ರಾಗ: ಮೋಹನ ತಾಳ: ಆದಿ
ಬೇಡುವೆನೋ ನಿನ್ನ ಗುರು ರಾಘವೇಂದ್ರ
ಬೇಡುವೆನೋ ನಿನ್ನ ಪ
ಕಾಡುವ ರೋಗವನೋಡಿಸಿ ನಿನ್ನನೆ
ನೋಡುವ ಸೌಭಾಗ್ಯ ನೀಡೋ ಪ್ರಸನ್ನ ಅ. ಪ
ಸುರಮುನಿ ಉಪದೇಶದೆ ಗರ್ಭದೊಳಿದ್ದು
ಪರಮ ವೈಷ್ಣವನೆನಿಸಿದೆ
ದುರುಳ ಪಿತನ ಬಾಧೆ ಸಹಿಸುತ ಇರಲಾಗೆ
ನರಸಿಂಹನನೇ ಕಂಬದಲಿ ತೋರ್ದೆ
ಧೃತ:
ಹರಿ ಸರ್ವೊತ್ತಮನೆಂಬುವ ಸತ್ಯವ
ಧರೆಯೋಳು ಸ್ಥಾಪಿಸಿ ಮೆರೆಸಿದೆ ಗುರುವೇ
ಮರುತನಾವೇಶದ ಬಲವನೇ ಪಡೆದು
ಎರಡೆರಡು ಕಕ್ಷೆ ಸೇರಿದ ಮಹಿಮ 1
ಸಿರಿರಾಮಚಂದ್ರನ ಅರ್ಚಿಸಿದವನೇ
ನರಹರಿಯ ಪ್ರಿಯನೇ
ವರ ವೇದವ್ಯಾಸರಿಗತಿಪ್ರಿಯನಾದ
ಸಿರಿ ಕೃಷ್ಣನ ಪಾದ ಭಜಿಸಿ ಪಡೆದೆ ಮೋದ
ಧೃತ:
ಮರುತ ಮತದ ತತ್ತ್ವ ಭರದಿ ಸಂಗ್ರಹಿಸುತ
ಪರಿಮಳಾದಿ ಸುಗ್ರಂಥವ ರಚಿಸುತ
ವರಹಜೆ ತಟದ ಮಂಚಾಲೆಯಲಿರುತ
ಮೆರೆದಿಹೆ ಬೃಂದಾವನದಲಿ ನೆಲೆಸುತ 2
ಕರೆದಲ್ಲಿಗೆ ಬರುವೇ ಅಸ್ಮದ್ಗುರುವೇ
ಶರಣು ಬಂದವರ ಪೋರೇವೆ
ನಿರುತ ಸ್ಮರಿಸುವರಘ ಪರಿಹರಿಸುತಲವರ
ಕರುಣದಿಂದಲಿ ಕಾವೇ ವರ ಕಲ್ಪತರುವೇ
ಧೃತ:
ದುರಿತ ಶರಧಿಯೊಳು ಮುಳುಗಿರುವವನಿಗಾ-
ಸರೆಯೊಂದೇ ನಿನ್ನಯ ಸ್ಮರಣೆ
ವರದ ಉದಯಾದ್ರೀಶವಿಠಲನ
ಚರಣ ಕಮಲವ ತೋರೋ ಬೇಗನೆ 3
***