Showing posts with label ಸಾಣೊರು ಪ್ರಾಣಾ ನಿನ್ನ ಮಹಿಮೆಗಳಿಗೆ prasannavenkata. Show all posts
Showing posts with label ಸಾಣೊರು ಪ್ರಾಣಾ ನಿನ್ನ ಮಹಿಮೆಗಳಿಗೆ prasannavenkata. Show all posts

Wednesday 1 September 2021

ಸಾಣೊರು ಪ್ರಾಣಾ ನಿನ್ನ ಮಹಿಮೆಗಳಿಗೆ ankita prasannavenkata

ಸಾಣೊರು ಪ್ರಾಣಾ ನಿನ್ನ ಮಹಿಮೆಗಳಿಗೆ /

ಎಣೆಗಾಣೆ ಈ ಕ್ಷೋಣಿಯೊಳಗೆ //


ಜಾಣೆ ಜಾನಕಿಗೆರಗಿ ಮುದ್ರಿಕೆಯನಿತ್ತು|  

 ಹಣ್ಣಿನೆಂಜಲ ವೈಯ್ದೆ ರಾವ ಣನೆಡೆಗೆ ||

ಕ್ಷಣದಲಿ ಸಂಜೀವಿನಿಯ ತಂದಿಳಿಸಿ |

ಪ್ರಾಣಪಕ್ಷಿಯ ತಡೆದೆ ಲಕ್ಷ್ಮಣಾದಿಗಳಲಿ  ||


ವುಣ್ಣಿಸಿದ ವಿಷವನರಗಿಸಿಕೊಂಡು ಕೀಚಕಗೆ /

ಹೆಣ್ಣಾಗಿ ಜರಿದೆ ಜವ್ವನೆಯರ ಮದವಾ /

ಕಣ್ಣಿಟ್ಟು ಕಾಂತೆಯನು ಚೆನ್ನಾಗಿ ಸಲಹಿದಾ /

ಗುಣವಂತ ಕೃಷ್ಣನ್ನ ದಾಸನುದಾಸಾ //


ಮಣಿಮಂತ ಮೊದಲಾದ ದುರ್ವಾದಿಗಳ / 

ಮಣಿಸಿ ಮೆರೆದೆ ಈ ಊರ್ವಿಯೊಳಗೆ /

ಸ್ಥಾಣು ರೇತಃ ಪ್ರಸನ್ನ ವೆಂಕಟ ರಾಯನ್ನ /

ತಾಣ ತಿಳಿದ ಹನುಮ ಭೀಮ ಗುರುವರ್ಯ //

***


ಸಾಣೊರು ಪ್ರಾಣಾ ನಿನ್ನ ಮಹಿಮೆಗಳಿಗೆ /ಎಣೆಗಾಣೆ ಈ ಕ್ಷೋಣಿಯೊಳಗೆ //

ಶ್ರೀ ಪ್ರಸನ್ನ ವೆಂಕಟದಾಸರು ಈ ಕೀರ್ತನೆಯಲ್ಲಿ ವಾಯುದೇವರ ಮಹಿಮೆಗಳನ್ನು ತಿಳಿಸುತ್ತ ಅವರ ಅವತಾರ ತ್ರಯಗಳನ್ನು ವರ್ಣಿಸುತ್ತಾರೆ.

ಕೀರ್ತನೆಯ ಪಲ್ಲವಿಯಲ್ಲಿ ಹೇ! ಸಾಣೊರು ಪ್ರಾಣ ದೇವರೇ ಕ್ಷೋಣಿಯೊಳಗೆ ನಿಮ್ಮ ಮಹಿಮೆ ಅಪಾರ, ಅನಂತ ಎಂದು ತಿಳಿಸುತ್ತಾರೆ.

