Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೆಂಕಟೇಶ ಸುಳಾದಿ
ರಾಗ ಮುಖಾರಿ
ಧ್ರುವತಾಳ
ನಮೋ ನಮೋ ನಾರಾಯಣ ಮೂಲಶ್ರುತಿ ಪಾರಾಯಣ |
ನಮೋ ನಮೋ ವೆಂಕಟ ಸಂಕಟಹರಣ |
ನಮೋ ನಮೋ ಪರತಂತ್ರಕರಣಿ ಸರ್ವಸ್ವಾತಂತ್ರ |
ನಮೋ ನಮೋ ವೈಕುಂಠ ಭಕ್ತರ ಭಂಟ |
ನಮೋ ನಮೋ ದಹರಾಕಾಶವಾಸ ಸುಪ್ರಕಾಶ |
ನಮೋ ನಮೋ ಸಪ್ತ ಸಾಮ ಗುಣ ನಿಸ್ಸೀಮ |
ನಮೋ ನಮೋ ಅಪ್ರಮೇಯ ಸುರಗೇಯ ಗಿರಿರಾಯ |
ನಮೋ ನಮೋ ಅಪ್ರತಕ್ರ್ಯ ಅಘತಿಮಿರಾರ್ಕ |
ನಮೋ ನಮೋ ಉಪಜೀವ್ಯ ನವನವ ನಿತ್ಯಭವ್ಯಾ |
ನಮೋ ನಮೋ ಲೋಕಾಶ್ರಯ ನಿರಾಶ್ರಯ |
ನಮೋ ನಮೋ ಸರ್ವಾಕಾರಾ ಸಮರ್ಥ ನಿರ್ವಿಕಾರ |
ನಮೋ ನಮೋ ಕರುಣಾಸಿಂಧು ದೀನಬಂಧು |
ನಮೋ ನಮೋ ನಿಜಾನಂದ ಮೂರುತಿ ಮುಕುಂದ |
ನಮೋ ನಮೋ ದಾನ್ನವಾರಿ ಭಯನಿವಾರೀ |
ನಮೋ ನಮೋ ದೈವ ಕಾಲಾಗುಣಕರ್ಮಾಭಿದಸೀಲ |
ನಮೋ ನಮೋ ಮನೋರಥವೆ ಗತಿಸತ್ಪಥವೆ |
ನಮೋ ನಮೋ ವಿಜಯವಿಠಲ ತಿರುವೆಂಗಳಪ್ಪ ಕೋಲಾ |
ನಮೋ ನಮೋ ನಮ್ಮನ ಸಾಕುವ ಸೊಬಗೆ ॥ 1 ॥
ಮಟ್ಟತಾಳ
ಅಪ್ಪಾರ ಮಹಿಮ ಅನುಪಮ್ಮ ಚರಿತ |
ಸುಪ್ಪಾರಸನ್ನ ಸುಪ್ಪರನ ವಾಹನ್ನ |
ಅಪ್ಪಾ ತಿಮ್ಮಪ್ಪ ಎನ್ನಪ್ಪ ತಿರುವೆಂಗಳಪ್ಪ |
ಅಪ್ಪಾರ ಮಹಿಮ ಸುಪ್ಪಾರಸದಾ (ಸುಪ್ರಸಾದ )|
ಅಪ್ಪಾ ಇತ್ತರೆ ತಪ್ಪಾ ವಿಜಯವಿಠಲ ಸಾ - |
ರಪ್ಪ ಗಿರಿವಾಸ ಸುಪ್ಪಾರವಾಣೇಶಾ ॥ 2 ॥
ತ್ರಿವಿಡಿತಾಳ
ಆಯಾಸ ದುಃಖ ದೌರ್ಭಾಗ್ಯ ಚಿಂತಾ ಸಂತಾಪದಿ ಅ - |
ಸೂಯ ಈರಿಷ ಪೀಡಾ ಕಾಮ ಕ್ರೋಧಾ |
ಮಾಯಾ ಮದ ಮತ್ಸರ ಲೋಭ ಮಾಂದ್ಯಾಲಸ್ಯಾ - |
ಸೂಯ ದುರ್ಗುಣ ರೋಗ ಭಯಾ ಅಜ್ಞಾನ |
ವೈಯಾರ ದುರಿತ ಪುಣ್ಯಲೇಪ ಪರಾಭವ |
ಶ್ರೇಯಸ್ಸು ವಿರೋಧ ಆಯಾಸ ಆಶಾ |
ಶ್ರೇಯ್ಯಹಾನಿ ನಿದ್ರಾ ಪಿಪಾಸ ಕ್ಷುಧಿ ಅ - |
ನ್ಯಾಯ ಕಂಪನ ಶೋಕ ನಾನಾ ಇನಿತು |
ಕಾಯದೊಳಗೆ ಉಳ್ಳ ಮಂದಮತಿಗೆ ಮತ್ತೆ |
ಜಾಯಾದಿಗಳಿಂದ ಬರುವ ಮಮತೆ |
ಪ್ರಾಯ ಜರಠ ಬಿಡದೆ ಶಿಕ್ಕಿದವಗೆ ಎಂತೊ |
