Audio by Mrs. Nandini Sripad
ರಾಗ ಆನಂದಭೈರವಿ ಧ್ರುವತಾಳ
ಒಂದಪರಾಧವೆಂದು ವಂದಿಸಲೇನಯ್ಯ ನಾ
ಒಂದರ ಚಿಂತೆಯನ್ನು ವರ್ಣಿಸಲೇನಯ್ಯ
ಒಂದರ ಭಯವೆಂದು ಒತ್ತಿ ಕೊಳ್ಳಲೇನಯ್ಯ
ಒಂದರ ಹರುಷವೆಂದು ಒದಗಿ ನುಂಗಲೇನಯ್ಯ
ಒಂದರ ಆಶೆ ಎಂದು ಒಲಿಸಿ ಪೇಳಲೇನಯ್ಯ
ಒಂದರ ಮೋಹವೆಂದು ಒಳ್ಳೆದೆಂದೆನ್ನಲೇನಯ್ಯ
ಒಂದರುಪಾಯವೆಂದು ವಂದಿಸಲೇನಯ್ಯ ನಾ
ಒಂದಲ್ಲ ಎರಡಲ್ಲ ವಿವರಿಸಿ ಪೇಳಲಿನ್ನು
ಒಂದಪರಾಧ ಇದಕೆ ಕಾರಣವೆಲ್ಲ
ಇಂದಿರೇಯರಸನೆ ಗೋಪಾಲವಿಠ್ಠಲ
ತಂದೆ ನಿನ್ನ ವಿಸ್ಮೃತಿ ಎನಗೆ ಮುಖ್ಯಪರಾಧ ॥ 1 ॥
ಮಠ್ಯತಾಳ
ಜನನದ ಚಿಂತೆ ಜನಿಸುವ ಭಯವೋ
ಜನಿಸಿದರೆ ಹರುಷ ದಿನದಿನಕೆ ಆಗೆ
ಘನ ಆಶೆಯಿಂದಲಿ ಮೋಹ ಘನ ಮೋಹಕೆ ಕ್ಲೇಶ
ಅನ ನಂತರಪಾಯಗಳ್ಯೇ ಒಂದೆನಂತ ಇನಿತು ಅಜ್ಞ
ಘನತಿ ಕಾಳಿಂದ ದಣಿದು ದಣಿದು
ನಾನು ಧೈರ್ಯ ಭ್ರಷ್ಟನಾಗಿ
ಮುಣುಗಿ ತೇಲಿಪೆನಯ್ಯ ಮುಂದು ಗಾಣದೆ ಇನ್ನು
ಘನ ದಯಾವಾರಿಧಿ ಗೋಪಾಲವಿಠ್ಠಲ
ನೆನೆಯದೆ ನಾ ನಿನ್ನ ಕೊನೆಗಾಣದೆ ಪೋದೆ ॥ 2 ॥
ರೂಪಕತಾಳ
ಹಿಂದಿನ ಸಾಧನ ಏನೇನು ಆದರು ಎಲ್ಲ
ಇಂದಿಗಾ ಇದರ ವಿಚಾರವ ತಿಳಿಯಿತು
ಮುಂದಿನ ಗತಿಗೆ ಮುಕುಂದ ಪೊಂದುವದೋ
ದ್ವಂದ್ವವನರಿಯನಯ್ಯ ಸುಂದರಾಂಗ ದೇವಾ
ನಿಂದಲ್ಲಿ ಕುಳಿತಲ್ಲಿ ಬಂದಲ್ಲಿ ಹೋದಲ್ಲಿ
ತಂದು ನೀಡು ನಿನ್ನ ಚೆಂದುಳ್ಳ ಸ್ಮೃತಿಯನ್ನು
ನಂದನ ಕಂದ ಗೋಪಾಲವಿಠ್ಠಲ ದಯಾ -
