Showing posts with label ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ kamalanabha vittala. Show all posts
Showing posts with label ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ kamalanabha vittala. Show all posts

Thursday, 5 August 2021

ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ ankita kamalanabha vittala

 ..

kruti by Nidaguruki Jeevubai


ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ

ಸಾಕಲಾರದೆ ಎನ್ನ ನೂಕಿ ಭವದೊಳಗೆ ಪ


ನಿನ್ನ ನಾಮಸ್ಮರಣೆ ಮಾಡದಲೆ ಹಗಲಿರುಳು

ಅನ್ಯ ವಿಷಯಗಳಿಂದ ನೊಂದು ಬಳಲಿದೆನೊ

ನಿನ್ನ ಧ್ಯಾನವ ಮಾಳ್ಪಚ್ಛಿನ್ನ ಭಕ್ತರೊಳಿರಿಸಿ

ಚನ್ನಾಗಿ ಸಲಹೊ ಪ್ರಸನ್ನ ಮಾಧವನೆ 1


ಘನ್ನ ಮಹಿಮನೆ ಆಪನ್ನ ಜನರನು ಪೊರೆದೆ

ಸನ್ನುತಾಂಗನೆ ದೇವ ಸರ್ವವ್ಯಾಪಕನೆ

ಪನ್ನ ಗಾರಿವಾಹನ ಪ್ರಸನ್ನ ಶ್ರೀಹರಿ ಶೌರಿ

ಎನ್ನ ಕಡೆಹಾಯಿಸಯ್ಯ ಜೀಯ 2


ಅಕ್ಷಯ ಫಲಪ್ರದ ಪಕ್ಷಿವಾಹನ ಕೃಷ್ಣ

ಕುಕ್ಷಿಯೊಳು ಜಗವನಿಂಬಿಟ್ಟ ಶ್ರೀ ಹರಿಯೆ

ರಕ್ಷ ಶಿಕ್ಷಕ ಜಗದ್ರಕ್ಷ ಪಾಂಡವ ಪಕ್ಷ

ಈಕ್ಷಿಸಿ ಎನ್ನನುದ್ಧರಿಸಿ ಸಲಹದಲೆ3


ಪರಿಪರಿಯ ಕಷ್ಟಗಳ ಪರಿಹರಿಸಿ ಭವದೊಳಗೆ

ದುರಿತದೂರನೆ ಕಾಯೊ ಶರಣ ಜನರ

ಪರಿಸರನೊಡೆಯ ನಳನಾಮ ಸಂವತ್ಸರದಿ

ಕರೆಕರೆಯ ಕಷ್ಟಗಳ ಬಿಡಿಸಿ ಸಲಹದಲೆ4


ಕನಕಗರ್ಭನ ಪಿತನೆ ಕಮಲನಾಭ ವಿಠ್ಠಲ

ಮಿನಗುತಿಹ ದಿವ್ಯ ಸೌಂದರ್ಯ ಮೂರುತಿಯೆ

ಸನಕಾದಿ ಮುನಿವಂದ್ಯ ಕ್ಷಣ ಬಿಡದೆ ಸ್ಮರಿಸುವರ

ಇನಕುಲೇಂದ್ರನೆ ದೇವ ಬಿಡದೆ ಸಲಹದಲೆ5

***