ಶ್ರೀಗೋಪಾಲದಾಸಾರ್ಯ ವಿರಚಿತ ಶ್ರೀಹರಿ ಸ್ವತಂತ್ರ ಸುಳಾದಿ
(ಶ್ರೀಹರಿಯು ಸರ್ವತಂತ್ರ ಸ್ವತಂತ್ರನಾದರೂ ಕರುಣಾಳು. ಶ್ರೀಹರಿಯು ಪ್ರಯೋಜನವಿಲ್ಲದೇ , ಜೀವರುಗಳ ರಕ್ಷಣೆ ಭಾರಕರ್ತನು. ಅನ್ಯರೊಬ್ಬರಿಲ್ಲ. ಸಕಲ ಕಾಲದಲ್ಲಿ ಅವನೇ ರಕ್ಷಕ. ಮಹಾರಾಜಾಧಿರಾಜ.)
ರಾಗ ಕಾಪಿ
ಧ್ರುವತಾಳ
ಅಪಕಾರ ಉಪಕಾರ ಹರಿಯೆ ನಿನ್ನಿಂದಲೇವೆ
ರಿಪು ಮಿತ್ರಗಳ್ವ್ಯಾಪಾರ ಹರಿಯೆ ನಿನ್ನದು ನೋಡಾ
ಕಪಟ ನಿಷ್ಕಪಟತ್ವ ನಿನ್ನಿಂದಲಾಗುವದು
ಶಪಥ ಅಶಪಥಗಳು ನಿನ್ನಾಧೀನವು ಸ್ವಾಮಿ
ಕ್ಲಿಪುತ ಅಕ್ಲಿಪುತಗಳು ನಿನ್ನಾಧೀನವು ನೋಡಾ
ಅಪರಾಧ ಸುಪರಾಧ ನಿನ್ನಾಧೀನವು ನೋಡಾ
ಅಪವರ್ಗ ಸುಪವರ್ಗ ನಿನ್ನಾಧೀನ
ಸಪುತ ದ್ವಿಲೋಕ ಸಪುತ ದ್ವೀಪ ನಿನ್ನಾಧೀನವು
ಸಪುತಾವರ್ಣವು ಉಳ್ಳ ಬೊಮ್ಮಾಂಡ ನಿನ್ನಾಧೀನ
ಸ್ವಪನ ಜಾಗ್ರ ಸುಷುಪ್ತಿ ವ್ಯಾಪಾರ ನಿನ್ನಾಧೀನ
ಸಫಲ ನಿಷ್ಫಲ ಸರ್ವ ಸಾಧನ ನಿನ್ನಾಧೀನ
ಉಪದೇಶಾನುಪದೇಶಗಳು ನಿನ್ನಾಧೀನ
ಗುಪುತ ವ್ಯಾಪುತ ಮೂರ್ತಿ ಗೋಪಾಲವಿಟ್ಠಲ
ತೃಪುತ ನಿತ್ಯ ನಿರ್ಲಿಪ್ತ ನಿರ್ದೋಷ ನಿಜಾನಂದ ॥ 1 ॥
ಮಟ್ಟತಾಳ
ಲೋಕಾಲೋಕಾದಿಗಳಲ್ಲಿ ವ್ಯಾಪ್ತ
ಲೋಕಾಧಿಪತಿಗಳಿಗೆ ಒಡಿಯಾ
ಸಾಕಾರನಾಗಿ ಸಾಕುವನು
ಆಕಾರ ಅಂತ್ಯ ಕಂಡವರಿಲ್ಲ
ಜೋಕೆ ಮಾಡುವ ಗತಿಗಳ ಅರಿದು
ನಾ ಕಾಣೆ ಇನ್ನೊಂದೊಸ್ತ ಸಾದ್ರಿಸ್ಯವೋ
ಶ್ರೀಕರುಣಾಕರ ಗೋಪಾಲವಿಟ್ಠಲ
ಏಕನಲ್ಲದೆ ಅನ್ಯರ ನಾ ಕಾಣೆ ಪ್ರಭುವಿನ್ನ ॥ 2 ॥
ರೂಪಕತಾಳ
ಹರಿ ಅರಿವಂತೆ ಪರಿಚಾರಕರಾರಿವನಾವ
ಹರಿ ಸೇವೆ ಕೊಂಡಂತೂಳಿಗವ ಕೊಂಬನಾವ
ಹರಿ ತಿಳಿದಂತೆ ತಿಳಿದು ಸಾಕುವನಾವ
ಹರಿ ನೋಡಿದಂತೆ ಪರಿವಾರ ನೋಡುವನಾವ
ಹರಿ ಆಳಿದಂತೆ ಪರಿಚಾರಕರಾಳುವನಾವ
ಹರಿ ಸಾರ್ವಭೌಮ ಸುರಚಕ್ರವರ್ತಿ ನೋಡು
ಸಿರಿ ರಾಜಾಧಿರಾಜ ಧೊರೆ ಮಹಾರಾಜ
ಸಿರಿ ಅಜಭವವಂದ್ಯಾ ಗೋಪಾಲವಿಟ್ಠಲ