ಸಿಂಧು ಅನಿಮಿತ್ಯ ಬಂಧು ನೀ ಸಲಹೊ ಎನ್ನ ॥ 3 ॥
ಝಂಪೆತಾಳ
ಸಲಹುವ ನೀನಯ್ಯ ಸಲಹಿ ಕೊಂಬುವ ನಾನು
ಫಲಿತಾರ್ಥ ಒಂದೇ ಸರಿ ಉಳಿದಾದನೇನಯ್ಯ
ಹಲವು ಪರಿ ಸಾಧನಗಳು ಎಲ್ಲ ಕೂಡಿದರು
ಕಳಿಯಬಲ್ಲದೆ ಎನ್ನ ಭವರೋಗವಾ
ತಿಳಿದದ್ದು ಇಷ್ಟೇ ಸರಿ ನಳಿನನಾಭನೆ ನಿನ್ನ
ಸುಲಭ ಸ್ಮರಣೆಕಿಂತ ಮಿಗಿಲು ಇಲ್ಲಾ
ಸುಲಭ ಕೇಳಯ್ಯಾ ಕೊಳ್ಳೆಯ ನೀ ವೈಯ್ಯಾ
ಚಲಿಸಲಿಬೇಡಿನ್ನು ಮನದಲಿಂದಾ
ಗೆಲಿಸೆ ಈ ಸಂಸಾರ ಕೊಲಿಯ ತಾಳಲಾರೆ
ಬಳಲಿ ಬಳಲಿ ಬಾಯ ಬಿಡುತಲಿಹೆನಯ್ಯಾ
ಹೊಳಿಯಜನಕ ನಮ್ಮ ಗೋಪಾಲವಿಠ್ಠಲನೆ
ತಿಳಿಯಬೇಕು ಎನ್ನ ಸ್ಥಿತಿಗತಿಗಳ ॥ 4 ॥
ತ್ರಿಪುಟತಾಳ
ಆವಾಗ ಎನಗಿನ್ನು ನಿನ್ನ ಸ್ಮೃತಿಯು ಬಂತೆ
ಆವ ಕಾಲವೆ ಪುಣ್ಯ ಕಾಲವಯ್ಯಾ
ಆವ ದೇಶದಲ್ಲಿ ನಿನ್ನ ಸ್ಮೃತಿಯುಂಟಾಯ್ತು
ಆವ ದೇಶವೆ ಪುಣ್ಯ ದೇಶವಯ್ಯ
ಆವ ಸಂಗತಿಯಿಂದ ನಿನ್ನ ಸ್ಮೃತಿಯು ಬಂತೆ
ಆವ ವಾಸವೆ ಸಜ್ಜನ ಸಹವಾಸ
ಆವ ಕರ್ಮಾದರು ನಿನ್ನ ಸ್ಮರಣಿ ಇನ್ನು
ಆವು ಒದಗಿತ್ತೆ ಅದೇ ಸುಕರ್ಮ
ಆವ ನಿನ್ನ ಸ್ಮರಣೆ ರಹಿತವಾದ ಕರ್ಮ
ದೇವಾರ್ಚನಾದರು ಏನು ಫಲವೋ
ನಾ ಒಲ್ಲೆನಯ್ಯ ನಿನ್ನ ಸ್ಮರಣೆ ರಹಿತನಾಗಿ
ಜೀವಿಸಿಕೊಂಡಿನ್ನು ವ್ಯರ್ಥವಾಗಿ
ಆವ ಭಯಕು ನಾನು ಅಂಜುವದಿಲ್ಲವೋ
ದೇವ ನಿನ್ನ ವಿಸ್ಮೃತಿಗೊಂದಂಜುವೆ
ಪಾವನಕಾಯ ಗೋಪಾಲವಿಠ್ಠಲ ನಿನ್ನ
ಆವ ಸರ್ವದಾ ಸ್ಮರಣೀವೆ ಜೀವನ್ಮುಕ್ತ ॥ 5 ॥
ಅಟ್ಟತಾಳ
