Showing posts with label ನೋಡಿದರೆ ನೋಡು ಮಾತಾಡು ತಾಯಿಗಳೆಂದು others. Show all posts
Showing posts with label ನೋಡಿದರೆ ನೋಡು ಮಾತಾಡು ತಾಯಿಗಳೆಂದು others. Show all posts

Friday, 27 December 2019

ನೋಡಿದರೆ ನೋಡು ಮಾತಾಡು ತಾಯಿಗಳೆಂದು others

ರಾಗ ಮುಖಾರಿ ಝಂಪೆ ತಾಳ

ನೋಡಿದರೆ ನೋಡು ಮಾತಾಡು ತಾಯಿಗಳೆಂದು
ನೋಡಿ ಭ್ರಮಿಸಲು ಬೇಡ ಪರಸತಿಯರ ||ಪ||

ದಾರಿಯೊಳು ಭಯವೆಂದು ಚೋರರೊಳು ಹೋಗುವರೆ
ಕೇರು ಬೀಜದ ತೈಲ ಲೇಪಿಸುವರೆ
ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ-
ದೇರುವರೆ ಪರಸತಿಯ ಪಾಪಿ ಮನವೆ ||೧||

ಹಸಿಯ ಎಕ್ಕೆಯ ಕಾಯಿ ನಸುಗುನ್ನಿ ತುರಚೆಯನು
ತೃಷೆಗೆ ಮೆಲುವರೆ ವ್ಯಸನದೋರೀತೆಂದು
ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ
ವಿಷಯಕೆಳಸುವದೇಕೆ ಪಾಪಿ ಮನವೆ ||೨||

ಪ್ರೀತಿಯಿಂದಲಿ ಸತಿಯ ಮನೆಗಾಗಿ ಇಂದ್ರನತಿ-
ಕಾತುರದಿ ಹೋಗಿ ಮೈ ತೂತಾದನು
ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ
ಸೋತು ದ್ರೌಪದಿಗೆ ಕೀಚಕ ಕೆಟ್ಟನು ||೩||

ಕೆಟ್ಟವರ ದೃಷ್ಟ ಇನ್ನೆಷ್ಟು ಹೇಳಿದರೇನು
ಬಿಟ್ಟುಬಿಡುವರೆ ತಮ್ಮ ಕೆಟ್ಟ ಗುಣವ
ಕಟ್ಟಿನೊಳಗಿಟ್ಟು ಉತ್ಕೃಷ್ಟ ಜನಗಳ ಸಂಗ
ಕೊಟ್ಟು ಸಲಹೊ ಅಚಲಾನಂದ ವಿಠ್ಠಲ ||೪|
*******