ಅಂದಿಗಲ್ಲದೆ ಮನದ ಪರಿತಾಪವಡಗದೊ ಮು-
ಕುಂದ ಮಾಧವ ಮುರಾರೆ ಶೌರೇ ||ಪ||
ಎಂದಿಗೆ ನಿನ್ನ ಭಕ್ತರ ಸಂಗ ಸೌಖ್ಯಗಳೊ
ಎಂದಿಗಭಯವ ಪಡೆವೆನೊ ಕೃಷ್ಣ ||ಅ||
ಎಂದಿಗೀ ಜನನ ಮರಣಾದಿಗಳು ಪರಿಹರವು
ಎಂದಿಗೆ ಏಕಾಂತ ಭಕ್ತಿಯೋ ಕೃಷ್ಣ
ಎಂದಿಗೀ ಮಾನಾಪಮಾನ ಸುಖ ದುಃಖ
ನಿಂದೆ ವಂದನೆಗಳಲಿ ಸಮತೆಯೊ ಕೃಷ್ಣ
ಎಂದಿಗೆ ಈ ಹೀನಜನ ಸಂಗ ಪರಿಹರವೊ
ಎಂದಿಗೆ ಸುಜ್ಞಾನ ಪಡೆವೆನೋ ಕೃಷ್ಣ
ಎಂದಿಗೆನ್ನದು ತನ್ನದೆಂಬ ದುರ್ಮೋಹ
ವೃಂದಗಳ ಕಡೆಗಣಿಪೆನೋ ಕೃಷ್ಣ ||
ಎಂದಿಗೆ ಈ ಕರ್ಮ ಕಾನನವ ತರಿಪುದೊ
ಎಂದಿಗಪರೋಕ್ಷ ಸುಖವೋ ಕೃಷ್ಣ
ಎಂದಿಗೆ ಶಮದಮಗಳನ್ನು ನಾ ಪಡೆವುದೋ
ಎಂದಿಗಾಸೆ ನಿರಾಸೆಯೋ ಕೃಷ್ಣ
ಎಂದಿಗೀ ಕಾಮಸಂಕಲ್ಪಾದಿ ದೋಷಗಳ
ದ್ವಂದ್ವಗಳ ಕಡೆಗಣಿಪೆನೋ ಕೃಷ್ಣ
ಎಂದಿಗೀ ಕಾಯ ಕರುಣಾದಿಗಳು ನಾನಲ್ಲ-
ವೆಂದೆಂಬ ನಿಜದ ನೆಲೆಯೊ ಕೃಷ್ಣ ||
ದುರಿತಕೋಟಿಗಳನಳವಡಿಸಿಪ್ಪ ಸಂಸಾರ
ಸೆರೆಮನೆಯ ಕಳೆವುದೆಂದೋ ಕೃಷ್ಣ
ಕರಣಗಳ ಕಾದಾಟವನು ಬಿಡಿಸುವಭ್ಯಾಸವನು
ನಾನು ಪಡೆವುದೆಂದೋ ಕೃಷ್ಣ
ತರತರದ ತಾಪತ್ರಯಗಳನ್ನು ನೀಗಿಸಿ
ಸ್ಥಿರ ಚಿತ್ತ ಪಡೆವುದೆಂದೋ ಕೃಷ್ಣ
ಸಿರಿ ಪುರಂದರ ವಿಠಲರಾಯ ನಿನ್ನಯ ದಿವ್ಯ-
ಚರಣದೊಲುಮೆಯು ಎಂದಿಗೋ ಕೃಷ್ಣ ||
***
ರಾಗ ಮುಖಾರಿ ಅಟ ತಾಳ (raga tala may differ in audio)
pallavi
andigallade manada paritApavaDagado mukunda mAdhava murAre shaurE
anupallavi
endige ninna bhaktara sanga saukhyagaLo endhiga bhayava paDevano krSNa
caraNam 1
endagI janana maraNADigaLu pariharavu endige EkAnta bhaktiyO krSNa
endigI mAnApamAna sukha dukkha ninde vandanegaLali samateyoO krSNa
endige I hInajana sanga pariharavo endige sajnAna paDevenO krSNa
endigennadu tannademba durmOha vrndagaLa kaDegaNipEnO krSNa
caraNam 2
endige I karma kAnanava tarivudo endigaparOkSa sukhavO krSNa
endige shama damagaLannu nA paDevudO endigAse nirAseyO krSNa
endigI kAma sankalpAdi dOSagaLa dvandavagaLa kaDe gaNipenO krSNa
endigI kAya karuNADigaLu nAnalla vendemba nijada neleyo krSNa
caraNam 3
durita kOTigaLanaLavaDisippa samsAra sere maneya kaLevudendO krSNa
karaNagaLa kAdATavanu biDisuvabhyAsavanu nAnu paDevudendO krSNa
tara tarada tApatrayagaLannu nIgisi sthira citta paDevudendO krSNa
siri purandara viTTalarAya ninnayya divya caraNadolumeyu endigO krSNa
***