Showing posts with label ಸಿರಿದೇವಿಗೆ ಪೇಳಿ vijaya vittala ankita suladi ಹರಿ ಸ್ವತಂತ್ರ ಸುಳಾದಿ SIRIDEVIGE PELI HARI SWATANTRA SULADI. Show all posts
Showing posts with label ಸಿರಿದೇವಿಗೆ ಪೇಳಿ vijaya vittala ankita suladi ಹರಿ ಸ್ವತಂತ್ರ ಸುಳಾದಿ SIRIDEVIGE PELI HARI SWATANTRA SULADI. Show all posts

Thursday, 23 September 2021

ಸಿರಿದೇವಿಗೆ ಪೇಳಿ vijaya vittala ankita suladi ಹರಿ ಸ್ವತಂತ್ರ ಸುಳಾದಿ SIRIDEVIGE PELI HARI SWATANTRA SULADI

Audio by Mrs. Nandini Sripad

 .

ಶ್ರೀವಿಜಯದಾಸಾರ್ಯ ವಿರಚಿತ ಶ್ರೀಹರಿ ಸ್ವತಂತ್ರ ಪ್ರಮೇಯ ಸುಳಾದಿ 


(ಕಷ್ಟಾಕಷ್ಟ , ಲಾಭಾಲಾಭ, ಸುಖಾಸುಖ, ಭಾಗ್ಯಾಭಾಗ್ಯ ಎಲ್ಲವೂ ಶ್ರೀಹರಿಯಾಧೀನವಾಗಿ ಒದಗುವವು. ಜೀವನು ಸ್ವತಂತ್ರನಲ್ಲ.) 


