ವಿಟ್ಠಲ ವಿಟ್ಠಲ ವಿಟ್ಠಲ ಎನು ಮನವೇ ll ಪ ll
ವಿಟ್ಠಲ ಎನೆ ಹೃದದಿಷ್ಠಿತನಾಗುವ
ದುಷ್ಟ ಕುಲಾಂತಕ ಕಷ್ಟವ ನೀಗುವ ll ಅ ಪ ll
ಲಿಂಗ ಶರೀರವ l ಭಂಗಿಸೆ ಸಜ್ಜನ
ಸಂಗ ಮಾಡು ದು l ಸ್ಸಂಗವ ನೀಗೋ l
ಅಂಗನೆಯರ ಬೆಳದಿಂಗಳ ನಗೆಗೆ
ಮಂಗನಾಗಿ ಭವ l ಭಂಗಕೆ ಸಿಲುಕದೆ ll 1 ll
ಹಸಗೆಡಿಸುವ ದು l ರ್ವಿಷಯದಾಸೆಯ ಬಿಡು
ಬಿಸಜನಾಭನ ಪದ l ಬಿಸಜವ ನೆನೆಯೋ l
ಶಶಿ ಶತ ನಿಭ ಹರಿ l ವಶವ ಮಾಡೆ ಮನ
ಎಸೆವ ಪದ ಪ್ರದ l ಹರ್ಷವ ಪಡಿಸುವ ll 2 ll
ಗರ್ವ ಬಿಟ್ಟು ನೀ l ಗುರ್ವಂತರ್ಗತ
ಶರ್ವ ವಂದ್ಯನನು l ಪರ್ವ ಪರ್ವ ನೆನೆಯೋ
ದರ್ವಿ ಜೀವಿ ನಿನ l ಸರ್ವದ ಪೊರೆಯುವ
ದುರ್ವಿ ಭಾವ್ಯ ಗುರು l ಗೋವಿಂದವಿಟ್ಠಲ ll 3 ll
***