Audio by Vidwan Sumukh Moudgalya
ಶ್ರೀ ಪ್ರಸನ್ನ ವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು
೧ . " ಶ್ರವಣ ಭಕ್ತಿ "
ಕೀರ್ತನೆ :......
ರಾಗ : ಷಣ್ಮುಖಪ್ರಿಯ ಖಂಡಛಾಪು
ಹರಿಕಥಾಶ್ರವಣ ಸಾಧನವೆ ಮುಕುತಿ , ಇದಕೆ
ಸರಿಧರ್ಮವಿಲ್ಲೆಂದು ಪೇಳ್ವವು ಶ್ರುತಿತತಿ ॥ಪ॥
ಶ್ರವಣದಿಂದಲಿ ಸಕಲ ಸದ್ಧರ್ಮಸಾಧನವು
ಭುವಿಯಲ್ಲಿ ಪೂಜ್ಯರಾಹೋರು ಸುಜನರು
ಸವೆಯದಾನಂದಮಯ ಭಕುತಿಸಿರಿ ದೊರಕುವಿದು
ಅವರೇವೆ ಸೂಜ್ಞರಾಗ್ದರು ಹರಿಯ ದಯದಿ ॥೧॥
ಅನವರತ ಶ್ರವಣವ ಮನನಮೂಲವು ಗಡ
ಮನನದಲಿ ಹರಿಧ್ಯಾನ ಖಚಿತಾಹುದು
ಘನಪರಾತ್ಪರ ತತ್ವ ತಿಳುಹಿ ವಿರಕುತಿ ಭಾಗ್ಯ-
ವನು ಕೊಟ್ಟು ಶ್ರೀವಿಷ್ಣು ತೋರ್ವ ಗತಿ ಈವ ॥೨॥
ಶ್ರವಣದಲಿ ನಾರದಗೆ ಗತ ಕಲ್ಪದ್ಯಪರೋಕ್ಷ
ಸವಿಯದೆ ಸಾಮ್ರಾಜ್ಯ ಲೆಕ್ಕಿಸದ ಪ್ರಿಯವ್ರತ
ಅವನಿಷರು ವನಪೊಕ್ಕು ಹರಿಯನಾಶ್ರಯಿಸಿದರು
ದಿವಸೇಳರಲಿ ವಿಷ್ಣು ರಾತನಿಗೆ ಮೋಕ್ಷಾ ॥೩॥
ದಿವಿಜ ಋಷಿ ಗಂಧರ್ವ ನೃಪರು ಮನುಜೋತ್ತಮರು
ವಿವಿಧತಿರ್ಯಗ್ಜಾತಿ ಸಜ್ಜೀವರು
ಶ್ರವಣಮಾತ್ರದಲಿ ಕಂಡರು ಸದ್ಗತಿಯನವರು
ದಿವಸಗಳೆಯದಲೆ ಆದರದಿಂದ ಬುಧರು ॥೪॥
ಹರಿಕಥಾಶ್ರೋತರಿಗೆ ಕರತಲವು ಮೋಕ್ಷ ಗಡ
ಗುರುದ್ವಾರದಲಿ ಹರಿ ದೊರಕುವನು ಸತ್ಯ
ಗುರುಮಧ್ವವರದ ಶ್ರೀಪ್ರಸನ್ನವೆಂಕಟ ಕೃಷ್ಣ
ಕರವಿಡಿದು ಪೊರೆವ ಸದ್ಗುರು ಪ್ರಿಯ ಜಗಕೆ ॥೫॥
*******