ಶ್ರೀಯರಸ ನಿನ್ನ ಕಾಂಬುವದು ಕಾಣೆ |
ವಾಯು ಪೊರಟು ಒಳಗೆ ಪೋಗುವಾನಿತಮದ್ಧ್ಯ |
ಆಯು ನೆಚ್ಚಿಕೆ ಇಲ್ಲ ಈ ಪರಿ ಇರಲು |
ಈ ಯವನಿಯಲ್ಲಿ ಬಹುಕಾಲ ಬದಕುವ ಉ - |
ಪಾಯ ಮಾಡುವೆನಯ್ಯಾ ನೆರೆಹೊರೆಯಲಿ |
ಮಾಯಾವರ್ಜಿತ ನಮ್ಮ ವಿಜಯವಿಠಲ ವೆಂಕಟ |
ರಾಯಾ ನಿನ್ನಂಘ್ರಿಯ ಎನ್ನಲಿ ನಿಲಿಸೊ ॥ 3 ॥
ಅಟ್ಟತಾಳ
ಅರಿ ದರ ಗದ ಪದ್ಮ ನಾಮ ಶರಶಕ್ತಿ |
ವರ ಅಂಕುಶ ಪ್ರಾಸ ತೋಮರ ಹಲ ಅಮೃತ |
ಮರಳೆ ಗೋ ವಿದ್ಯಾ ತಿಲ ಗೋಧುಮ ಚಾ - |
ಮರ ಛತ್ರ ತೋರಣ ಧ್ವಜ ಊಧ್ರ್ವವ್ಯಜನವ |
ಜ್ಜರ ಕರಿ ಆಂದೋಳ ವಾಜಿ ಮಚ್ಛ ಕೂರ್ಮ |
ಹರಿ ವೃಷ ರತ್ನ ಧನಧಾನ್ಯ ಕಾರ್ಮುಖಾ|
ಪರಿಪರಿ ಮಂಗಳಕರವಾದ ರೇಖಿಗ - |
ಳಿರುತಿಪ್ಪ ಇಂಥ ಸುಂದರ ಪಾದ ಎನ್ನ |
ಹೃತ್ಸರಸಿಜ ಕರ್ನಿಕೆ ಮಧ್ಯದಲ್ಲಿ ಇಟ್ಟು |
ನಿರುತ ಚಂಚಲವಾಗಿ ಪೋಗುವ ಮನಸು ನಿಂ - |
ದಿರುವಂತೆ ಮಾಡಿ ದುಸ್ತರ ದುರಿತರಾಸಿ |
ಪರಿಹರಿಸುವುದು ವ್ಯವಧಾನವಾಗದಂ - |
ತರ ಭವಾಬ್ಧಿಗೆ ತರಿಯೆ ಶಿರಿಯೆ ಎನ್ನ |
ದೊರೆಯೆ ನಿನಗೆಲ್ಲಿ ಸರಿಯೆ ಎಂದಿಗೆ ನಿನ್ನ |
ಮರಿಯೆ ಒಬ್ಬರ ಹೀಗೆ ಕರಿಯೆ ಹಸ್ತದಲ್ಲಿ |
ಬರಿಯೆ ಹರಿಯೆ ಈ ಪರಿಯ ನಂಬಿಹೆ ನಾ - |
ನರಿಯೆ ಅನ್ಯರನ್ನಾ ಸರ್ವಥ ಸರ್ವದ ಶೇಷ - |
ಗಿರಿರಾಯ ವೆಂಕಟ ವಿಜಯವಿಠಲರೇಯಾ |
ಕರುಣಿಸು ಎನಗೆ ಪೊಳೆವ ನಿನ್ನ ಚರಣಾ ॥ 4 ॥
ಆದಿತಾಳ
ಅಪಾಪ ಅಪ್ರತಿ ಚರಣ ಅಪೂಪ ವಂದಿತ ಚರಣ |
ಅಪೂರ್ವ ಅನಾದಿ ಚರಣ ಅಪಾರ ಪ್ರಕಾಶ ಚರಣ |
ಅಪೂಟ ಸದ್ಗುಣ ಚರಣ ಅಪಾತ್ರದಲ್ಲಣ ಚರಣ |
ಅಪೂರ್ತಿವಾಗದ ಚರಣ ಅಪಾಪ ಅಪ್ರತಿ ಚರಣ |
ಅಪ್ರಾಕೃತ ಚರಣ ಅಪ್ಪಾ ಅಪಾಗ ವೆಂಕಟಗಿರಿನಾಥ |
ಆಪತ್ತುನಾಶ ವಿಜಯವಿಠಲ ನಮಗೆ |
ಆ ಪದ ಮುಕ್ತಿ ಕೊಡುವದೀ ಚರಣ ॥ 5 ॥
ಜತೆ
ನಮೊ ನಮೊ ನಿನ್ನ ವಾರ್ತಿಗೆ ಕೀರ್ತಿಗೆ ಮೂರ್ತಿಗೆ
ಸುಮನಸಾದ್ರಿ ರಾಯ ವಿಜಯವಿಠಲ ವೆಂಕಟ ॥
****************