Showing posts with label ನಿನ್ನ ಸ್ಮರಣೆ gopala vittala ankta suladi ಪ್ರಾರ್ಥನಾ ಸುಳಾದಿ NINNA SMARANE PRAARTHANA SULADI. Show all posts
Showing posts with label ನಿನ್ನ ಸ್ಮರಣೆ gopala vittala ankta suladi ಪ್ರಾರ್ಥನಾ ಸುಳಾದಿ NINNA SMARANE PRAARTHANA SULADI. Show all posts

Sunday 8 December 2019

ನಿನ್ನ ಸ್ಮರಣೆ gopala vittala ankta suladi ಪ್ರಾರ್ಥನಾ ಸುಳಾದಿ NINNA SMARANE PRAARTHANA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಸುಳಾದಿ 

 ರಾಗ ಪಂತುವರಾಳಿ 

 ಧ್ರುವತಾಳ 

ನಿನ್ನ ಸ್ಮರಣೆ ಎನಗೆ ತೀರ್ಥಯಾತ್ರಿಗಳಯ್ಯ
ನಿನ್ನ ಸ್ಮರಣೆ ಎನಗೆ ಯಜ್ಞ ದಾನಂಗಳಯ್ಯ
ನಿನ್ನ ಸ್ಮರಣೆ ಎನಗೆ ವ್ರತ ಚಾಂದ್ರಾಯಣಗಳಯ್ಯ
ನಿನ್ನ ಸ್ಮರಣೆ ಎನಗೆ ತಪಸ್ಸು ಸಿದ್ಧಿಗಳಯ್ಯ
ನಿನ್ನ ಸ್ಮರಣೆ ಎನಗೆ ಸಾಧನೆ ಸಂಪತ್ತುಗಳು
ನಿನ್ನ ಸ್ಮರಣೆ ಎನಗೆ ಬಲ ಧೈರ್ಯವೊ ಎನ್ನಯ್ಯ
ನಿನ್ನ ಸ್ಮರಣೆ ಎನಗೆ ಇಹಪರದಲ್ಲಿ ಲಾಭ
ನಿನ್ನ ಸ್ಮರಣೆ ಎನಗೆ ಸಿದ್ಧವಾದ ಮುಕುತೆಯ್ಯ
ನಿನ್ನ ವಿಸ್ಮರಣೆಯಿಂದ ಆವ ಕರ್ಮ ಮಾಡಲು
ಪುಣ್ಯದ ಫಲವನ್ನು ದೊರಿಯದು ಜೀವರಿಗೆ
ಕಣ್ಣು ಬಿಗಿದು ಕಟ್ಟಿ ಚಿತ್ರವ ಬರೆದಂತೆ
ನಿನ್ನರಿಯದ ಕರ್ಮ ಅನಂತ ಮಾಡಲ್ಯಾಕೆ
ಕನ್ನಿಕೆಗೆ ಬಾಲ್ಯದಿ ಕಂಡವರು ಪತಿ ಆದಂತೆ
ನಿನ್ನ ಸ್ಮರಣಿಲ್ಲದ ಕರ್ಮ ಈ ಪರಿಯೊ ದೇವ
ನಿನ್ನ ವಿಸ್ಮರಣೆಯೆ ಗೋಹತ್ಯ ಬ್ರಹ್ಮಹತ್ಯ 
ನಿನ್ನ ವಿಸ್ಮರಣೆಯೆ ಪಂಚ ಮಹಾಪಾತಕ
ನಿನ್ನ ವಿಸ್ಮರಣೆಯೆ ಸರ್ವ ಅಪರಾಧವಯ್ಯ
ನಿನ್ನ ವಿಸ್ಮರಣವೇ ಸಕಲ ನಿಷೇಧಗಳು
ನಿನ್ನ ಸ್ಮರಣವೇ ಇಷ್ಟಗಳಯ್ಯ
ನಿನ್ನ ಸ್ಮರಣೆ ಇರಲು ಅಧಮ ಕರ್ಮ ಮಾಡಲು
ಅನ್ಯಾಯವೆನಿಸದು ಆಗಮ ಸಮ್ಮತವು
ಘನ್ನ ದಯಾನಿಧೆ ಗೋಪಾಲವಿಠ್ಠಲ 
ನಿನ್ನ ಸ್ಮರಣೆ ಪುಣ್ಯ ನಿನ್ನ ವಿಸ್ಮರಣೆ ದೋಷ ॥ 1 ॥

