Showing posts with label ಎಲೆ ಎಲೆ ಪರಮ guruvijaya vittala ankita suladi ಕಲಿನಿಗ್ರಹ ಸುಳಾದಿ ELE ELE PARAMA KALINIGRAHA SULADI. Show all posts
Showing posts with label ಎಲೆ ಎಲೆ ಪರಮ guruvijaya vittala ankita suladi ಕಲಿನಿಗ್ರಹ ಸುಳಾದಿ ELE ELE PARAMA KALINIGRAHA SULADI. Show all posts

Monday, 9 December 2019

ಎಲೆ ಎಲೆ ಪರಮ guruvijaya vittala ankita suladi ಕಲಿನಿಗ್ರಹ ಸುಳಾದಿ ELE ELE PARAMA KALINIGRAHA SULADI

Audio by Mrs. Nandini Sripad

ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ 
( ಗುರುವಿಜಯವಿಟ್ಠಲ ಅಂಕಿತ )
 ಕಲಿನಿಗ್ರಹ ಸುಳಾದಿ 
( ಕಲಿಬಾಧಾ ನಿವೃತ್ತಿ ಮಾಡಲು ಪ್ರಾರ್ಥನಾ )

 ರಾಗ ಆನಂದಭೈರವಿ 

 ಧ್ರುವತಾಳ 

ಎಲೆ ಎಲೆ ಪರಮ ದುಷ್ಟನಾದ ಕಲಿಯೆ ನಿನ್ನ 
ತಲೆಯ ಮೇಲೆ ಕಾಲು ಕೊಟ್ಟು ನಡಿವೆ ಸತತ
ಬಲಹೀನನೆಂದು ತಿಳಿದು ನೈಜ ಸ್ವಭಾವದಿಂದ
ಕುಲಗೇಡಿ ಚೇಷ್ಟೆಗಳ ಪ್ರೇರಿಸುವಿ
ಮಲಿನ ಯುಕ್ತನೆ ನಿನ್ನ ಕರ್ತೃತ್ವ ಎನ್ನ ಮೇಲೆ
ನೆಲೆಯಾಗಿ ನಿಂದಿರದು ಎಂದೆಂದಿಗೆ
ತಿಳಿದು ನೋಡಿಕೋ ಉಭಯ ಅಂಶಾಂಶದಲ್ಲಾಗೆ 
ತಲಿಯ ಬಾಗಿದವನೆ ದುರುಳ ನಿನಗೆ 
ಬಲವೀರ್ಯನಾದ ಎನ್ನ ಒಡಿಯನ ಬಲದಿಂದ 
ಚಲಿಸದಲೇ ನಿನ್ನ ತೃಣಕೆ ಬಗೆದು
ಕೆಲವು ಶಸ್ತ್ರಾಸ್ತ್ರದಿಂದ ಕೆಲವು ವಾಕ್ಯದಿಂದ
ತಲೆ ಎತ್ತದಂತೆ ಮಾಡಿದದನು ಮರದ್ಯಾ
ಮೊಲದಂತೆ ಜರಿದು ಈಗ ಮದೋನ್ಮತ್ತವಾದ
ಬಲದಿಂದ ನಿನ್ನ ಯುಗವೆಂದು ತಿಳಿದು
ಮಲತ ಗರ್ವದಿಂದ ಮಾಯಾ ಮಾಡುವಿ ಸುಜನ 
ಕುಲದೋಷಕನೆ ಬಲು ಕುಜನ ಮಣಿಯೇ 
ಬಲಿಗೆ ಬಲಿಯಾದ ಗುರುವಿಜಯವಿಠ್ಠಲರೇಯನ 
ಬಲ ಎನಗಿರಲಾಗಿ ಎದುರೇ ನೀನು ॥ 1 ॥

 ಮಟ್ಟತಾಳ 

ಬಲವುಳ್ಳವನೆಂದು ಬಲು ಗರ್ವದಲಿಂದ
ಬಳಲುವದು ಸಲ್ಲ ಲಜ್ಜೆಯನು ತೊರೆದು
ಬಲಯುಕ್ತ ನೀನಾಗಿ ಅಂದಿನ ಕಾಲದಲ್ಲಿ
ಮಲತ ಮಲ್ಲರ ಗಂಡ ನೆನಿಪನ ಕೈಯಿಂದ
ತಲಿಯ ತುಳಿಸಿಕೊಂಡ ಚರಣ ತಳದಿಂದ
ಹಳಿ ಹಳಿ ನಿನ್ನ ಪೌರುಷತನ ಸುಡಲಿ
ಭಳಿರೆ ಭಳಿರೆ ಗುರುವಿಜಯವಿಠ್ಠಲರೇಯನ 
ಒಲಿಮೆಯುಳ್ಳವರೆಲ್ಲ ನಿನಗಂಜುವರೇ ॥ 2 ॥

