Showing posts with label ಸತತ ಬ್ರಹ್ಮಚಾರಿ ಎನಿಸಿ vijaya vittala ankita suladi ಕೃಷ್ಣಾವತಾರ ಸುಳಾದಿ SATATA BRAHMACHARI ENISI KRISHNAVATARA SULADI. Show all posts
Showing posts with label ಸತತ ಬ್ರಹ್ಮಚಾರಿ ಎನಿಸಿ vijaya vittala ankita suladi ಕೃಷ್ಣಾವತಾರ ಸುಳಾದಿ SATATA BRAHMACHARI ENISI KRISHNAVATARA SULADI. Show all posts

Wednesday, 25 August 2021

ಸತತ ಬ್ರಹ್ಮಚಾರಿ ಎನಿಸಿ vijaya vittala ankita suladi ಕೃಷ್ಣಾವತಾರ ಸುಳಾದಿ SATATA BRAHMACHARI ENISI KRISHNAVATARA SULADI

Audio by Mrs. Nandini Sripad

..

ಶ್ರೀವಿಜಯದಾಸಾರ್ಯ ವಿರಚಿತ  ಶ್ರೀಕೃಷ್ಣಾವತಾರ ಮಹಿಮೆ ಸುಳಾದಿ 


 ರಾಗ ರೀತಿಗೌಳ 


 ಧ್ರುವತಾಳ 


ಸತತ ಬ್ರಹ್ಮಚಾರಿ ಎನಿಸಿಕೊಂಡು ಪರೀ -

ಕ್ಷಿತನ ಪ್ರಾಣವನ್ನು ಉಳಹಿದ ದೈವವೆ

ರತಿಪತಿ ವ್ಯಾಪಾರದಲ್ಲಿ ಶ್ರೇಷ್ಠನೆನಿಸಿ ಅನ್ಯ -

ಸತಿಯರ ಭೋಗಿಸಿ ಸುತರ ಪಡೆದದೇನೋ

ಚತುರ ಮೊಗಾದಿಗಳ ಪೆತ್ತ ಪರಮಪುರುಷ

ಗತಿ ಪ್ರದಾಯಕನಾಗಿ ಮೆರೆದೆ ಕಮಲನಾಭಾ

ಗತಿಯಾಗಬೇಕೆಂದು ಸುತನಗೋಸುಗ ಪೋಗಿ

ಕೃತವಿರೋಧಿಯ ವಲಿಸಿ ವರವ ಕೈಕೊಂಡದ್ದೇನೊ

ನುತಿಸಿದ ಜನರಿಗೆ ಅನುದಿನ ತಪ್ಪದಲೇ

ಹಿತವಾಗಿರುತಿಪ್ಪ ಭಕ್ತವತ್ಸಲದೇವ

ಶಿತವಾಹನಗೊಲಿದು ರಣದೊಳು ಸುಧನ್ವನ್ನ

ಹತಮಾಡಿಸಿದ್ದು ಆವದೋ ಕರುಣತನವೋ

ತುತಿಸುತಿಪ್ಪರು ನಿನ್ನ ನಿತ್ಯ ತೃಪ್ತನೆಂದು

ಕೃತಭುಜರೊಂದಾಗಿ ಗಣಣೆ ಕಾಣದೆ ಎಣಿಸಿ

ಕ್ಷಿತಿಯೊಳು ಭಕ್ತರಿತ್ತ ಸ್ವಲ್ಪಕ್ಕೆ ತೇಗುವೆ

ಅಮಿತಭೋಜನನೆಂದು ಕರಿಸಿಕೊಂಬುವದೇನೋ

ಪತಿತಪಾವನ ರಂಗಾ ವಿಜಯವಿಟ್ಠಲ ನಿನ್ನ

ಕೃತಕಾರ್ಯಂಗಳಿಗೆ ನಾನೇನೆಂಬೆ ತಲೆದೂಗಿ ॥ 1 ॥ 


 ಮಟ್ಟತಾಳ 


ಬಲು ರವಿ ಪ್ರಕಾಶನೆಂದು ನಿನ್ನನ್ನು

ಕಲಕಾಲಾ ಬಿಡದೆ ಪೊಗಳುವ ಬಗೆ ನೋಡು

ಇಳಿಯೊಳಗೆ ಯಿದ್ದ ಮನುಜರ ಕಣ್ಣಿಗೆ

ಬೆಳಗು ತೋರಿ ಪ್ರೀತಿ ಮಾಡಿದ ಪರಿಯೇನೋ

ಹಲವು ಬಗೆಯಿಂದ ಶುದ್ದಾತ್ಮನೆಂದು

ವಲಿಸಿ ವೇದಂಗಳು ಬೆರಗಾಗುತಲಿರೇ

