Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ
ರಾಗ ದರ್ಬಾರಿ ಕಾನಡ
ಧ್ರುವತಾಳ
ಕರೆದ ಮಾತಿಗೆ ನೀನು ಬರುವವನಲ್ಲ ಸಾರಿ
ಅರಿವಾಯಿತೆನ್ನ ಮನಕೆ ಅಪ್ರಮೇಯಾ
ತುರುವ ಸ್ವಭಾವ ನೀನು ತುರಿಸಿದರೆವೆ ಲಭ್ಯಾ
ತುರುಸುವ ಬಗೆ ತಿಳಿಯ ಬೇಕಾಯಿತು
ಪುರುಷ ನಿನಗೆ ಸಮ ಅಧಿಕ ಒಬ್ಬನಿದ್ದರೆ
ವರಿಶಾಡ ಬಹುದು ನೀನವರ ಸಂಗಡ
ಪರಮ ಅಸ್ವತಂತ್ರ ಪರಿಪಾಲಿತ ನಿನ್ನಿಂದ
ವರಸುವೆನೆಷ್ಟೆನ್ನಿಂದ ವಾರಿಜಾಕ್ಷ
ಅರಸು ನೀ ಮೇಲೆ ನಿನ್ನ ಸ್ಪರಿಶ ಮಾಡುವದಕ್ಕೆ
ಭರವಸ ಕೊಡುವದು ಭಕ್ತ ಪ್ರಿಯಾ
ಪುರುಷನ ಕೂಡಲಿನ್ನು ಸಲಿಗೆ ಕೊಟ್ಟರೆ ಅರಸಿ
ಸರಸ ವಾಡೋಳು ತನ್ನ ಸರಿ ಬಂದಂತೆ
ಅರಸರರಸ ಚಲುವ ಗೋಪಾಲವಿಟ್ಠಲ ನಾ ಉ -
ಚ್ಚರಿಸುವೆ ನಿನ್ನ ಗುಣ ಕರ್ಮಗಳು ॥ 1 ॥
ಮಠ್ಯತಾಳ
ಉರಗನಂದದಿ ಗುಣವುಳ್ಳ ಪುರುಷ ನೀನು
ಹರಿಯೆ ನೀ ಮಾರ್ಜಾಲನಂದದಿ ಗುಣದವ
ಸರಿ ಬಿಡು ಮೂಷಕ ಗುಣವನುಳ್ಳವ ನೀನು
ಗರುಡನಂಥವ ನೀನು ವರಕಪಿ ಗುಣದವ ನೀನು
ಕರಿಯಂಥವ ನೀನು ಕಪ್ಪೆಯಂಥವ ನೋಡು
ಪರಿಪೂರ್ಣ ನಿರ್ದೋಷ ಗೋಪಾಲವಿಟ್ಠಲ
ಸರಿ ಹೋದಂತಾಡುವೆ ಸಲಿಗೆಯಿಂದಲಿ ನಾ ॥ 2 ॥
ತ್ರಿಪುಟತಾಳ
ಮಡಿವಾಳನಂಥವ ಮೈಲಿಗೆ ಕಳೆವಲ್ಲಿ
ಬಡಿಗನಂಥವ ದೋಷ ಕಡಿದು ಕಡಿಗಿಡುವಲ್ಲಿ
ತಡಿಯದೆ ಕುಲಾಲ ಗುಣವನುಳ್ಳವ , ದೇಹ
ಬಿಡಲು ದೇಹ ಪುನಃ ಕೊಡುವಲ್ಲಿ ಮನೆಮಾಡಿ
ಪಿಡಿದು ಒಂದಾನಂತ ಮಾಳ್ಪಲ್ಲಿ ಅಗಸಾಲ್ಯಾ
ಪಿಡಿದು ಬಿಡದವಲ್ಲಿ ಉಷ್ಟ್ರನಂತವ ಕಾಣೊ
ಬಡವ ಬಲ್ಲಿದನೆನೆ ಬಿಡದೆ ಸರ್ವರೊಳಿದ್ದು
ತಡಿಯದೆ ಸರ್ವ ವ್ಯಾಪಾರ ಮಾಳ್ಪೆ
ಕಡು ದಯಾಸಾಗರ ಗೋಪಾಲವಿಟ್ಠಲ
ನುಡಿದೆ ನಾ ನಿನ್ನಲ್ಲಿ ಇದ್ದ ಗುಣಗಳೇವೆ ॥ 3 ॥
ಅಟ್ಟತಾಳ
ಆಳುಗಳಿಂದೊಂದು ಅಪರಾಧ ಬಂದರೆ
ತಾಳಿಕೊಂಡವನೇವೆ ಸ್ವಾಮಿ ಎನಗೆ ಕಾಣೊ
ಊಳಿಗವನು ಕೊಂಡು ಫಲ ಕೊಟ್ಟರಾಯಿತೆ
ಹೇಳಯ್ಯಾ ನಿನ್ನ ಸ್ವಾಮಿತ್ವ ಪೂರ್ಣತೆಯನು