 ಮಠ್ಯತಾಳ 

ಜಡ ಚೇತನ ಜ್ಞಾನ ಅಡಿಗಡಿಗೆ ತಿಳಿದು
ಜಡಕೆ ಲಯವೆ ಬಗೆದು ಚೇತನಗಳೆರಡು
ದೃಢವಾಗಿ ತಾ ತನ್ನ ಒಡಲೊಳಗಿಪ್ಪನ್ನ
ಒಡೆಯನೆಂದು ತಿಳಿದು ಅಡಿಗಳಿಗೆ ಎರಗಿ
ಕೊಡುವವ ಕೊಳುವನು ಬಿಡದಲೆ ನೀನೆಂದು
ನಡಿಸುವ ನುಡಿಸುವ ಹರಿ ನೀನೆಂದರಿದು
ಎಡಬಲದಲಿ ಇನ್ನು ಪರಿವಾರ ಸಹವಾಗಿ
ಕಡಕವಿಲ್ಲದೆ ನೋಡಿ ಜಡಮತಿಯನೆ ಬಿಟ್ಟು
ನುಡಿವದೆ ಸ್ಮರಣೆಯು ಕೊಡುವದು ಮಹಾಫಲವು
ಕಡು ಮೂರ್ಖತನದಿ ಬಿಡದಲೆ ಹಗಲಿರುಳು
ನುಡಿನುಡಿಗೆ ಘರ್ಜಿಸಿಡಲ್ಯಾತಕೆ ಮೊರಿಯಾ
ಮಿಡುಕುವುದಲ್ಲದೆ ಮೃಡಸಖನು ಮೆಚ್ಚ
ಕಡಲಶಯನ ರಂಗ ಗೋಪಾಲವಿಠ್ಠಲ 
ಕೊಡು ನಿನ್ನ ಸ್ಮರಣೆ ಬಿಡದಲೆ ಕ್ಷಣಕ್ಷಣಕೆ ॥ 2॥

 ರೂಪಕತಾಳ 

ನಾ ಕರ್ತನೆಂದದರಿಂದಲೇವೇ ಸಕಲ
ಶೋಕಾನರ್ಥಗಳು ಜೀವರಿಗೊದಗೋದು
ನೀ ಕರ್ತಾನೆಂದದರಿಂದ ಜೀವರಿಗೆ
ನರ್ಕಾದ್ಯನರ್ಥಗಳು ಆಗಲರಿಯವಯ್ಯ
ಈ ಕುರುಹಕೆ ತಂದು ದೃಷ್ಟಾಂತರವು ಇನ್ನು
ಆಕಳನ ಕೊಂದಂತೆ ಆ ವಿಪ್ರನೆ ಸಾಕ್ಷಿ
ಶೋಕ ಸುಖವೆರಡು ನೀನು ಮಾಡಿಸಿ ಇನ್ನು
ಹಾಕು ದ್ವಿಫಲವನು ಜೀವರ್ಯೋಗ್ಯತ ಅರಿದು
ನೀ ಕಾಣಿಸಿಕೊಂಬುವನೆ ನಿನ್ನ ಕರ್ತೃತ್ವಕ್ಕೆ
ಸಾಕಲ್ಯವಗರಿದು ಏಕ ಚಿತ್ತದಲ್ಲಿಪ್ಪ
ನೀ ಕರ್ತು ಮಾ ಸ್ವಾಮಿ ನಾ ಕುಶ್ಚಿತ ಭೃತ್ಯ
ನೀ ಕಾಯೊ ಎನ್ನಯ್ಯ ಸಾಕುವ ಬಿರಿದುಂಟು 
ನಾ ಕೃತಘ್ನ ಬಲು ನೀ ಕರುಣಾಳಯ್ಯ
ನಾ ಕಪಟಿಯೊ ದೇವ ನೀ ದಯಾವಾರಿಧಿ
ಸಾಕಲ್ಯವ ಗುಣಪೂರ್ಣ ಗೋಪಾಲವಿಠ್ಠಲ 
ಹಾಕದಿರೆನ್ನ ನಾನಾ ಕುಯೋನಿಗಳಲ್ಲಿ ॥ 3 ॥

