ರಾಗ: ಸೌರಾಷ್ಟ ತಾಳ: ಆದಿ
ಗುರುಪಾದಕ್ಕೆರಗಿರೋ ಶಿರವ ಬಾಗಿ ನಮಿಸಿರೋ
ದುರಿತಕಳೆದುಪೊರೆವ ಗುರು ರಾಘವೇಂದ್ರರ ಪ
ಅಜನಸೇವಿಸೀ ಹರಿಯಭಜನೆ ಮಾಳ್ದರಾ
ವೃಜಿನದೂರವೂ ಇವರಭಜಿಸಿ ಪಾಡಲೂ 1
ಭೂಪತಿಯೆನಿಸಿದಾ ಭುವಿಲಿ ಶ್ರೀಪತಿಯಸ್ತುತಿಸಿದಾ
ಪಾಪ ಸ್ವಲ್ಪವೂ ಸ್ಮರಿಸೆ ಲೇಪವಾಗದೂ 2
ಹರಿಯತುತಿಸಿದಾ ನರಹರಿಯತೋರಿದಾ
ಪರಮಪೂಜ್ಯರೂ ಇವರು ಕರುಣಾಪೂರ್ಣರೂ 3
ಯತಿವ್ಯಾಸರೆನಿಸಿದಾ ಮಧ್ವಮತವಸಾರಿದಾ
ತುತಿಸಿಪೊಗಳಲೂ ಮಂದಮತಿಯು ದೂರವೂ 4
ಮೋದತೀರ್ಥರಾ ತತ್ವವಾದಪೇಳ್ದರಾ
ಖೇದವಾಗದೂ ಇವರಪಾದ ಸ್ಮರಿಸಲೂ 5
ಏಸುಜನುಮದಾ ಪಾಪರಾಶಿಕಳೆವರು
ವಾಸುದೇವನೂ ಇವರಲಿ ವಾಸಿಸಿಪ್ಪನೂ 6
ಘನ್ನಮಹಿಮರೂ ಇವರು ಪಾವನ್ನಚರಿತರೂ
ಧನ್ಯರೇ ಸರಿ ಇವರ ಅನನ್ಯಭಜಿಪರೂ 7
ಏಳುನೂರುವರುಷವೂ ಈಧರೆಯೊಳಿಪ್ಪರೂ
ಏಳೇಳುಜನುಮದಾಕೃತ ಪಾಪಕಳೆವರೂ 8
ಶಾಂತಗುರುಗಳಾ ಅಂತರಂಗದಿ ಸ್ತುತಿಪರಾ
ಕಾಂತೇಶಪ್ರಿಯವಿಠಲನೂ ಅನಂತಕಾಯ್ವನೂ 9
***