ರಾಗ: ಹಂಸಾನಂದಿ ತಾಳ: ರೂಪಕ
ತಂದೆ ತಾಯಿ ಬಂಧು ಬಳಗ ನೀನೇ ಎಂದು ನಂಬಿ ಬಂದೆ
ಇಂದಿನಿಂದ ನಿನ್ನದೆನ್ನ ಯೋಗಕ್ಷೇಮ ರಾಘವೇಂದ್ರ ಪ
ಮಂದಮತಿಯು ಆದ ನಾನು ಜನ್ಮದಲ್ಲಿ ಸಾರ್ಥಕತೆಯ
ಒಂದು ನಿಮಿಷ ಕಾಣದಾಗಿ ಬಂದೆನಿಂದು ನಿನ್ನ ಬಳಿಗೆ
ತಂದೆಯಾಗಿ ನೀನು ನನ್ನ ಹೊಂದಿಸಯ್ಯ ಭಕ್ತಿಜಗಕೆ
ಎಂದು ಹೊಸತು ಜನ್ಮ ಬಯಸಿ ಬಂದೆನಿಂದು ರಾಘವೇಂದ್ರ 1
ಸುಗುಣ ನಿನ್ನ ಕೀರ್ತಿ ಕೇಳಿ ಚಿಗುರಿ ಮನದ ಆಶೆ ಬಂದೆ
ಜಿಗಿದು ತಾಯ ಬಳಿಗೆ ಮಗುವು ಬರುವ ತೆರದಲಿ
ಬಿಗಿದು ಅಪ್ಪಿ ಮೇಲಕ್ಕೆತ್ತಿ ಜ್ಞಾನಕ್ಷೀರ ಬಾಯಿಗುಣಿಸಿ
ಮಗುವು ನಿನ್ನದೆಂದು ಕಾಯೋ ಸುಗುಣಿ ರಾಘವೇಂದ್ರರಾಯ 2
ದುಷ್ಟಕರ್ಮಋಣವ ಹರಿಸೆ ಇಷ್ಟಬಂಧುವಾಗಿ ಒದಗೋ
ಶ್ರೇಷ್ಠಜ್ಞಾನಧನವ ನೀನೇ ಕೊಟ್ಟು ನನ್ನ ಕರುಣಿಸೋ
ಇಷ್ಟಮೂರ್ತಿ ಸೀತಾರಾಮವಿಠಲನ್ನ ನೆನಹು ಸದಾ
ಕೊಟ್ಟು ನೀನೇ ಕಾಯಬೇಕೋ ಶ್ರೇಷ್ಠಗುರುವೆ ರಾಘವೇಂದ್ರ 3
***