 ಝಂಪೆತಾಳ 

ಆವ ಲೀಲೆಯೊ ನಿನ್ನದಾವ ಸ್ವಭಾವವೊ
ಜೀವರೊಡನೆ ಆಟ ಆವ ಸುಖವೊ ನಿನಗೆ
ನಾವಸ್ವತಂತ್ರರು ನೀ ಸರ್ವಸ್ವತಂತ್ರ 
ಬಾವೊದೆಮ್ಮಿಂದ ಏನು ನಿನಗೆ ದೇವ
ನಾವು ಊಳಿಗರು ನಿನಗೆ ಬೇಕಿವೆಂಬೀವೇನೊ
ನೀ ಊಳಿಗನಾಗಿ ಮಾಡಿಸಿ ನಮ್ಮಿಂದ
ಜೀವರಿಗೆ ಫಲವನು ತಂದು ತಂದು ನೀವೆ
ದೇವ ನಿನಗೆ ನೋಡ ಒಂದು ಕಾರಣವಿಲ್ಲ
ದೇವ ನಿನಗೆ ನೋಡ ಒಂದು ಕರ್ಮಗಳಿಲ್ಲ
ಆವಾವ ಪರಿ ನಿನ್ನ ಲೀಲೆಗಳ ತೋರಿದಿ
ದೇವ ನೀ ಬಂಡಿಯ ಬೋವಾದೆ ಅರ್ಜುನಗೆ
ಆವುಗಳ ಕಾದೆ ಸನಕಾದಿಗಳ ಪಾಲಿಸಲಿ
ಆ ಉಗ್ರಸೇನನ ಸೇವೆಯನು ಮಾಡಿದೆ
ದೇವ ಗೋಪಿಯ ಕೈಯ್ಯ ಕಟ್ಟಿ ಹಾಕಿಸಿಕೊಂಡೆ 
ನೀ ವಟುವಿಪ್ರನಾಗಿ ಯಜ್ಞದಲಿ ಪೋಗಿ
ದೇವ ಭಿಕ್ಷವ ಬೇಡಿ ಭಕ್ತನ್ನ ಪಾಲಿಸಿದೆ
ಕಾವಲಿ ಕಾದೆ ಆತನ್ನ ಮನೆ ದ್ವಾರದಲಿ 
ಆವ ಅಪೇಕ್ಷೆಯು ನಿನಗೆ ಒಂದೂ ಇಲ್ಲ
ಧಾವತಿ ಬಡುವೆ ನಿನ್ನ ಭಕುತರಿಗಾಗಿ 
ನೋವಾಗುವೆ ನಿನ್ನ ಭಕ್ತರು ದಣಿದರೆ
ಆವ ನಿನ್ನ ಕಾರ್ಯ ಭಕ್ತರ ಪಾಲಣೆ
ಆವ ನಿನ್ನ ಕ್ರಿಯಾ ದನುಜರ ಮರ್ದನೆ
ಆವ ವ್ಯಾಪಾರವು ನಿನಗೆ ಮಾಡೆಂಬರು 
ಪೇಳುವರುಂಟೆ ದೇವ
ಕಾವ ಕರುಣಿ ನಮ್ಮ ಗೋಪಾಲವಿಠ್ಠಲ 
ಸೇವಕರ ಪಾಲಿಸುವ ಬಗೆ ಎಂತೆಂತೊ ದೇವ ॥ 4 ॥

