..
kruti by Nidaguruki Jeevubai
ಮರೆಯದೆ ಸಲಹೊ ಮಾರುತೀಶ ಎನ್ನ
ಶರಣೆಂಬೆನು ನಿನ್ನ ಪ
ಶರಣಾಗತರನು ಬಿಡದೆ ಪೊರೆವ ಫನ್ನ-
ಗಿರಿ ಅಂಜನೆತನಯ ಅ.ಪ
ವನನದಿಗಿರಿಗುಹೆಗಳಲಿ ನಿನ್ನ ರೂಪ
ತೋರುವುದೈ ಭೂಪ
ಶರಧಿ ಲಂಘಿಸಿ ರಾವಣನಿಗೆ ತಾಪ
ಪುಟ್ಟಿಸಿದೆಯೊ ರಘುಪ-
ನಡಿಗಳ ಬಿಡದೆ ಸೇವಿಸುವರ ಪಾಪ
ಮಾಡುವಿ ನಿರ್ಲೇಪ
ಸಡಗರದಲಿ ನಿನ್ನೊಡೆಯನ ತೋರಪ್ಪ
ಘನಗಿರಿ ಹನುಮಪ್ಪ 1
ಊರಿನಲಿ ಊರ್ಹೊರಗು ನಿನ್ನ ಮೂರ್ತಿ
ಎಷ್ಟ್ಹೇಳಲಿ ಕೀರ್ತಿ
ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ
ವರ್ಣಿಸುವುದೆ ಅರ್ಥಿ
ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ
ಪರಿಹಾರವೋ ಭೀತಿ
ನಾಡೊಳು ನಿನ್ನ ಭಜಿಸುವವರ ಸಂಗ
ನೀಡು ಕೃಪಾಪಾಂಗ2
ಕಡಲ ಶಯನನ ಅಡಿಗಳ ಸೇವಿಸುತ
ಕಡುಹರುಷವ ಪಡುತ
ಬಿಡದೆ ನಿನ್ನಯ ಸೇವಕರಿವರೆನುತ
ಶ್ರೀಶಗೆ ಪೇಳುತ್ತ
ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ
ರಾಮರ ಸ್ಮರಿಸುತ್ತ
ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ3
***