..
kruti by Nidaguruki Jeevubai
ತೊಳೆಯಲಿ ಬೇಕಿದನು ಮನುಜ ಪ
ಭವಕೂಪದಿ ಬಿದ್ದು ತೊಳಲಿ ಬಳಲಿ ಬಳಲಿ
ಮಲಿನವಾಗಿಹ ಮನ ಹರಿಧ್ಯಾನ ಜಲದಲಿ ಅ.ಪ
ಕಾಮಕ್ರೋಧದಿಂದ ಜನಿಸಿದ
ಲೋಭಮೋಹ ಲೋಭದಿಂದ
ಮದಮತ್ಸರ ಷಡ್ವಿಧ ತಾಪಗಳಿಂದ
ಹದಗೆಟ್ಟಿರೆ ಮನ ಮುದದಿ ಹರಿಧ್ಯಾನದಿ 1
ದುರ್ಜನ ಸಂಗದೊಳು ಸೇರುತ ಮನ
ವರ್ಜಿಸಿ ಹರಿ ಚರಿತ
ಅರ್ಜುನ ಸಖ ಸರ್ವೇಶನ ನಾಮವು
ಲಜ್ಜೆಯಿಲ್ಲದೆ ಸ್ಮರಿಸುತ ನಲಿಯಲು ಮನ 2
ಜನನ ಮರಣ ಕ್ಲೇಶದಿ ದು:ಖದಿ ಮನ
ಮರಳಿ ಮರಳಿ ಪಾಪದಿ ಎಣಿಕೆ ಇಲ್ಲದ
ದೋಷದೊಳಗೆ ಮುಸುಕಿದ ಮನ
ನಳಿನನಾಭನ ಪಾದಸ್ಮರಣೆ ಮಾಡಲು ನಿತ್ಯ 3
ಇಂದಿರೇಶನ ಧ್ಯಾನವ ಮಾಡಲು ಮನ
ಪೊಂದಿದ ಮಲಿನವನು ಛಂದದಿ ಹರಿದಾಸರ
ವೃಂದವ ಕೂಡಿ ಮಂದೋರದ್ಧರ ಗೋ_
ವಿಂದನೆನ್ನಲು ಮನ 4
ನಿಚ್ಚ ಭಕುತಿಯಿಂದ ಶ್ರೀ ಹರಿಪಾದ
ಅರ್ಜಿಸಿಮುದದಿಂದ
ರುಕ್ಮಿಣಿಯರಸನ ಸತ್ಯಸಂಕಲ್ಪನ
ಮೆಚ್ಚಿಸಿ ಮುಕುತಿಯ ನೈದಲು ಈಮನ 5
ಮಧ್ವಮತದಿ ಜನಿಸಿ ನಿರಂತರ
ಮಧ್ವರಾಯರ ಭಜಿಸಿ
ಸದ್ವೈಷ್ಣವರ ಸಂಗದೊಳಾಡುತ
ಲಜ್ಜೆತೊರೆದು ಕಾಲಗೆಜ್ಜೆ ಕಟ್ಟಲುಮನ6
ಕಂಬು ಚಕ್ರಧಾರಿ ಶ್ರೀ ಶೌರಿ
ನಂಬುವರಾಧಾರಿ
ಶಂಬರಾರಿಪಿತ ನಂಬಿದೆ ನಿನ ಪಾದ
ಶಂಭುವಂದಿತ ಪಾಲಿಸಿಂದು ಸ್ಮರಿಸಲು ಮನ 7
ತೊಳೆದು ತೊಳೆದು ವಿಷಯ ವಾಸನೆಯನ್ನು
ಹಲವು ವಿಧದಿ ತೊಳೆದು
ಕಲುಷದೂರನ ನಾಮ ಸ್ಮರಣೆಯ ಮಾಡಲು
ಮರುತ ಮತದ ಸಂಗ ದೊರೆವುದು ತವಕದಿ8
ಕಳವಳಿಸದೆ ಮನವು ನಿಶ್ಚಲದಲಿ
ಥಳ ಥಳ ಥಳ ಹೊಳೆಯೆ
ಕಮಲನಾಭ ವಿಠ್ಠಲವಲಿದು ಪಾಲಿಸುವನು
ಹಲವು ಬಗೆಯಲಿ ಹಂಬಲಿಸದೆ ಮನ 9
***