ಊಳಿಗವನು ಮಾಡಿ ಬೆಲೆಯು ಕೇಳುವಂಥ
ಆಳಲ್ಲ ನಿನಗಿನ್ನು ಸ್ವಾಮಿ ನೀ ಆವಾಗನ್ನ
ಊಳಿಗವನು ಮಾಡಿ ಫಲವು ಬೇಡುವಂಥ
ಆಳು ನಾ ಅಹುದಲ್ಲೊ ಆಲೋಚನ್ಯಾತಕೆ
ವೇಳೆ ಸಮಯ ನೋಡಿ ಕೇಳಲಿಲ್ಲೆಂದರೆ
ವೇಳೆ ಆವದು ನೋಡೊ ಭಕ್ತ ಬೇಡುವದಕ್ಕೆ
ಕೇಳೆನ್ನ ಸ್ವಭಾವ ನಿನ್ನ ಭಕ್ತರಿಗೊಂದು
ಆಳಾಪ ಬಂದರೆ ಹೇಳಿ ಕೊಂಬುವದುಂಟು
ಪಾಲಸಾಗರಶಾಯಿ ಗೋಪಾಲವಿಟ್ಠಲ
ಪಾಲಿಸಬೇಕಿದು ಎಷ್ಟರ ಮಾತಯ್ಯಾ ॥ 4 ॥
ಆದಿತಾಳ
ಎನ್ನ ಗೋಸಗಕ್ಕೆ ಆಗಿ ಇನ್ನೊಂದು ಕೊಡು ಎಂದು
ನಿನ್ನ ಬೇಡುವದಿಲ್ಲ ಘನ್ನ ದಯಾನಿಧಿ
ನಿನ್ನ ಭಕುತ ಜನಕ್ಕಿನ್ನೊಂದು ದುರ್ಘಟ
ಬನ್ನ ಬಂದರೆ ನಾ ನಿನ್ನ ಬೇಡೋದೆ ಬಿಡೆ
ಇನ್ನು ಅಪರಾಧವನ್ನು ಮೊದಲು ಮಾಡಿ
ಎನ್ನ ನೀ ದಣಿಸಿದರಿನ್ನಂಜುವನಲ್ಲಾ
ಸಣ್ಣಪರಾಧಕೆ ಕಣ್ಣಿಗೆ ತೋರದೆ
ಮುನ್ನಡಗುವರೆ ಚಿನ್ನುಮಯ ದೇವ
ಪನ್ನಂಗಶಯನ ಗೋಪಾಲವಿಟ್ಠಲರೇಯಾ
ನಿನ್ನವರ ದಯವಿರೆ ಎನ್ನೇನು ಮಾಳ್ಪೆ ॥ 5 ॥
ಜತೆ
ಏನು ಬಂದರು ನಿನ್ನ ನಾನು ಬಿಡುವನಲ್ಲಾ
ಮಾನ ನಿನ್ನದೊ ಜಾಣ ಗೋಪಾಲವಿಟ್ಠಲ ॥
***********
ಮಠ್ಯತಾಳದ ನುಡಿಯ ವಿವರಣೆ :
ಉರಗನಂದದಿ ಗುಣವುಳ್ಳ ಪುರುಷ ನೀನು = ಸರ್ಪದಂತೆ ಮಕ್ಕಳನ್ನು ಪಡೆದು ಪುನಃ ನುಂಗುವ ಗುಣ ;
ಹರಿಯೆ ನೀ ಮಾರ್ಜಾಲನಂದದಿ ಗುಣದವ = ಮಾರ್ಜಾಲವು ಒಬ್ಬರು ತಂದುಕೊಟ್ಟ ಬೇಟೆಯನ್ನು ತಾನು ತಿನ್ನುವುದಿಲ್ಲ ;
ಮೂಷಕ ಗುಣವನುಳ್ಳವ ನೀನು = ಮೂಷಕಗುಣ ದೋಷಗಳ ಕಡಿವಲ್ಲಿ ;
ಗರುಡನಂಥವ ನೀನು = ಗರುಡನ ಗುಣ ಧ್ಯಾನಕ್ಕೆ ನಿಲುಕದೆ ಹಾರುವ ವಿಷಯದಲ್ಲಿ ;
ವರಕಪಿ ಗುಣದವ ನೀನು = ಕಪಿಗುಣ ಅಣಕಿಸ್ಯಾಡುತ್ತ ಹಿಡಿಯುವದರಲ್ಲಿ ;
ಕರಿಯಂಥವ ನೀನು = ಭಕ್ತರ ಭಾರ ಹೊರುವ ಅಥವಾ ಭಕ್ತಿಯ ಮದವೇರಿಸಿ ಭಕ್ತರನ್ನು ತಿರುಗಿಸುವ ಗುಣದಲ್ಲಿ ;
ಕಪ್ಪೆಯಂಥವ ನೋಡು = ಕಪ್ಪೆಯ ಗುಣ ನೀರಿನಲ್ಲಿ ನಿಲ್ಲುವುದು , ನೀನು ಭಕ್ತಿ ಇದ್ದಲ್ಲಿ ಇರುವ ಗುಣ ;
******