ಧೊರೆ ಒಬ್ಬನಲ್ಲದೆ ನರರು ಪ್ರಭುಗಳೆ ॥ 2 ॥
ಝಂಪೆತಾಳ
ತನ್ನ ಯೋಗಕ್ಷೇಮವನ್ನು ಅರಿಯದ ಪ್ರಭುವು
ಇನ್ನಾವ ಪರಿವಾರದಿರವನು ಬಲ್ಲನೆ
ತನ್ನಗಾಗೋ ಸುಖ ದುಃಖ ತಾನರಿಯದವ
ಅನ್ಯರಿಗನುಭವ ತಂದೀಯಲಾಪನೆ
ಭಿನ್ನ ಕಾಮದಲ್ಲಿ ಬಯಕೆ ಉಳ್ಳವನು
ಚಿನ್ನುಮಯ ಹರಿಯಂತೆ ನಮ್ಮ ಪಾಲಿಸುವನೆ
ಅನಂತ ಗುಣಪೂರ್ಣ ಗೋಪಾಲವಿಟ್ಠಲ
ಇನ್ನಿಂಥ ಪ್ರಭುವಿರಲು ಅನ್ಯರ ಗೊಡಿವ್ಯಾಕೆ ॥ 4 ॥
ತ್ರಿವಿಡಿತಾಳ
ಬೊಮ್ಮಾಂಡವೆ ಪುರವು ಬೊಮ್ಮನಯ್ಯನೆ ಪಿತನು
ರಮ್ಮೆದೇವಿಯೇ ಮಾತಾ ಸುಮನಸರೆ ಬಂಧು
ಧರ್ಮಾ ಧರ್ಮಗಳೆಂಬ ನಿರ್ಮಳೆಂಬೆರಡು ವೃತ್ತಿ
ಕರ್ಮವೆಂಬ ಭೂಮಿಯಲ್ಲಿ ಬಿತ್ತಿ
ನಮ್ಮ ಯೋಗ್ಯತೆ ತಕ್ಕ ಸಂಬಂಧ ಫಲಗಳು
ಒಮ್ಮಿಗಾದರು ಕೊಡಲು ಕಡಿಮೆ ಇಲ್ಲದಂತೆ
ಎಮ್ಮಯ್ಯ ಸಾಕು ಸಂಬಂಧರದು ಇಲ್ಲ
ಹಮ್ಮು ಸಲ್ಲದು ನರನೆ ಈ ಮಹಿ ನಿನ್ನದೆ
ನಮ್ಮ ಸಾಕುವ ಧೊರೆ ಗೋಪಾಲವಿಟ್ಠಲ
ಅಮ್ಮಹಿಮನಿರಲಾಗಿ ನಿಮ್ಮ ನುತಿಸಲ್ಯಾಕೆ ॥ 5 ॥
ಅಟ್ಟತಾಳ
ಜನನಿ ಗರ್ಭದಲಿ ತನುವು ಪೊರೆದವನಾವ
ಜನಕನ ಉದರದಿ ತಂದು ಇಟ್ಟವನಾವ
ಎನಗೆ ಶ್ರೀಹರಿಪಾದ ವನಜ ಧ್ಯಾನದ ಬಲ
ಇನಿತಾದರೆನ್ನಲ್ಲಿ ಅನುವಾಗಿ ಇತ್ತೆ
ಮನಿಗೆ ಇದ್ದಲ್ಲಿಗೆ ತನಗೆ ತಾನೆ ಸರ್ವ
ಘನ ಕಾಮ ಕನಕ ವಸನ ಮುಂತಾದವು ಎಲ್ಲ
ಶಣಸ್ಯಾಡಿ ಒಲ್ಲೆಂದರೆ ಬಿಡವವು ಕಾಣೋ
ಸನಕಾದಿಗಳ ವಂದ್ಯ ಗೋಪಾಲವಿಟ್ಠಲ
ಘನದೈವ ಎನಗಿರೆ ಮನುಜರ ಮಾತೇನು ॥ 6 ॥
ಆದಿತಾಳ
ಹರಿಯನರಿಯದವನೆ ದಾರಿದ್ರ
ಹರಿಯನರಿದ ಬಡವ ಸಂಪನ್ನ
ಹರಿಯು ನೀಯ್ಯದ ವರವು ಅನಿತ್ಯ
ಅರಿಯದುಣುವನ ಸಿರಿಯು ಮಿಥ್ಯಾ
ಹರಿಯ ಭಜಿಸದೆ ಬದುಕಿದ್ದೆ ವ್ಯರ್ಥ
ಹರಿಗೆ ತನ್ನ ಶರಣರಲ್ಲೆ ಸ್ವಾರ್ಥಾ
ಹರಿ ಅವತಾರ ಗೋಪಾಲವಿಟ್ಠಲ
ಧೊರೆ ಒಬ್ಬನೆ ಮನವೆರಕ ಎನಗಿನ್ನು ॥ 7 ॥
ಜತೆ
ರಾಜಾಧಿರಾಜ ಗೋಪಾಲವಿಟ್ಠಲ ಮಹಾ -
ರಾಜನಿರಲು ಅನ್ಯರಾಜರ ಗೊಡಿವ್ಯಾಕೆ ॥
****