 ರಾಗ ಷಣ್ಮುಖಪ್ರಿಯ 


 ಧ್ರುವತಾಳ 


ಸಿರಿದೇವಿಗೆ ಪೇಳಿ ಭಾಗ್ಯವ ಕೊಡಿಸೆಂದು

ಮರಳೆ ಮರಳೆ ಬೇಡ ಬಂದದಿಲ್ಲಾ

ಪರಮೇಷ್ಠಿಯ ಕರೆದು ನೊಸಲಲ್ಲಿ ನಿರ್ಮಿಸಿದ

ಬರಹ ವೆಗ್ಗಳ ಮಾಡೆಂದುಸುರಲಿಲ್ಲಾ

ಪುರವೈರಿಗೆ ಆಜ್ಞಾಪಿಸಿ ವೈರಾಗ್ಯವ

ಬರಲೆಂದು ದೀನನಾಗಿ ತುತಿಸಲಿಲ್ಲಾ

ಸುರಪತಿಗೆ ಭಟರನಟ್ಟಿ ಕಾಲಕಾಲಕ್ಕೆ

ತಿರಗುವ ಮನಸು ನಿಲ್ಲಿಸೆನಲಿಲ್ಲಾ

ಮರುತ ಮಿಕ್ಕಾದ ತತ್ವೇಶ್ವರ ಹಿಡತರಿಸಿ

ಸರುವ ಕಾರ್ಯವ ಮಾಡಿಕೊಡು ಎನಲಿಲ್ಲಾ

ಹರಿಯೆ ನಿನ್ನ ಇಚ್ಛೆ ಎನ್ನ ಸ್ವಭಾವ ಈ

ಪರಿಯಲ್ಲಿ ಅನಾದಿ ಕಾಲದಿಂದ ಬಿಡ -

ದಿರಲಿಕ್ಕೆ ತಿಳಿಯದೆ ಬಲು ಚಿಂತಿಪದೇನು

ನರಕವಾಗಲಿ ಸ್ವರ್ಗ ಮೇಣು ಲೋಕವಾಗಲಿ

ಪರಿಪರಿ ಭಂಗ ಸುಖತರವಾಗಲಿ ಇಹ -

ಪರದೊಳಗೆ ನೀನೆ ಇತ್ತದ್ದಲ್ಲದೆ ಬೇರೆ

ಕರದು ಉಪಾಯ ತೋರಬಲ್ಲವರಾರು

ಬರಿದೆ ಭ್ರಮೆಯಲ್ಲದೆ ಸಿದ್ಧ ಸಾಧನವಲ್ಲ

ಸಿರಿದೇವಿ ಆದರು ನಿನ್ನ ಅಪೇಕ್ಷಿಸುವಳಯ್ಯಾ

ನರರ ಪಾಡೇನಿನ್ನು ಯಾತಕ್ಕೆ ಭೀತಿ ಲೇಶ

ಥರವಲ್ಲ ಥರವಲ್ಲ ತೃಣ ಒಂದಲ್ಲಾಡಿಸಲು

ಸರ್ವ ಸ್ವಾತಂತ್ರ ಹರಿ ವಿಜಯವಿಟ್ಠಲರೇಯಾ 

ಧೊರೆ ನೀನೆ ಇರಲಿಕ್ಕೆ ಆರಾರು ಹಿರಿಯರೋ ॥ 1 ॥ 


 ಮಟ್ಟತಾಳ 


ಸೂರಿದಾ ಚಂದ್ರಮಾ ನಿರುತ ಉದುಭವಿಸಿ

ಆ ರಥಿಗೆ ಬಿಡದೆ ತಿರಗುವರು ಇಂದು

ಶ್ರೀರಮಣ ನಿನ್ನ ಭಯವಿದ್ದದರಿಂದ

ತಾರಾ ಪಥದಲ್ಲಿ ಸಂಚರಿಸುವರೂ

ಧಾರುಣಿ ಜನರೆಲ್ಲ ಒಂದಾಗಿ ಶಕ್ತಿ

ಮೀರಿ ಸಾಹಸ ಮಾಡೆ ನಿಲಲಾಪರೆ ಇವರು

ಓರಂತೆ ಸರ್ವ ಅಭಿಮಾನ್ಯರ ವ್ಯಾ -

ಪಾರ ನಿಶ್ಚಯವಾಗಿ ಸಂತತ ವೊಪ್ಪುತಿದೆ

ಕಾರಣ ಮೂರುತಿ ವಿಜಯವಿಟ್ಠಲರೇಯ 

ಆರಾಧಿಸುವರ ಒಡನೆ ತಿರುಗುವನೆ ॥ 2 ॥ 


 ತ್ರಿವಿಡಿತಾಳ 


ಬೊಮ್ಮನೊಳಗೆ ಬೊಮ್ಮ ಶಿವನೊಳಗೆ ಶಿವರೂಪ

ರಮ್ಮೆಯರಸ ನೀನೆ ವಾಸವಾಗಿ

ಒಮ್ಮನದಲಿ ಅವರ ವಶವಾಗಿ ಸರ್ವದಾ

ಅಮ್ಮಮ್ಮಾ ವ್ಯಾಪಾರಗಳ ಮಾಡುವೆ

ಸುಮ್ಮನಸರಲ್ಲಿ ಶುಭಕರ್ಮ ಎಸಗೂವೆ

ಹಮ್ಮಿನವರಲ್ಲಿ ಅಶುಭ ಕರ್ಮ

ನೆಮ್ಮ ನೆವವಾಗಿ ನಡಿಸುವ ನಾನಾ ಲೀಲಾ

