Monday, 6 September 2021

ತಂದೆ ತಾಯಿ ಬಂಧು ಬಳಗ ನೀನೇ ಎಂದು ನಂಬಿ ಬಂದೆ ankita seetarama vittala

 ರಾಗ: ಹಂಸಾನಂದಿ  ತಾಳ: ರೂಪಕ


ತಂದೆ ತಾಯಿ ಬಂಧು ಬಳಗ ನೀನೇ ಎಂದು ನಂಬಿ ಬಂದೆ

ಇಂದಿನಿಂದ ನಿನ್ನದೆನ್ನ ಯೋಗಕ್ಷೇಮ ರಾಘವೇಂದ್ರ   ಪ


ಮಂದಮತಿಯು ಆದ ನಾನು ಜನ್ಮದಲ್ಲಿ ಸಾರ್ಥಕತೆಯ

ಒಂದು ನಿಮಿಷ ಕಾಣದಾಗಿ ಬಂದೆನಿಂದು ನಿನ್ನ ಬಳಿಗೆ

ತಂದೆಯಾಗಿ ನೀನು ನನ್ನ ಹೊಂದಿಸಯ್ಯ ಭಕ್ತಿಜಗಕೆ

ಎಂದು ಹೊಸತು ಜನ್ಮ ಬಯಸಿ ಬಂದೆನಿಂದು ರಾಘವೇಂದ್ರ   1

ಸುಗುಣ ನಿನ್ನ ಕೀರ್ತಿ ಕೇಳಿ ಚಿಗುರಿ ಮನದ ಆಶೆ ಬಂದೆ

ಜಿಗಿದು ತಾಯ ಬಳಿಗೆ ಮಗುವು ಬರುವ ತೆರದಲಿ

ಬಿಗಿದು ಅಪ್ಪಿ ಮೇಲಕ್ಕೆತ್ತಿ ಜ್ಞಾನಕ್ಷೀರ ಬಾಯಿಗುಣಿಸಿ

ಮಗುವು ನಿನ್ನದೆಂದು ಕಾಯೋ ಸುಗುಣಿ ರಾಘವೇಂದ್ರರಾಯ  2

ದುಷ್ಟಕರ್ಮಋಣವ ಹರಿಸೆ ಇಷ್ಟಬಂಧುವಾಗಿ ಒದಗೋ

ಶ್ರೇಷ್ಠಜ್ಞಾನಧನವ ನೀನೇ ಕೊಟ್ಟು ನನ್ನ ಕರುಣಿಸೋ

ಇಷ್ಟಮೂರ್ತಿ ಸೀತಾರಾಮವಿಠಲನ್ನ ನೆನಹು ಸದಾ

ಕೊಟ್ಟು ನೀನೇ ಕಾಯಬೇಕೋ ಶ್ರೇಷ್ಠಗುರುವೆ ರಾಘವೇಂದ್ರ  3

***


No comments:

Post a Comment