..
ಇಂದಿರೆ ಮಜ್ಜನನಿಯೆ | ಇಂದಿರೆ ಪ
ಇಂದಿರೆ ಸಿಂಧು ಸಂಭೂತೆ | ಪೂರ್ಣ
ಚಂದಿರ ಮುಖಿ ಸುಖದಾತೆ ಅ.ಪ
ಇಂದೀವರಾಕ್ಷಿಯೆ | ಪೊಂದಿ ತ್ವತ್ವಾದಕೆ
ವಂದಿಪೆ ಮನ್ಮನ ಮಂದಿರದೊಳು ಬಾರೆ ||
ಕೃತಿ ಶಾಂತಿ ಜಯಮಾಯೆ ಸೀತೆ ದೇವಿ
ಪತಿತಪಾವನೆ ಕ್ಷಿತಿಜಾತೆ | ವಿಧಿ
ಶಿತ ಕಂಧರಾದಿ ನಮಿತೆ | ಮಹ |
ಪತಿವ್ರತೆ ಪರಮವಿಖ್ಯಾತೆ ಆಹಾ
ಶೃತಿವಿನುತಳೆ ಸದಾ | ನುತಿಸಿ ಬೇಡಿ ಕೊಂಬೆ
ಅತಿಹಿತದಲಿ ತವ ಪತಿಯ ಪಾದವ ತೋರೋ 1
ಹರಿಣಲೋಚನೆ | ಶ್ರೀರುಕ್ಮಿಣೀ | ಮದ
ಕರಿ ಮಂದಗಮನೆ ಕಲ್ಯಾಣಿ ದ್ವಿಜ
ಪರಿವಾರ ಸಂಸ್ತುತೆ ಜಾಣೆ | ಚಾರು
ಚರಿತೆ ಚಂಚರೀಕ ಸುವೇಣಿ || ಆಹಾ ||
ಸಿರಿ ಸತ್ಯಭಾಮೆಯ | ಮರೆಯದೆ ಎನ್ನಯ
ದುರಿತ ವಿಚ್ಛೇದಿಸಿ | ಹರಿಸ್ಮರಣೆ ನೀಡೆ 2
ಕುಂದರದನ ಲಕುಮಿಯೆ | ಕಂಬು ಕಂಧರೆ
ಕಾಮನ ತಾಯೆ ಅರ
ವಿಂದ ಸದನೆ ಜಾನಕಿಯೆ | ಭವ
ಬಂಧನ ಬಿಡಿಸಿ ಕರಪಿಡಿಯೆ ಆಹಾ
ಚಂದನ ಗಂಧಿಯೆ | ನಂದ ನಂದನ ಶಾಮ
ಸುಂದರವಿಠಲನ್ನ ಸಂದರುಶನವೀಯೆ 3
***