ನುಡಿ 1: ಜಾಣೆ ಜಾನಕಿಗೆರಗಿ ಮುದ್ರಿಕೆಯನಿತ್ತು|  

 ಹಣ್ಣಿನೆಂಜಲ ವೈಯ್ದೆ ರಾವ ಣನೆಡೆಗೆ ||

ಕ್ಷಣದಲಿ ಸಂಜೀವಿನಿಯ ತಂದಿಳಿಸಿ |ಪ್ರಾಣಪಕ್ಷಿಯ ತಡೆದೆ ಲಕ್ಷ್ಮಣಾದಿಗಳಲಿ  ||

ಅರ್ಥ : ತ್ರೇತಾಯುಗದ ರಾಮಾವತಾರದಲ್ಲಿ ರಾವಣನು ಸೀತಕೃತಿ ವೇದವತಿಯನ್ನಪಹರಿಸಿ ಲಂಕೆಯ ಅಶೋಕ ವನದಲ್ಲಿರಿಸಿದಾಗಿನ ಪ್ರಸಂಗ, ವಾಯುದೇವರ ಪ್ರಥಮಾವತಾರಿ ಹನುಮಂತ ಶ್ರೀರಾಮನ ಆಜ್ಞೆಯನ್ನು ಶಿರಸಾವಹಿಸಿ ಅವರು   ಕೊಟ್ಟ ಮುದ್ರಿಕೆಯನ್ನು ತೆಗೆದುಕೊಂಡು ಸಮುದ್ರೋ ಲ್ಲಂಘನ ಮಾಡಿ ಲಂಕಾಪಟ್ಟಣ ಸೇರಿ ಅಶೋಕ ವನದಲ್ಲಿದ್ದ ಜಾಣೆ ಜಾನಕಿಗೆ ನಮಸ್ಕರಿಸಿ ಮುದ್ರಕೆಯನ್ನು ಕೊಟ್ಟು ವನವನ್ನೆಲ್ಲ ಹಾಳು ಮಾಡಿ ಹಣ್ಣಿನೆಂಜಲು ಒಯ್ದು ರಾವಣನಿಗೆ ಕೊಟ್ಟದ್ದು, ಯುದ್ಧದಲ್ಲಿ ಇಂದ್ರಜಿತುವಿನ ಬಾಣಗಳಿಂದ ಮೂರ್ಛೆ ಹೋದ ಲಕ್ಷ್ಮಣಾದಿಗಳನ್ನು ಸಂಜೀವಿನಿ ಪರ್ವತ ತಂದು ಅವರ ಪ್ರಾಣಪಕ್ಷಿಯನ್ನು  ಉಳಿಸಿದ್ದನ್ನು ದಾಸರು ವರ್ಣಿಸಿದ್ದಾರೆ. ಇಲ್ಲಿ ಹನುಮಂತದೇವರ ಸ್ವಾಮಿ ಭಕ್ತಿ, ದಾಸತ್ವ ಜೊತೆಗೆ ಅವರ ಮಹಿಮೆ ತಿಳಿಸಲ್ಪಟ್ಟಿದೆ.

