ಶ್ರೀಮದ್ವಿದ್ಯಾಪ್ರಸನ್ನತೀರ್ಥರು ಶ್ರೀವ್ಯಾಸರಾಜರನ್ನು ಕುರಿತು ರಚಿಸಿರುವ ಕೃತಿ
ರಾಗ : ಕಾಪಿ ಆದಿತಾಳ
ಏಸು ಸುಕೃತ ಫಲವೋ ದರುಶನ
ಏಸು ಪುಣ್ಯಕರವ ॥ಪ॥
ಏಸು ಜನ್ಮಗಳ ಸುಕೃತ ಫಲವೋ ಶ್ರೀ
ವ್ಯಾಸರಾಜ ಗುರುವರ್ಯರ ದರುಶನ ॥ಅ.ಪ॥
ವರಕರ್ಣಾಟಕ ಸಿಂಹಾಸನದಲಿ
ಮೆರೆಯುತಲಿರುವ ಯತೀಂದ್ರರ ದರುಶನ ॥೧॥
ಚಂದ್ರಿಕ ನ್ಯಾಯಾಮೃತ ತಾಂಡವದಲಿ
ನಂದಕುಮಾರನ ಕುಣಿಸುವ ದರುಶನ ॥೨॥
ಹಗಲು ದೀವಟಿಗೆ ಹಸುರು ಛತ್ರಿ ಮುಖ
ಬಗೆ ಬಗೆ ಬಿರುದಾವಳಿಗಳ ವೈಭವ ॥೩॥
ರಾಜನ ಕುಹಯೋಗವನೆ ನಿವಾರಿಸಿ
ರಾಜಾಧಿರಾಜ ಸಂಪೂಜ್ಯರ ದರುಶನ ॥೪॥
ರುಕುಮಿಣಿ ಭಾಮಾರಮಣನ ಪೂಜಿಸಿ
ಸುಕೃತ ಸ್ವರೂಪ ಪ್ರಸನ್ನರ ದರುಶನ ॥೫॥
***