹೀಗೆ ಮತ್ತು ದೇಶಾಂತರ ಹೋಗಿದ್ದಾರೆ ಅಂತಲೂ ಪ್ರಯೋಗ ಮಾಡ್ತಿರ್ತಾರೆ ಅದರರ್ಥ ಮನೆಬಿಟ್ಟು ದೇಶದಲ್ಲಿ ತಿರುಗಲು ಹೋಗಿದ್ದಾರೆ ಎಂದು ಹೀಗಾಗಿ ಇಲ್ಲಿ ಭರತ ಭೂಮಿಯಲ್ಲಿನ ಕ್ಷೇತ್ರಗಳಲ್ಲಿ ಓಡಾಡಿ , ದರ್ಶಿಸಿ ಎಂದು ಅರ್ಥ)
ನುಡಿ - 7
ಉಪಾದಾನವನು ಬೇಡಿ - ಹರಿದಾಸರ ವೃತ್ತಿಯಾದಂತಹ ಯಾಯಿವಾರವನ್ನು ಆಚರಿಸುತ್ತಾ ಬೇಡಿ ಬಂದದ್ದನ್ನು ವಿಪ್ರರಿಗೆ ಮೃಷ್ಟಾನ್ನ ಭೋಜನಗಳಾಗಿ ಉಣಬಡಿಸುತ್ತಿದ್ದರು. ಇವರಲ್ಲಿ ನಿಂತ ಗುಪಿತನಾದ ಪರಮಾತ್ಮನನ್ನು ಕಂಡು ತಟನಿಗಳು - ನದಿಗಳು ಅರ್ಥಾತ್ ನದೀದೇವತೆಗಳು ಹಾಗೂ ದೇವತೆಗಳಲ್ಲರೂ ಉಷೋದಯ ಕಾಲದಲ್ಲಿ ದಾಸರ ಸದನದಲಿ - ಶ್ರೀ ಪುರಂದರದಾಸರ ಮನೆಯ ಮುಂದೆ ದಾಸರನ್ನ ಸ್ಮರಿಸಿ ತಮತಮ ತಾರತಮ್ಯಗಳಿಗೆ ತಕ್ಕಂತೆ ಉಪಚಾರಗಳನ್ನ ಮಾಡಿ - ಮನೆಯ ಮುಂದೆ ಸ್ವಚ್ಛಮಾಡುವುದು, ರಂಗೋಲಿ ಬಿಡಿಸುವುದು ಇತ್ಯಾದಿ ಉಪಚಾರಗಳನ್ನು ಮಾಡಿ ಧನ್ಯರಾಗುತ್ತಿದ್ದರು.
ನುಡಿ - 8
ಶ್ರೀ ಪುರಂದರದಾಸರು ಅಂದ ಎಲ್ಲ ವಚನಗಳೂ ವೇದಗಳ ಅರ್ಥವಾಗಿದ್ದವು. ಅರ್ಥಾತ್ ಅವರು ಪ್ರತಿಯೊಂದು ಕೃತಿಯ ಸ್ಮೃತಿಯ ತತ್ವಗಳನ್ನು ಪ್ರಾಕೃತ ಭಾಷೆಯಲ್ಲಿ ನೀಡಿ ಸಜ್ಜನರಿಗೆ ಅನುಗ್ರಹ ಮಾಡಿದರು. ಶ್ರೀ ದಾಸರ ಗುರುಗಳು ಪ್ರಲ್ಹಾದಾವತಾರಿಗಳಾದ ಶ್ರೀ ಚಂದ್ರಿಕಾಚಾರ್ಯರು(ಶ್ರೀ ವ್ಯಾಸರಾಜ ಗುರುಸಾರ್ವಭೌಮರು) ಶ್ರೀ ಪುರಂದರದಾಸರ ಕೃತಿಗಳನ್ನು ಪುರಂದರೋಪನಿಷತ್ತು ಎಂದು ಕರೆದು, ವ್ಯಾಸಪೀಠದ ಮೇಲೆ ಇಟ್ಟು ಪೂಜಿಸುತ್ತಿದ್ದರು. ಅ ಕೃತಿಗಳಲ್ಲಿನ ಒಂದು ಕೃತಿಯ ಅರ್ಥ ಗ್ರಹಿಸಿದರೆ - ಗ್ರಹಿಸುವುದೆಂದರೆ ಅರ್ಥ ತಿಳಿಯುವುದಷ್ಟೇ ಅಲ್ಲ ಅದರ ಅನುಸಂಧಾನ ಜೀವನಲ್ಲಿರಬೇಕು. ಆ ರೀತಿಯಲ್ಲಿ ನಾರದಾವತಾರಿಗಳು ತೋರಿದ ಹಾದಿಯಲ್ಲಿ ನಡೆದವರು ಪವನಮತವಿಡಿದು ಪರಿಪೂರ್ಣಮಾಚಾರದಲಿ - ಪವನಮತ - ವಾಯುಮತ - ಮಾಧ್ವಮತದಲ್ಲಿ ಹುಟ್ಟಿ ಬಂದು ಸದಾಚಾರಿಗಳಾಗಿ ಬದುಕಿ ಸದಾ ಹರಿಯ ಪಾದವನ್ನು ನೆನೆದು ಬದುಕಿದಾಗ ಜವನಪುರದಾಟಿ - ಯಮ ಪುರಿಯನ್ನು ದಾಟಿ ಅರ್ಥಾತ್ ನರಕದಲ್ಲಿ ಬೀಳದೆ ಜನ ಲೋಕ, ತಪೋಲೋಕ, ಸತ್ಯಲೋಕಗಳಲ್ಲಿ ನವರೂಪಿನಲಿ ಮುಪ್ಪು ಇತ್ಯಾದಿ ಬಾಧೆಗಳಿಲ್ಲದೆ ಸದಾ ಯವ್ವನದಲ್ಲಿರುವರು ಎಂದು ಹೇಳುತ್ತಾರೆ ನಮ್ಮ ಶ್ರೀ ವಿಜಯಪ್ರಭುಗಳು.
