Audio by Mrs. Nandini Sripad
(ಗುರುವಿಜಯವಿಠ್ಠಲ ಅಂಕಿತ)
ರಾಗ ಪಂತುವರಾಳಿ
ಧ್ರುವತಾಳ
ನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿ
ನಿನ್ನ ಕಾಂಬುವದೆ ನಿತ್ಯಾನಂದ
ನಿನ್ನ ಕಾಂಬುವದೆ ಶುಭದಿನ ವೆನಿಪದು
ನಿನ್ನ ಕಂಡದ್ದೆ ಪರಮ ಮಂಗಳವೂ
ನಿನ್ನ ಕಾಂಬುವದೆ ಘನ್ನ ಯಶಸ್ಸು ಎನಗೆ
ನಿನ್ನ ಕಾಂಬುವದೆ ನಿತ್ಯೋತ್ಸವ
ನಿನ್ನ ಕಾಂಬುವದೆ ದೇಹ ಪುಷ್ಟತ್ವ ಎನಗೆ
ನಿನ್ನ ಕಾಂಬುವದೆ ನಿಶ್ಚಿಂತವೂ
ನಿನ್ನ ಕಾಂಬುವದೆ ಪರಮ ಪವಿತ್ರ ಎನಗೆ
ನಿನ್ನ ಕಾಂಬುವದೆ ಆರೋಗ್ಯವು
ನಿನ್ನ ಕಾಂಬುವದೆ ಗಂಗಾದಿ ಸ್ನಾನ ಎನಗೆ
ನಿನ್ನ ಕಂಡದ್ದನೇಕ ಜಪತಪ ಹೋಮವೊ
ನಿನ್ನ ಕಾಂಬುವದೆ ಅಪರಿಮಿತಾನ್ನದಾನ
ನಿನ್ನ ಕಂಡದ್ದನೇಕ ಕ್ರತು ವಿಶೇಷ
ನಿನ್ನ ಕಾಂಬುವದೆ ಷೋಡಶ ಮಹಾದಾನ
ನಿನ್ನ ಕಾಂಬುವದೆ ಸಕಲ ವೃತವೊ
ನಿನ್ನ ಕಾಂಬುವದೆ ತೇಜಸ್ಸು ಎನಗದು
ನಿನ್ನ ಕಾಂಬುವದೆ ಶೌರ್ಯ ಧೈರ್ಯ
ನಿನ್ನ ಕಾಂಬುವದೆ ಇಹಪರ ಸೌಖ್ಯವೆಲ್ಲ
ನಿನ್ನ ಕಂಡದ್ದು ಮುಕ್ತಿ ನಿಜಾವಿದು
ಅನ್ಯಥಾ ಇದಕ್ಕಿಲ್ಲ ನಿನ್ನ ಪಾದವೆ ಸಾಕ್ಷಿ
ಪನ್ನಂಗಶಯನ ಗುರುವಿಜಯವಿಠ್ಠಲರೇಯ
ನಿನ್ನ ಕಾಂಬುವದೆ ಇಷ್ಟ ಎನಗೆ ॥ 1 ॥
ಮಟ್ಟತಾಳ
ನಿನ್ನ ಕಾಣದ ದಿನ ಅಶುಭ ದುರ್ದಿನ
ನಿನ್ನ ಕಾಣದ ಜ್ಞಾನ ಅಡವಿಯ ರೋದನ
ನಿನ್ನ ಕಾಣದ ಭಕುತಿ ರೋಗಿಷ್ಟನ ಶಕುತಿ
ನಿನ್ನ ಕಾಣದ ವೈರಾಗ್ಯ ದಾರಿದ್ರನ ಭಾಗ್ಯ
ನಿನ್ನ ಕಾಣದ ಸುಖ ತ್ರೈತಾಪದ ದುಃಖಾ
ನಿನ್ನ ಕಾಣದ ಸ್ನಾನ ಬಧಿರ ಕೇಳುವ ಗಾನ
ನಿನ್ನ ಕಾಣದ ಜಪ ಚಂಡಾರ್ಕನ ತಾಪ
ನಿನ್ನ ಕಾಣದ ತಪ ನಿರ್ಗತ ಪ್ರತಾಪ
ನಿನ್ನ ಕಾಣದ ಆಚಾರ ಬಾಧಿಪ ಗ್ರಹಚಾರ
ನಿನ್ನ ಕಾಣದ ನರ ಕ್ರಿಮಿ ಕೀಟ ವಾನರ
ನಿನ್ನ ಕಾಣದ ಕರ್ಮ ಅರಿಯದಿಪ್ಪ ಮರ್ಮ
ನಿನ್ನ ಕಾಣದ ಪುಣ್ಯಗತವಾದ ಧಾನ್ಯ
ನಿನ್ನ ಕಾಣದ ಯಾತ್ರ ಅಂಧಕನ ನೇತ್ರ
