ರಾಗ: ಕಾನಡ ತಾಳ: ಆದಿ
ಹರಿಪದ ಮಾರ್ಗ ಸುಲಭದಿ ತೋರುವ
ಗುರು ರಾಘವೇಂದ್ರರ ಕರುಣೆಯ ಬೇಡುವೆ ಪ
ಗುರುಗಳ ಸ್ಮರಣೆಯ ಮರೆಯದೆ ಮಾಡಲು
ಹರಿಯ ಪ್ರಸಾದಕೆ ಸಾಧನ ನಿಶ್ಚಯ ಅ.ಪ
ನರಹರಿ ಸಿರಿದೇವಿ ಕರುಣಾಮೃತವು
ಹರಿಯಿತು ಧರೆಯಲಿ ಪ್ರಹ್ಲಾದನಿಂದ ಆ-
ವರ ರಸಕಲಶವೊ ಗುರುವೃಂದಾವನ
ಸುರಿವುದು ಶಿರದಿ ಸ್ಮರಿಸಲು ಗುರುಗಳ 1
ಕಳೆಯುತ ಕುಹುಯೋಗ ಉಳಿಸುತ ದೊರೆಯ
ಇಳೆಯನು ಆಳಿದ ಗುರುವ್ಯಾಸರಾಜ
ಬಳಿಯಲಿ ಬರುವರ ತಾಪವ ಕಳೆಯಲು
ಹೊಳೆದಿದೆ ಚಂದ್ರಿಕೆ ವೃಂದಾವನದಿ 2
ಅಕ್ಕರೆಯಿಂದ ಸ್ಮರಿಸಲು ಗುರುಗಳ
ರಕ್ಕಸ ಬಾಧೆಯ ಭಕ್ಷಿಪ ಯೋಗವ
ತಕ್ಷಣ ಕಳೆಯುತ ಹರಿಯೆಡೆ ನಡೆಪರು
ಸಾಕ್ಷಿ ಸೀತಾರಾಮವಿಠಲನೆಂದಿಹರೋ 3
***