ನುಡಿ 2 : ವುಣ್ಣಿಸಿದ ವಿಷವನರಗಿಸಿಕೊಂಡು ಕೀಚಕಗೆ /ಹೆಣ್ಣಾಗಿ ಜರಿದೆ ಜವ್ವನೆಯರ ಮದವಾ /

ಕಣ್ಣಿಟ್ಟು ಕಾಂತೆಯನು ಚೆನ್ನಾಗಿ ಸಲಹಿದಾ /ಗುಣವಂತ ಕೃಷ್ಣನ್ನ ದಾಸನುದಾಸಾ //

ಅರ್ಥ : ದ್ವಾಪರಯುಗದ ಪ್ರಸಂಗ, ವಾಯುದೇವರ ಎರಡನೇ ಅವತಾರ ಭೀಮಸೇನ ದೇವರು. ಕೌರವರು ಭೀಮನನ್ನು ಹತ ಮಾಡಲು ಸದಾ ಹೊಂಚು ಹಾಕುತ್ತಿದ್ದರು. ಸಕಲ ಜೀವರಾಶಿಗಳ ಸಕಲ ದೇಹಗಳಲ್ಲಿದ್ದು ದಿನಕ್ಕೆ ಒಂದು ದೇಹದಲ್ಲಿ 21,600 ಸಲ ಹರಿಯಾಜ್ಞೆಯಿಂದ ಹಂಸಜಪ ಮಾಡಿ  ಆ ಪರಮಾತ್ಮನಿಗರ್ಪಿಸಿ ಜೀವರನ್ನು ಪ್ರಾಣದಿಂದ ಇರಿಸಿ ಅವರೆಲ್ಲರ ಸಕಲೇಷ್ಟ ಪ್ರದಾಯಕರಾಗಿರುವರು. ಇಂತಹ ಭೀಮಸೇನರ ಮಹಿಮೆ ಅರಿಯದೆ ಅವರಿಗೆ ವಿಷವುಣಿಸಿ ಕೊಲ್ಲಲು ಪ್ರಯತ್ನಿಸಿದರು. ಸಮುದ್ರಮಥನ ಸಮಯದಲ್ಲಿ ಉದ್ಭವಿಸಿದ ಕರ್ಕೋಟಕ ವಿಷವನ್ನು ಲೀಲಾಜಾಲವಾಗಿ ಜೀರ್ಣಸಿಕೊಂಡ ಭೀಮರಿಗೆ ಇವರು ಕೊಟ್ಟ ವಿಷ ಅದಾವ ಲೆಕ್ಕ. ಅದನ್ನೂ ಸುಲಲಿತವಾಗಿ ಜೀರ್ಣಸಿಕೊಂಡವರು. ಇನ್ನು ಭೂಭಾರವಿಳಿಸಲು ಅವತರಿಸಿದ ಶ್ರೀ ಕೃಷ್ಣನಿಗೆ ಜೊತೆಯಾಗಿ ಸೇವೆ ಸಲ್ಲಿಸಿದ ಕೀರ್ತಿ ಭೀಮಸೇನರದು. ಅಜ್ಞಾತ ವಾಸದಲ್ಲಿದ್ದಾಗ ಕೀಚಕನು ದ್ರೌಪತಿಯನ್ನು ತಡವಿದಾಗ, ಸ್ತ್ರೀ ವೇಷಧಾರಿಯಾಗಿ ಅವನನ್ನು ಗರಡಿ ಮನೆಗೆ ಕರೆಸಿ ಸೊಕ್ಕನ್ನು ಅಡಗಿಸಿದನು. ಕೃಷ್ಣನ ದಾಸನುದಾಸ ಈ ಭೀಮಸೇನರು ಎಂದು ದಾಸರು ಕೊಂಡಾಡಿರುವರು.

ನುಡಿ 3 : ಮಣಿಮಂತ ಮೊದಲಾದ ದುರ್ವಾದಿಗಳ / ಮಣಿಸಿ ಮೆರೆದೆ ಈ ಊರ್ವಿಯೊಳಗೆ /ಸ್ಥಾಣು ರೇತಃ ಪ್ರಸನ್ನ ವೆಂಕಟ ರಾಯನ್ನ /ತಾಣ ತಿಳಿದ ಹನುಮ ಭೀಮ ಗುರುವರ್ಯ //

ಅರ್ಥ : 21 ಕುಭಾಷ್ಯಗಳನ್ನು ಖಂಡಿಸಿ ಹರಿಯೇ ಸರ್ವೋತ್ತಮ ಸುರರೆಲ್ಲ ದಾಸರು, ಜಗತ್ತು ಸತ್ಯ, ಪಂಚ ಭೇದ, ತಾರತಮ್ಯತ್ವವನ್ನು ಜಗತ್ತಿಗೆ ಸಾರಿ ಮೆರೆದವರು  ಶ್ರೀ ಮಧ್ವಾಚಾರ್ಯರು. ಜಗತ್ತಿಗೆ ಗುರುಗಳಾದವರು.

ಸಾಣೊರಿನಲ್ಲಿರುವ ಶ್ರೀ  ಪ್ರಸನ್ನ ವೆಂಕಟನ ತಾಣವನ್ನು ತಿಳಿದ ಹನುಮ - ಭೀಮ - ಮಧ್ವ ಗುರುವರ್ಯರು ಇವರು ಎಂದು ಅನನ್ಯವಾಗಿ ದಾಸರು ಹರಿಯ ಪ್ರಥಮಾಂಗರಾದ, ಅಚ್ಚಿನ್ನ ಭಕ್ತರಾದ ಶ್ರೀ ವಾಯುದೇವರನ್ನು ಅವಸರ ಅವತಾರ ತ್ರಯ ಗಳನ್ನು ಕೊಂಡಾಡಿದಿದ್ದಾರೆ. ಇಂತಹ ಮಹಿಮಾ ವಂತರಾದ ಗುರುವರ್ಯರೇನಮ್ಮನ್ನು ರಕ್ಷಿಸಿ ಅನುಗ್ರಹಿಸಿ ಎಂದು ನಮ್ಮ ನಿಮ್ಮೆಲ್ಲರ ಪರವಾಗಿ ದಾಸರು ಪ್ರಾರ್ಥಿಸಿದ್ದಾರೆ.

ಮಧ್ವ ನವಮಿಯ ಪ್ರಯುಕ್ತ ಅಲ್ಪ ಸೇವಾ ರೂಪದಲ್ಲಿ.

ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ.

 ‌(received in WhatsApp)

***