ನಿನ್ನ ಸ್ಮೃತಿಯೆ ವಿಧಿ ವಿಸ್ಮೃತಿಯೆ ನಿಷೇಧ
ಪುಣ್ಯವೆಂಬುದು ಇದೆ ಪಾಪವೆಂಬುದು ಅದೆ
ಇನ್ನಿಲ್ಲ ಇನ್ನಿಲ್ಲ ಇದಕ್ಕಿಂತ ಸಾಧನ
ಸ್ತನ್ನಿಪಾನವು ತಾನೊ ಉಣ್ಣಲೊಲ್ಲೆನು ಪುನಃ
ಇನ್ನೆಂಬೊ ಆವಂಗೆ ಇದೆ ಇದೆ ಉಪಾಯ
ತನ್ನ ಮೊದಲು ಮಾಡಿ ತೃಣಜೀವ ಕಡಿಮಾಡಿ
ಚೆನ್ನಾಗಿ ತತ್ವೇಶರಿನ್ನು ಲಕುಮಿ ಸಹಿ -
ತಿನ್ನವರ ವರ್ಗ ತನ್ನಿಯಾಮಕನಾಗಿ
ಎನ್ನ ಅಂತರ್ಯಾಮಿ ಯವನೆ ಮಾಡಿಪನೆಂಬೊ
ಇನ್ನಾವ ಸ್ಮೃತಿಯೇನು ಪುಣ್ಯ ಸಾಧನವಯ್ಯ
ಘನ್ನ ದಯಾನಿಧಿ ಗೋಪಾಲವಿಠ್ಠಲ
ನಿನ್ನ ರೂಪವ ಧನ್ಯ ಪುಣ್ಯ ಪಾಪಗಳಲ್ಲಿ ॥ 6 ॥
ಆದಿತಾಳ
ನಿನ್ನ ಅರಿಯದಿಪ್ಪದೆ ಅಜ್ಞಾನವಯ್ಯಾ ಅಯ್ಯಾ
ಇನ್ನು ಅಜ್ಞಾನದಿಂದ ಅನ್ಯಥ ಜ್ಞಾನವಯ್ಯ
ಅನ್ಯಥಾ ಜ್ಞಾನ ಈಗ ಅಧಮ ಜೀವಿಗಳಿಗೆ
ಇನ್ನು ಮಿಥ್ಯಾ ಜ್ಞಾನವನ್ನು ಪುಟ್ಟಿಪದಯ್ಯ
ಇನ್ನು ಆರಾರ ಗತಿ ಅರಿತು ಜ್ಞಾನಕೆ ನೀನು
ಮುನ್ನೆ ಪ್ರೇರಕನಾಗಿ ಮುದದಿ ಮಾಡಿಸುವಯ್ಯ
ಘನ್ನ ಸ್ವಾಮಿಯು ನೀನು ಬನ್ನದಾಸನು ನಾನು
ನಿನ್ನವರವ ನಾನು ನಿನ್ನ ತಿಳಿವ ಜ್ಞಾನ -
ವನ್ನು ಎನಗೆ ಇತ್ತು ಜನನ ಮರಣದ ಬಾಧಿಯ ಬಿಡಿಸಿನ್ನು
ನಿನ್ನ ಸೇವೆಯೊಳಿಟ್ಟು ಚನ್ನಾಗಿ ಪಾಲಿಸಯ್ಯಾ
ಚಿನ್ನುಮಯ ಮೂರುತಿ ಗೋಪಾಲವಿಠ್ಠಲ
ಎನ್ನ ಯತನ ಸಾಧನ ನಿನ್ನಾಧೀನವಯ್ಯಾ ॥ 7 ॥
ಜತೆ
ಅಪರಾಧ ಅಪರಾಧ ಅಪರಾಧ ನಮೊ ನಮೊ
ಕೃಪೆ ಮಾಡಿ ಸಲಹಯ್ಯಾ ಗೋಪಾಲವಿಠ್ಠಲ ॥
*********