 ತ್ರಿಪುಟತಾಳ 

ಎನ್ನ ಅಜ್ಞಾನವೆಲ್ಲ ನಿನ್ನಾಧೀನವಯ್ಯ
ಎನ್ನ ಕರಣ ಚೇಷ್ಟೆ ವ್ಯಾಪಾರ ನಿನ್ನಾಧೀನ
ಎನ್ನ ಪ್ರೇರಣೆ ಪ್ರತಿಕ್ಷಣಕೆ ನಿನ್ನಾಧೀನ
ಎನ್ನ ಸ್ಮರಣೆ ಸ್ಫುರಣೆ ನಿನ್ನಾಧೀನ ದಮ್ಮಯ್ಯಾ
ಎನ್ನ ಸ್ವಾಮಿಯೆ ನೀನು ನಿನ್ನ ಭೃತ್ಯನು ನಾನು
ಇನ್ನೊಂದು ನಾನರಿಯೆ ಎನ್ನೊಡಿಯನೆ ಕೇಳು
ಎನ್ನ ಐಶ್ವರ್ಯವು ನಿನ್ನ ಪರವಾಗಲಿ
ಎನ್ನ ಆರೋಗ್ಯವು ನಿನ್ನ ಪರವಾಗಲಿ
ಎನ್ನ ಆಯುಷ್ಯವು ನಿನ್ನ ಪರವಾಗಲಿ
ಎನ್ನ ಸಕಲ ವ್ಯಾಪಾರ ನಿನ್ನ ಪರ ಆಗಲಿ
ಎನ್ನ ಚರಣಗಳು ನಿನ್ನ ಯಾತ್ರಿಯ ಮೆಟ್ಟಲಿ
ಎನ್ನ ಕರಗಳಿನ್ನು ನಿನ್ನ ಪೂಜೆ ಮಾಡಲಿ
ಎನ್ನ ಕರ್ಣಗಳಿನ್ನು ನಿನ್ನ ಕಥೆ ಕೇಳಲಿ
ಎನ್ನ ಚಕ್ಷುಸುಗಳು ನಿನ್ನ ಮೂರ್ತಿ ನೋಡಲಿ
ಎನ್ನ ಜಿಹ್ವೆಯು ಸತತ ನಿನ್ನ ಕೊಂಡಾಡಲಿ
ಎನ್ನ ಶಿರಸ್ಸು ನಿನ್ನ ಚರಣಕ್ಕೆರಗುತಿರಲಿ
ಎನ್ನ ಸರ್ವಾಂಗವು ಸಾಷ್ಟಾಂಗ ಹಾಕುತ
ಇನ್ನು ಹಗಲಿರುಳು ನಿನ್ನ ವಾಲ್ಗೈಸಲಿ
ಎನ್ನ ಮನೋವಾಕ್ಕಾಯದಿಂದಿನ್ನು
ಇನ್ನು ಮಾಡಿದ ಕರ್ಮ ನಿನ್ನ ಪರವು ಮಾಡಿ
ನಿನ್ನವನೆನೆಸಯ್ಯ ಘನ್ನ ದಯಾನಿಧೆ ಗೋಪಾಲವಿಠ್ಠಲ 
ಇನ್ನಿದೆ ಮಾಡಿಸೊ ಅನಂತ ಜನ್ಮಕ್ಕು ॥ 5 ॥