 ತ್ರಿವಿಡಿತಾಳ 

ಬಲಹೀನ ಮನುಜನೆ ನಿನ್ನ ಕುಹಕ ನಡತಿ ದು -
ರ್ಬಲರಾದವರ ಮೇಲೆ ನಡೆಯುವದಲ್ಲದೆ
ಬಲವುಳ್ಳ ಜನರಲ್ಲಿ ನಡೆವೊದಲ್ಲ ಕೇಳೊ
ತಿಳಿದು ನೋಡಿಕೋ ಎನ್ನ ಬಲದ ಮಹಿಮೆ
ಜಲಜ ಜಾಂಡವನ್ನು ಕಲ್ಪಿಸಿ ಸ್ಥಿ-
ತಿ ಲಯ ನಿಯಮನ ಜ್ಞಾನಾಜ್ಞಾನಾ
ಬಲವದ್ರೂಪವಾದ ಬಂಧಮೋಕ್ಷದಿ ಅಷ್ಟ ಪ್ರ -
ಬಲ ಕರ್ತೃತ್ವದಿಂದ ದಿವಿಜ ದನುಜಾ -
ವಳಿಗೆ ಶಿಕ್ಷಿಸುವ ತಾ ದುಷ್ಟ ಮರ್ದಕನೆನಿಪ
ಜಲಧರಾವರ್ಣ ಕೃಷ್ಣರಾಯ ಎನ್ನ
ಕುಲದೈವನೆನಿಪ ಮತ್ತು ಸಖನೆಂದೆನಿಸಿಕೊಂಬ ನಿನ್ನ
ತಲಿಯ ನೊರಸಿದ ಧೀರ ಭ್ರಾತೃನೆನಿಪ
ಕುಲಗೇಡಿ ನಿನ್ನಂಥ ಕುಹಕರ ಶಿಕ್ಷಿಸುವ
ಬಲಿಯಾದ ದೇವ ಪೂರ್ವೋಕ್ತದಂತೆ
ಬಲವು ಇನಿತು ಇರಲು ನಿನಗಂಜುವದೆಂತೊ
ಸುಳಿಯದಿರು ಇತ್ತ ಸೌಖ್ಯವಿಲ್ಲಾ
ಅಲವಬೋಧರ ಪ್ರಿಯ ಗುರುವಿಜಯವಿಠ್ಠಲರೇಯ 
ತಲಿಯ ಮೇಲಿಪ್ಪ ಛತ್ರದಂತೆ ಕಾಯ್ವಾ ॥ 3 ॥

 ಅಟ್ಟತಾಳ 

ಬಲವೈರಿ ಎನ್ನಯ ಜನಕನೆಲೊ ಕೇಳು ಅ -
ಖಿಳ ಸುಮನಸರು ಎನಗೆ ಸಹಾಯರೆಲೊ
ಖಳಕುಲ ಮಣಿ ನಿನ್ನ ನೈಜ ವ್ಯಾಪಾರವ
ಬಲ ನಡಿಯದಲೊ ಕಲ್ಪಾಂತ್ಯದಲ್ಲಾಗಿ
ಖಳದರ್ಪಭಂಜನ  ಗುರುವಿಜಯವಿಠ್ಠಲನ್ನ 
ಬಲದಿಂದ ನಿನ್ನ ತಲಿಯ ಮೆಟ್ಟುವೆನೊ ॥ 4 ॥

 ಆದಿತಾಳ 

ಕಾಲನಾಮಕ ಭಗವಂತನ ಇಚ್ಛಿಯಿಂದ 
ಮೂಲ ಕಾರಣವಾದ ಅನಾದಿ ಕರ್ಮದಿಂದ 
ಪಾಲಕನಾದ ಹರಿ ಪರಾಙ್ಮುಖನಾಗುತಿರೆ
ಇಳೆಯೊಳು ಜನಿಸಿದಾಗ ಪೂರ್ವೋಕ್ತವಾದ ಬಲ
ತೊಲಗಿಪ್ಪ ಕಾಲದಲ್ಲಿ ಇದೆ ಇದೆ ಸಮಯವೆಂದು
ಖಳಕುಲಮಣಿ ನಿನ್ನ ಕುಹಕದ ನಡತೆಯಿಂದ
ಮೇಲಾದ ಸುಖಗಳ ಅಪಹಾರ ಮಾಳ್ಪೆನೆಂದು
ಬಲು ಮೋದದಿಂದ ನೀನು ಹಿಗ್ಗುವದು ಸಲ್ಲಾ
ಕಾಲಕ್ಲಿಪ್ತ ನಂತರ ಹರಿ ಕೃಪೆಯಿಂದ ಎನ್ನ
ಆಳಾಗಿ ನೀನೆ ಉಂಬಿ ಕಲಿಕೃತ ಕಲ್ಮಷವಾ
ಆಲೋಚನೆ ಇದಕಿಲ್ಲ ಇದು ಸತ್ಯ ಇದು ಸತ್ಯ
ಶ್ರೀಲಲನಿಯ ಪ್ರಿಯ ಗುರುವಿಜಯವಿಠ್ಠಲನ್ನ 
ಆಳುಗಳಂಜುವರೆ ನಿನಗೆಂದಿಗಾದರು ॥ 5 ॥

 ಜತೆ 

ಕಂಟಕಾರಿಯೆ ಮೆಟ್ಟಿ ನಿನ್ನ ಎದಿಯ ತುಳಿವೆ ನಿ -
ಷ್ಕಂಟಕ ಗುರುವಿಜಯವಿಠ್ಠಲನ್ನ ಕೃಪೆಯಿಂದ ॥
************