by yadugiriyamma
ಅಸಾರವಾದ ಸಂಸಾರಸಾಗರವ
ಪಾರುಗಾಣವುದೆಂದಿಗೊ ರಂಗಯ್ಯ ಪ
ಘೋರಾಹಂಕಾರವ ಬಿಟ್ಟು ನಿನ್ನಯಪಾದ
ಸೇರುವುದಿನ್ನೆಂದಿಗೊ ಅ.ಪ
ಕಾಮಕ್ರೋದಲೋಭಮೋಹಂಗಳನೆಲ್ಲಾ
ದೂರಮಾಡುವದೆಂದಿಗೆ ರಂಗಯ್ಯ
ಡಂಬಾಸೂಯೆ ಅವಿದ್ಯಾಸಂಬಂಧವ
ಬಿಟ್ಟುಬಿಡುವುದೆಂದಿಗೆ 1
ಆಶಾಪಾಶ ಬಹುಕ್ಲೇಶಂಗಳನೆ
ನಾಶ ಮಾಡುವುದೆಂದಿಗೊ ರಂಗಯ್ಯ
ವಾಸುದೇವನೆ ನಿಮ್ಮ ಪಾದಾರವಿಂದದೊಳು
ವಾಸವಾಗುವದೆಂದಿಗೊ 2
ಸುಖದುಃಖಮಾನಾಪಮಾನಂಗಳ್ನೆಲ್ಲಾ
ನಮವ ಮಾಡುವದೆಂದಿಗೊ ರಂಗಯ್ಯ
ಲಾಭಾಲಾಭವು ಶೀತೋಷ್ಣಂಗಳ
ಸಮವ ಮಾಡುವುದೆಂದಿಗೊ 3
ಕೆಟ್ಟನುಡಿಯು ನಿಷ್ಟುರವಾಕ್ಯಂಗಳ
ಬಿಟ್ಟುಬಿಡುವದೆಂದಿಗೊ ರಂಗಯ್ಯ
ಕೃಷ್ಣಮೂರುತಿ ನಿಮ್ಮ ಪುಟ್ಟ ಪಾದದೊಳೆನ್ನ
ತಟ್ಟನೆ ಸೇರಿಸಯ್ಯ 4
ಘೋರಸಂಸಾರಸಾಗರವ ದಾಟುವುದಕ್ಕೆ
ದಾರಿ ತೋರಿಸೋ ಎನಗೆ ರಂಗಯ್ಯ
ಶ್ರೀ ಶ್ರೀನಿವಾಸನೇ ನಿಮ್ಮಪಾದಾರವಿಂದದಾ
ಭಕ್ತಿನಾಮವನು ಕೊಡಿಸಯ್ಯ 5
****