Showing posts with label ವೆಂಕಟೇಶ ನಿನ್ನ ನಂಬಿದೆ ಎನ್ನ varaha timmappa. Show all posts
Showing posts with label ವೆಂಕಟೇಶ ನಿನ್ನ ನಂಬಿದೆ ಎನ್ನ varaha timmappa. Show all posts

Friday, 27 December 2019

ವೆಂಕಟೇಶ ನಿನ್ನ ನಂಬಿದೆ ಎನ್ನ ankita varaha timmappa

by ನೆಕ್ಕರ ಕೃಷ್ಣದಾಸ
ಯಮುನಾಕಲ್ಯಾಣಿ ರಾಗ ಅಷ್ಟತಾಳ

ವೇಂಕಟೇಶ ನಿನ್ನ ನಂಬಿದೆ ಎನ್ನ
ಸಂಕಟವನು ಪರಿಹರಿಸಯ್ಯ ನೀನು ||ಪ||

ಒಡಲೆಂಬ ಕಡಲೆಡೆಗೊಂಡಿಹ ಹಡಗು
ಕಡೆಯ ಕಾಣ ಬಹು ಜಡದಿಂದ ಗುಡುಗು
ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು
ದಡವ ಸೇರಿಸೋ ಎನ್ನ ಒಡೆಯ ನೀ ಕಡೆಗು ||೧||

ಅಣುರೇಣು ತೃಣಕಾಷ್ಠದೊಳಗಿದ್ದು ನೀನು
ಕ್ಷಣಕ್ಷಣ ಆರೈವ ಗುಣ ನಿನ್ನದೇನು
ಪ್ರಣವರೂಪನೇ ನಿನ್ನ ಚರಣಕ್ಕೆ ನಾನು
ಮಣಿವೆನು ಮನ್ನಿಸು ವರಕಾಮಧೇನು ||೨||

ನಾರಾಯಣ ನರಹರಿ ಜಗನ್ನಾಥ
ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ
ಸಾರಿದವರ ಸಂಸಾರದ ದಾತ
ಮಾರಿದ ಮನವಕೊಂಬರೆ ನೀನೆ ಪ್ರೀತ ||೩||

ಉತ್ತಮವಾದ ಶ್ರೀಶೈಲನಿವಾಸ
ಭಕ್ತರ ಸಲಹುವ ಬಿರುದುಳ್ಳ ಈಶ
ಚಿತ್ತವು ತಿಳಿದೆನ್ನ ಕಾಯೋ ಸರ್ವೇಶ
ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ ||೪||

ವರಾಹ ತಿಮ್ಮಪ್ಪನು ಒಲಿದೆನ್ನ ಕರೆದು
ಆರಿದ ಬಾಯೊಳು ಅಮೃತವನೆರೆದು
ದೂರವಾಗದೆ ಅಡಿಗಡಿಗೆನ್ನ ಹೊರೆದು
ಏರುಗಂಡಪರಾಧ ಎಲ್ಲವ ಮರೆದು ||೫||
********