ನಿನ್ನ ಕಾಣದ ಪಾತ್ರ ಕಾಣದಿಪ್ಪ ನೇತ್ರ
ನಿನ್ನ ಕಾಣದೆ ಬರಿದೆ ಪರಿಪರಿ ಸಾಧನ
ಅನ್ನಂತ ಮಾಡಿದರು ಅವಗಿಲ್ಲ ಸುಖಸ್ಪರ್ಶ
ಚಿನ್ಮಯ ಮೂರುತಿ ಗುರುವಿಜಯವಿಠ್ಠಲರೇಯ
ನಿನ್ನ ಕಾಂಬುವದೆಲ್ಲ ಕರ್ಮಕ್ಕೆ ಸಾರ್ಥಕವೊ ॥ 2 ॥
ತ್ರಿಪುಟತಾಳ
ನಿನ್ನ ಕಂಡವ ಸಕಲ ಸಾಧನ ಮಾಡಿದವ
ನಿನ್ನ ಕಂಡವನೇ ನಿರ್ಮಲನೊ
ನಿನ್ನ ಕಂಡವಗುಂಟೆ ಕಲಿಕೃತ ಅಘವನ್ನು
ನಿನ್ನ ಕಂಡವನೆ ಜೀವನ್ಮುಕ್ತಾ
ನಿನ್ನ ಕಂಡವರಲ್ಲಿ ಸಕಲ ಸುರರು ಉಂಟು
ನಿನ್ನ ಕಾಂಬುವ ದೇಹ ಸುಕ್ಷೇತ್ರವೊ
ನಿನ್ನ ಕಾಂಬುವ ತನುವು ಪಾವನ ವೆನಿಪುದು
ನಿನ್ನ ಕಾಂಬುವದೆ ವಿಮಲ ಕೀರ್ತಿ
ನಿನ್ನ ಕಾಂಬುವ ನರಗೆ ನರಕದ ಭಯ ಉಂಟೆ
ನಿನ್ನ ಕಾಂಬುವದೆ ಮಾನ್ಯತೆಯೋ
ಉನ್ನತ ಮಹಿಮೆ ಗುರುವಿಜಯವಿಠ್ಠಲರೇಯ
ನಿನ್ನ ಕಾಂಬುವದೇ ನಿಖಿಳ ಸುಖವೋ ॥ 3 ॥
ಅಟ್ಟತಾಳ
ನಿನ್ನ ಕಾಣದೆ ಧನ್ಯನಾಗೇನೆಂಬೋದು
ಖಿನ್ನ ಮಾತಲ್ಲದೆ ಸಮ್ಮತವಲ್ಲವು
ಉನ್ನತ ಗುಣನಾರಿ ಪತಿಯುಕ್ತಳಾಗಲು
ಸನ್ಮಾನ್ಯಳೆನಿಪಳು ಸಂತತ ಸುಖದಿ
ಅನಂತ ರೂಪನ್ನ ಕಾಂಬುವ ಜನರೆಲ್ಲ
ಚಿನ್ಮಯ ರೆನಿಸಿ ಶುಭದಿ ಶೋಭಿಸುವರು
ಪನ್ನಗಾರಿವಾಹ ಗುರುವಿಜಯವಿಠ್ಠಲರೇಯ
ನಿನ್ನಿಂದ ಭಕುತರು ವಿಚ್ಛಿನ್ನ ದಾರಿದ್ರರೋ ॥ 4 ॥
ಆದಿತಾಳ
ನಿನ್ನ ಕಾಂಬುವದೆ ಜನ್ಮಕ್ಕೆ ಸಫಲವೊ
ನಿನ್ನ ಕಾಂಬುವಗೆ ಪುನರಪಿ ಜನ್ಮವಿಲ್ಲ
ಅನಾದಿ ಪ್ರಾರಬ್ಧ ಸಂಬಂಧ ನಿಮಿತ್ತ
ಜನ್ಮವು ಒದಗಲು ಅವಗಿಲ್ಲ ಲೇಪವು
ನಿನ್ನ ಕಾಂಬುವನ್ನ ಸುರರೆಲ್ಲ ಮನ್ನಿಪರು
ನಿನ್ನ ಕಾಂಬುವದೆ ಷಡುರಸ ಭೋಜನವು
ಉನ್ನತ ಭಕ್ತರಿಗೆ ಅನ್ನವೆ ನೀವೆ ನೆನಿಪ
ಅನ್ನಮಯ ದೇವ ಗುರುವಿಜಯವಿಠ್ಠಲರೇಯ
ನಿನ್ನ ಕಾಂಬುವಂತೆ ಅಭಿಮುಖನಾಗುವದು ॥ 5 ॥
ಜತೆ
ನಿನ್ನ ಕಾಂಬುವದೆ ನಿತ್ಯೈಶ್ವರ್ಯವೊ ದೇವ ಪ್ರ-
ಸನ್ನನಾಗುವದು ಗುರುವಿಜಯವಿಠ್ಠಲರೇಯಾ ॥
**************