ಸಮ್ಮಂಧ ಒಂದಿಲ್ಲ ನಿನ್ನ ವಿನಾ

ಬೊಮ್ಮಾಂಡ ಪುಟ್ಟಿಸಿ ಒಳಗೆ ಪ್ರೇರಕನಾಗಿ

ಪೆರ್ಮೆ ಇಂದಲಿ ಅರಘಳಿಗೆ ಬಿಡದೆ

ನಮ್ಮನ್ನ ಸಲಹುವ ವಿಜಯವಿಟ್ಠಲರೇಯ 

ನಿಮಿತ್ಯ ನೀನೆಂದರ್ಜುನಗೆ ಪೇಳಿದೆ ॥ 3 ॥ 


 ಅಟ್ಟತಾಳ 


ಸುರಮುನಿ ಪಾಡಿದಾ ಕರಿರಾಜ ಕೂಗಿದಾ

ಸ್ಮರಸಿದಜಾಮಿಳಾ ಸುರನದಿ ಸೂನು ಭ -

ಳಿರೆ ಶಪ್ತ ಮಾಡಿದಾ ಧರಣೀಶ ಬಲಿದಾನ

ವೆರೆದಾ ಪ್ರಲ್ಹಾದನು ಮೊರೆ ಇಟ್ಟ ಭೃಗು ಬಂದು 

ಭರದಿಂದ ಒದದನೆ

ಹರನು ರೂಪವ ನೋಡಿ ಮರಳು ಸುತ್ತಿದನೇನೊ

ತರುಳ ಧ್ರುವನು ತಪ ಧರಿಸಿದನೆ ತಾನೆ

ಭರತನು ಮಹಾ ಜಡ ತೆರನಾಗಿ ಇದ್ದನೆ

ವರ ಅಂಬರೀಷರಾಯರು ಮೊದಲಾದಂಥ 

ಪರಮ ಭಕ್ತರು ಸಂಚರಿಸಿದ ವ್ರತ ಧರ್ಮ

ಪರಿ ಪರಿ ಚತುರ್ದಶ ಧರೆಯೊಳಗೆ ತುಂಬಿ

ಇರಲಾಗಿ ಸಕಲ ವಿಸ್ತರಮೆಲ್ಲ ನೋಡೆ ಇ -

ವರಿಂದಾದದ್ದಲ್ಲಾ ಹರಿ ನೀನೆ ಒಳಗಿದ್ದು

ಸುರರಾದಿಗಳಿಗೆ ಗೋಚರವಾಗದೆ ತೀ -

ವರ ಪ್ರೇರಿಸಲು ಅವರು ನಿನ್ನ ಪೂಜಿಸಿ -

ದರು ಎಂಬೊದಲ್ಲದೆ ಎರಡನೆ ಮಾತಿಲ್ಲಾ

ವರಮೂರ್ತಿ ವಿಜಯವಿಟ್ಠಲರೇಯ ಸ್ವಾತಂತ್ರ 

ಚರಾಚರದಲಿ ನೀನೆ ಪರಾಪರದಲ್ಲಿ ಸತ್ಯ ॥ 4 ॥ 


 ಆದಿತಾಳ 


ಕಷ್ಟ ಹಾರೈಸದಲೆ ತಾನಾಗಿ ಬರುವದು

ಇಷ್ಟೇ ಮಾತುರ ಕಷ್ಟ ಬರಲೆಂದ ನರನುಂಟೆ

ಶ್ರೀಷ್ಟೇಶ ಸಂತೋಷವಾಗಲೆಂದರೆ ಬಾರದು

ಭ್ರಷ್ಟ ಸಂಕಲ್ಪಗಳು ನಮ್ಮಿಂದ ಮಾಡಿಸುವೆ

ಕಷ್ಟಕ್ಕೆ ದೈತ್ಯರಿಗೆ ಪ್ರೇರಣೆಯಾಗಿ ಒಂ -

ದಿಷ್ಟು ಕೊರತೆಯಾಗದಂತೆ ನೀನುಣಿಸುವೆ

ಶಿಷ್ಟ ಜನರಿಗೆ ನೀನೆ ಪ್ರೇರಿಸಿ ಬಿಡದೆ

ಇಷ್ಟು ಪುಣ್ಯಗಳು ಅನುಭವಿಸುವಂತೆ ಮಾಡುವೆ

ಕಷ್ಟ ಸುಖಗಳೆರೆಡು ತಾನಾಗಿ ಬರಲಿಕ್ಕೆ

ಶಿಷ್ಟ ದುಷ್ಟರಿಗೆಲ್ಲ ಪೇಳೆನಲ್ಯಾತಕೆ

ಪುಟ್ಟು ಸಾವುಗಳಿಗೆ ನಿರ್ಮಾಣಗೈಸಿದಾಗ

ಅಷ್ಟು ಸಂಕಲ್ಪಗಳೂ ನಿನ್ನಿಂದ ಸಿದ್ಧವಯ್ಯಾ

ಶಿಷ್ಟ ಜನರ ಪ್ರೀಯ ವಿಜಯವಿಟ್ಠಲರೇಯಾ 

ಮುಟ್ಟಿ ನೆನಿಸಿದವರ ಮನಸಿನಂತೆ ಮಾಳ್ಪೆ ॥ 5 ॥ 


 ಜತೆ 


ಪೊಸದಾಗಿ ಕರ್ಮಗಳು ಬರಲುಳ್ಳವೆ ಇಲ್ಲಾ

ಅಸುರ ನಿರ್ಜರ ಗುರು ವಿಜಯವಿಟ್ಠಲರೇಯಾ ॥

****