ನುಡಿ - 9
ಇವೆಲ್ಲವೂ ನಿಜವೇನಾ? ಎಂದು ದೂಷಣೆ ಮಾಡಬೇಡಿ, ದಾಸರ ಪುತ್ರನಾದ ನಾನು ಹೇಳುತ್ತಿರುವ ಮಾತಿದು. ಸತ್ಯವಿದು. ಶ್ರೀ ವ್ಯಾಸರಾಜರಿಗೆ ತಿಳಿದಮಾತಿದು, ಆ ನಾರದರೇ ಶ್ರೀ ಪುರಂದರದಾಸರೆಂಬಂಥ ಸೂನೃತ - ಪರಮ ರಮ್ಯವಾದ ಸತ್ಯವಾದ ಸಿದ್ಧಾಂತವನು ಸದಾ ಧ್ಯಾನಿಸುತ್ತ ಶ್ರೀ ವ್ಯಾಸರಾಜರು, ಶ್ರೀ ವಾದಿರಾಜತೀರ್ಥ ಗುರುಸಾರ್ವಭೌಮರು, ಶ್ರೀ ವಿಜಯೀಂದ್ರಮುನಿಗಳು, ಶ್ರೀ ಕನಕದಾಸಾರ್ಯರೇ ಮೊದಲಾದ ಸುಜ್ಞಾನಿಗಳ ಪದನಖದ ರೇಣುವಾಗಿ ವಿನಂತಿ ಮಾಡುತ್ತಿರುವ ಬಿನ್ನಪವಿದು. ಇದನ್ನು ನಂಬಿದವರಿಗೆ ಮಾತ್ರ ಜ್ಞಾನಮಯ, ಆನಂದಮಯನಾದ ವಿಜಯವಿಠಲಾಭಿನ್ನ ಶ್ರೀಹರಿಯ ಅನುಗ್ರಹವಾಗುವುದು . ಸಜ್ಜನರು ಲಾಲಿಸುವುದು
ಎಂದು ಶ್ರೀ ವಿಜಯಪ್ರಭುಗಳು ತಮ್ಮ ಅಂಕಿತೋಪದೇಶದ ಗುರುಗಳು, ಪೂರ್ವದಲ್ಲಿ ತಮ್ಮ ತಂದೆಯವರೂ(ಶ್ರೀ ವಿಜಯಪ್ರಭುಗಳು ಶ್ರೀ ಪುರಂದರದಾಸರ ಮನೆಯಲ್ಲಿ ಆಕಳ ಕರುವಾಗಿ, ಮತ್ತೆ ಕೊನೆಯ ಮಗ ಶ್ರೀ ಮಧ್ವಪತಿವಿಠಲರಾಗಿ(ಗುರುಮಧ್ವಪತಿವಿಠಲ) ಹುಟ್ಟಿಬಂದದ್ದು ಗೊತ್ತಿರುವ ವಿಷಯಗಳು) ಶ್ರೀ ವಿಜಯಪ್ರಭುಗಳು ದಾಖಲಿಸಿದ ಶ್ರೀಮತ್ಪುರಂದರದಾಸಾರ್ಯರ ಸ್ವರೂಪದ ರಹಸ್ಯಗಳನ್ನು ಈ ಕೃತಿ ನಮಗೆ ಅದ್ಭುತವಾಗಿ ತಿಳಿಸುತ್ತದೆ. ಶ್ರೀ ವಿಜಯಪ್ರಭುಗಳ, ಶ್ರೀಮತ್ಪುರಂದರದಾಸಾರ್ಯರ ಅವರೀರ್ವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಪ್ಪನು ಸದಾ ನಮ್ಮನ್ನು ಕಾಪಾಡಲೀ. ಆ ನಾರದಾವತಾರಿಗಳ ಅನುಗ್ರಹ ಸದಾ ನಮಗಿರಲಿ. ಅವರ ಕೃತಿಗಳ ಅರ್ಥ ತಿಳಿದು, ಅನುಸಂಧಾನಪೂರ್ವಕವಾದ ಬದುಕನ್ನ ನಾವು ಬದುಕಿ (ಅರ್ಥ ತಿಳಿಯದೇ ಇದ್ದರೂ ಹಾಡುವುದನ್ನು ಮಾಡಬೇಕು, ಹೊರತು ನಮ್ಮ ಮತಿಗೆ ತಕ್ಕಂತೆ ಅರ್ಥ ತಿಳಿಯಲೇಬಾರದು) ಅವರ ಪದ, ಪದ್ಯ, ಸುಳಾದಿಗಳನ್ನು ಸದಾಕಾಲ ಹಾಡುತ್ತಿರುವುದನ್ನೇ ಜೀವದ ಕರ್ತವ್ಯವನ್ನಾಗಿ ಮಾಡಿಕೊಳ್ಳೋಣ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.
-padma sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ🙏🏽