ಯಾಕೆ ಬಳಲಿಸುವಿ ಗುರುರಾಯಾ ಇನ್ನು
ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ
ಭಕ್ತ ಕೇಳಿದರೆ ಕೊಡವಲ್ಲಿ ಉಪ-
ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ
ಶಕ್ತಿ ನಿನಗಿಹುದೋ ಕರದಲ್ಲಿ ವಿ-
ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1
ತ್ರಾಹಿ ತ್ರಾಹಿ ಗುರುರಾಯಾ ಈಗ
ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ
ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು
ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2
ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು
ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ
ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ
ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
****