..
ನಂದನಂದನ ಅರವಿಂದದಳಾಕ್ಷನೆ
ವಂದಿಸುವೆ ಪಾದಾರವಿಂದಗಳಿಗೀಗ ಪ
ಪದುಮನಾಭನೆ ನಿನ್ನ ಪಾದಭಕುತಿಯೊಳಿಟ್ಟು
ಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆ
ಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾ
ಮದಡ ಬುದ್ಧಿಲಿ ನಿನ್ನ ಮರೆತು ಕಳೆವೆನೊ ಕಾಲ 1
ಭೂತಳದೊಳು ಸಲಹೋ ದಾತರೆಲ್ಲಿಹರಿನ್ನು
ಮಾತುಳಾಂತಕನೆ ಈ ಮಾತ ಪೇಳೆನಗೆ
ಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ-
ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ 2
ವಾಸುಕೀಶಯನನ ವರವ ಪಡೆಯದೆ ನಾ
ಮೋಸಹೋದೆನೊ ಈ ಸಂಸಾರದೊಳು ಸಿಲ್ಕಿ
ಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನ
ಘಾಸಿ ಮಾಡದೆ ಹೃಷಿಕೇಶ ಕರುಣದಿಂದ 3
***