 ಅಟ್ಟತಾಳ 

ಕೆಡಿಸುವನು ನೀನೆ ಇಡಿಸುವನು ನೀನೆ
ಕೊಡಿಸುವನು ನೀನೆ ಹಿಡಿಸುವವನು ನೀನೆ
ಮಡದಿ ಇದ್ದರೆ ಮನೆ ಕಡು ಶುಭ ಎಂಬೋರು
ಹುಡುಗರಿದ್ದರೆ ಮನೆ ಕಡು ಶೋಭ ಎಂಬೋರು
ಒಡಿವೆ ಇದ್ದರೆ ಮನೆ ಕಡು ಶೋಭ ಎಂಬೋರು
ಹಡೆದವರಿದ್ದರೆ ಮನೆ ಕಡು ಶೋಭ ಎಂಬೋರು
ಜಡಗಳ ಹಿಡಕೊಂಡು ಮಿಡುಕೋ ಜೀವರ ನೋಡಿ
ಎಡವಿ ಬಿದ್ದಂತೆ ಎನಗಾಗುತಿದೆ ದೇವಾ
ಜಡಮತಿ ಜಡಸ್ನಾನ ಜಡಕರ್ಮ ಜಡಪೂಜೆ
ಜಡದಿ ಭಿನ್ನ ನಿನ್ನ ಅಡಿಗಳವಿಡಿಯದೆ
ಕಡೆಯಿಲ್ಲದ ಕರ್ಮ ಬಿಡದೆ ಮಾಡಲಿ ಯಾಕೆ
ಒಡೆಯಾ ನಿನ್ನ ಪ್ರೀತಿ ಪಡಿಯದರಿಯರಯ್ಯ
ಕಡು ಸಂಪತ್ತುಗಳು ನಿನ್ನ ನುಡಿಗಳು ಎನಗಿನ್ನು
ಬಿಡೆನೊ ಎಂದೆಂದಿಗೂ ದೃಢವಾಗಿ ಮನದೊಳು
ಕೊಡು ಇನ್ನು ಈ ಭಾಗ್ಯ ಒಡಿಯ ದೇವರದೇವ ಗೋಪಾಲವಿಠ್ಠಲ 
ಕೊಡು ಒಂದು ಕೊಡದಿರೆ ಬಿಡೆ ನಿನ್ನ ಚರಣವ ॥ 6 ॥

 ಆದಿತಾಳ 

ದಣವು ಬಂದರೆನಗೆ ಏನು ಆವ
ಗುಣವು ಬಂದರೆ ಎನಗೆ ಏನು
ಜನುಮ ಬಂದರೆನಗೆ ಏನು ಸು -
ಗುಣವಾಗಿ ಬಂದರೆನಗೆ ಏನು
ನಿನಗೆ ನನಗೆ ಭೇದ ತಿಳಿದು
ನನಗೆ ದೇಹಕೆ ಭೇದ ತಿಳಿದು
ಕ್ಷಣಕ್ಷಣಕೆ ನೀ ಸ್ವಾಮಿಯೆಂದು
ಕ್ಷಣಕ್ಷಣಕೆ ನಿನ್ನ ಭೃತ್ಯನೆಂದು
ಎಣೆಸುತ್ತ ಎನಗಿಂದ ಗುಣಾಧಿಕರ ಹಿಡಿದು
ಫಣಿ ರುದ್ರ ಅಜ ಸಿರಿ ಪರಿಯಂತ ದಿನದಿನದಿ
ಅನುವರಿತು ಕೊಂಡಾಡಿ ಗುಣ ಉಪಾಸನಿಯನ್ನು
ಎನಗೊಂದು ಇರಲಯ್ಯ ಮುನಿಗಳ ಮನ ಪ್ರಿಯ್ಯಾ
ಇನಿತು ಸುಖವೆ ಸಾಕು ಇನ್ನೊಬ್ಬರಿಗೆ ಅಂಜೆ
ಎನಗೊಂದು ಸುಖವಿಲ್ಲ ನಿನ್ನ ನೋಡೋದಕ್ಕಿಂತ
ಗುಣಪೂರ್ಣ ಚಲುವ ಗೋಪಾಲವಿಠ್ಠಲರೇಯ 
ನಿನಗೆ ಎನಗೆ ಲೆಂಕೆ ಎನಗೊಬ್ಬರಿನ್ನಿಲ್ಲ ॥ 7 ॥

 ಜತೆ 

ನಂಬಲಿ ನಾನಿನ್ನು ಎಷ್ಟರ ಮನುಜ ನೀ 
ನಂಬಿಸಲು ನಂಬಿದೆ ಗೋಪಾಲವಿಠ್ಠಲ ॥
********