ಸುಮ್ಮನೆ ಬರುವುದೆ ಮುಕ್ತಿ ಗುರು
ಧರ್ಮವ ಭಿಕ್ಷವ ಬೇಡಿದವಗೆ ಸುಕೀರ್ತಿ||ಪ||
ಮನದಲ್ಲಿ ದೃಢವಿರಬೇಕು
ದುಷ್ಟ ಜನ ಸಂಸರ್ಗಗಳನು ಬಿಡಲಿಬೇಕು|
ಅನುಮಾನವು ಸುಡಬೇಕು ತನ್ನ
ತನುಮನವ ಧಾನವನೊಪ್ಪಿಸಿಕೊಡಬೇಕು||1||
ಕಾಮ ಕ್ರೋಧವ ಬಿಡಬೇಕು
ಹರಿನಾಮ ಸಂಕೀರ್ತನೆಯನು ಮಾಡಬೇಕು|
ಹೇಮದಾಸೆಯ ಬಿಡಬೇಕು
ಹರಿನಾಮವೆ ಗತಿಯೆಂದು ನೆರೆ ನಂಬಬೇಕು||2||
ವ್ಯಾಪಾರ ವರ್ಜಿಸಬೇಕು
ಜ್ಞಾನದೀಪದ ಕಾಂತಿಯಲ್ಯೋಲಾಡಬೇಕು|
ಪಾಪರಹಿತನಾಗಬೇಕು
ನಮ್ಮ ಗೋಪಾಲವಿಠ್ಠಲನ್ನ ನೆನೆಯುತಿರಬೇಕು||3||
***