ಗಲಭೆ ಮಾಡದೆ ಪೋಗಿ ಗೊಲ್ಲತಿಯರ ಮನೆ

ಒಳಪೊಕ್ಕು ಪಾಲು ಮೊಸರು ಬೆಣ್ಣೆಯ ಕದ್ದೆ

ಜಲಜಜಾಂಡದಕಿಂತ ಭಾರವುಳ್ಳವನೆಂದು

ನೆಲೆಗಾಣೆನು ನಿನ್ನ ಕೀರ್ತಿಗೆ ಎಣೆಯುಂಟೇ

ಕುಲಸತಿ ನಾರದಗೆ ಮಾರಿದ ಸಮಯದಲಿ

ತುಲಸಿದಳಕ್ಕಿಂತ ಕುಡಿಮೆಯಾದದು ಯೇನೊ

ಕಲಿಭಂಜನ ನಮ್ಮ ವಿಜಯವಿಟ್ಠಲ ನಿನ್ನ

ಸುಲಭತನಕೆ ಎಲ್ಲಿ ಸರಿಗಾಣೆ ನೋಡಿದರು ॥ 2 ॥ 


 ತ್ರಿವಿಡಿತಾಳ 


ನೀನೆ ಅಪ್ರಾಕೃತ ಶರೀರವೆನಿಸಿಕೊಂಡು

ಅನಂತಕಲ್ಪಕ್ಕೆ ಬಾಳುವ ಭವದೂರಾ

ಮಾನವ ರೂಪವು ಬಂದಾಗ ಕಾಯವ

ಕ್ಷೋಣಿಯೊಳಗೆ ಬಿಟ್ಟು ಪೋದನೆನಿಸುವದೇನೊ

ಆನಂದಮಯನಾಗಿ ಸುಖಿಸುವ ಸರ್ವೇಶ

ಮಾಣದರ್ಭಕನಂತೆ ಅಳುವ ಲೀಲೆಗಳ್ಯಾಕೆ

ಜ್ಞಾನಪೂರ್ಣನಾಗಿ ಜಗದೊಳಗಿಪ್ಪನೆ

ಏನೆಂಬೆ ನಿನ್ನ ವಿಚಿತ್ರ ಮಹಿಮೆಗಾನು

ಕ್ಷೋಣಿ ವಿಬುಧನಾದ ಸಾಂದೀಪನ ಬಳಿಯ

ದೀನವಂತನಾಗಿ ವಿದ್ಯೆ ಓದಿದುದೇನೊ

ಶ್ರೀನಾಥ ನೀನಹುದೋ ನಿನ್ನ ಸೌಭಾಗ್ಯಕ್ಕೆ

ಪ್ರಾಣಾದಿಗಳು ಎಣಿಸಿ ಕಡೆಗಾಣರು

ಭೂನಾಥರೊಳಗೆ ಕೇವಲ ನೀಚನಾದುಗ್ರ -

ಸೇನಗೆ ಪರಾಕು ಪೇಳುವರಾ

ಮೌನಿಗಳರಸ ಶ್ರೀವಿಜಯವಿಟ್ಠಲರೇಯಾ 

ನೀನಾಡುವ ಲೀಲೆ ಜ್ಞಾನಿಗಳಿಗೆ ಬಲುಹರುಷ ॥ 3 ॥ 


 ಅಟ್ಟತಾಳ 


ನಿಜ ಸಂಕಲ್ಪ ನೀನೆಂದು ಪೇಳುವರು ಗಂ -

ಗಜಗೆ ಮಾತನು ಕೊಟ್ಟು ಚಕ್ರ ಪಿಡಿದದೇನೊ

ಕುಜನ ಮರ್ದನನೆಂದು ನಿನ್ನ ಬಿರಿದು ಅಂ -

ಗಜನ ದೈತ್ಯನು ವಯ್ಯೇ ಸುಮ್ಮನಿದ್ದದ್ದೇನೋ

ತ್ರಿಜಗದೊಳಗೆ ನೀನೆ ನಿಬಿಡಿಯಾಗಿರಲಾಗಿ

ರುಜುವಾಗಿ ಸಕಲರು ಚರಿಸುವ ಬಗೆಯೆಂತು

ಸುಜನರ ಮನೋಹರ ವಿಜಯವಿಟ್ಠಲರೇಯಾ 

ಭಜನಿ ಮಾಡಿದವರ ಭಾಗ್ಯವು ಬಹುವರ್ನಾ ॥ 4 ॥ 


 ಆದಿತಾಳ 


ವಿದ್ಯಾತೀತನೆಂದು ನಿನ್ನ ಚರಿತೆಯೇನೋ

ಅಧ್ವರ ಮೊದಲಾದ ಕರ್ಮ ಮಾಡಿದದೇನೋ

ವೈದ್ಯ ನೀನಹುದೋ ಮಹಾ ಭವರೋಗಕ್ಕೆ

ಈ ಧರೆಯಲ್ಲಿ ಸಾಂಬನನು ಸ್ತುತಿಸಿದೆ

ಇದ್ದಲ್ಲಿ ಸರ್ವವೂ ಉಂಟಾಗಿರಲಿಕ್ಕೆ

ಉದ್ಯುಕ್ತನಾದೆ ಮಕ್ಕಳ ತರಬೇಕೆಂದು

ಮುದ್ದು ಮೊಗದರಾಯಾ ವಿಜಯವಿಟ್ಠಲ ಸರ್ವ -

ಸುದ್ದಿ ಬಲ್ಲ ಪ್ರತಾಪ ಅನ್ಯರನ ಕೇಳುವರೆ ॥ 5 ॥ 


 ಜತೆ 


ಸುವಿರುದ್ಧ ಕರ್ಮಗಳು ತೋರುವ ಪರಬೊಮ್ಮ

ಅವಿಕಾರ ಮೂರುತಿ ವಿಜಯವಿಟ್ಠಲರೇಯಾ ॥

****