ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ಈ ಸ್ಥೂಲ ದೇಹವು ಅನಿತ್ಯ, ಅಸ್ಥಿರವೆಂದು ನಿಶ್ಚಯವಾಗಿ ತಿಳಿದು , ಅನೇಕ ಭಾಗವತ ಧರ್ಮಗಳನ್ನಾಚರಿಸಿ , ಈ ಕ್ಷೇತ್ರ ಉಳ್ಳಾಗಲೇ ಗುರುಕರುಣ ಸಂಪಾದಿಸಿ ಸಾಧನೆ ಮಾಡುವದು.)
ರಾಗ ಕೇದಾರಗೌಳ
ಧ್ರುವತಾಳ
ಚಿಂತೆ ಯಾತಕ್ಕೆ ಜನನ ಅಂತ್ಯ ಕಾಲವು ಎರಡು
ಎಂಥವನಿಗೆ ತಪ್ಪದಂತಿಪ್ಪದೊ
ಕಾಂತಾರ ಗಿರಿ ವನ ಮುಂತಾದ ಲೋಕಗಳು
ನಿಂತಲ್ಲಿ ನಿಲ್ಲದಲೆ ತಿರುಗಿದರು
ಪಿಂತಟ್ಟಿ ಮೃತ್ಯು ಬಾರದಂತೆ ಇರದು ಕೇಳು
ಅಂತರವಿಲ್ಲ ಸಿದ್ಧಾಂತವೆನ್ನು
ಅಂತರ ಶುದ್ದಿಯಾಗೇಕಾಂತದಲ್ಲಿ ಬಲು
ಶಾಂತನಾಗಿ ನಿಶ್ಚಿಂತೆಯಲ್ಲಿ
ಸಂತಾಪ ತೊರೆದು ಆದ್ಯಂತ ಜ್ಞಾನದಲ್ಲಿ
ಅಂತರಂಗದಿ ಶ್ರೀಕಾಂತನ್ನ ಪಾದಾ -
ಕ್ರಾಂತನಾಗಿ ಹೃದಯ ಗ್ರಂಥಿಯ ಪರಿಹರಿಸು
ಸಂತತ ಸುತಂತು ವಿಜಯವಿಟ್ಠಲನ್ನ
ಅಂತೆ ಕಾಲಕ್ಕೆ ನೆನವಂತೆ ಸಾಧನ ಬಯಸೊ ॥ 1 ॥
ಮಟ್ಟತಾಳ
ಶರದಿ ಮೇರೆದಪ್ಪಿ ಬರಲು ತೀವರದಿಂದ
ಭರದಿ ಮಂದಿರದ ಕದವನ್ನು
ಇರುಹು ಸಂದಿಸದಂತೆ ಸರಿದರೆ ಸದನ ನಿಂ -
ದಿರಬಲ್ಲದೆ ಮರುಳೆ ಹರಿಯ ನಿರೂಪವನ್ನು
ಧರಿಸಿ ಕಾಲಮೃತ್ಯು ಅರಸಿ ಕೊಲ್ಲುತ ಬರಲು
ಸುರರಾದ್ಯರು ವಹಿಸಿ ಅರಲವ ಉಳಿಸುವರೆ
ಬರಿದೆ ಬರಿದೆ ನೆಚ್ಚಿ ಮರಿಯದಿರೊ ಹರಿಯ
ಸ್ಮರಣೆಯನು ನಿನ್ನ ಹರಣ ಉಳ್ಳನಕ
ಶಾರ್ವರಿಕರ ನಾಮಾ ವಿಜಯವಿಟ್ಠಲನ್ನ
ಕರಣ ಶುದ್ದಿಯಲ್ಲಿ ಪರಮಾದರನಾಗೊ ॥ 2 ॥
ತ್ರಿವಿಡಿತಾಳ
ಮನಸು ನಾಲ್ಕು ಪರಿ ಒಂದು ಘಳಿಗಿಯೊಳಗೆ
ನೆನಸೂವದೊಂದಾಹಂಕಾರ ನಿಶ್ಚಯವೊ ಸಂಶಯ
ಎನಿಸುವದಿದರಿಂದ ಘನ ಶೋಕವೆ ಬಂದು
ಮನ ಶುಚಿಯಾಗದೆ ಕೆಡುತಿಪ್ಪದು
ಮನೆ ಸತಿ ಸುತ ಬಂಧು ಬಳಗ ನಾನಾದ್ರವ್ಯ
ಎಣಿಸದಿರೂ ನಿನಗೆಲ್ಲಾಧೀನವೆಂದು
ತೃಣ ಸರಿಯಾಗಿ ಕಾಣುವುದು ನೆರೆನಂಬದೆ
ಶಣಿಸು ಸಂಸಾರದ ಮರೆ ಮೋಸವೊ
ಘಣಿಶಾಯಿ ಮಹಾಗರ್ತ ವಿಜಯವಿಟ್ಠಲರೇಯನ
ನೆನಿಸು ನಿಶ್ಚಯದಿಂದ ಮನುಷ್ಯೋತ್ತಮನಾಗಿ ॥ 3 ॥
ಅಟ್ಟತಾಳ
ಇಡದಿರು ಪದಾರ್ಥ ಇಂದು ನಾಳಿಗೆ ಎಂದು
ಬಡದಿರು ದೈನ್ಯವ ಒಬ್ಬರಲ್ಲಿಗೆ ಪೋಗಿ
ಬಿಡದಿರು ಶುದ್ದವೃತ್ತಿಯ ವ್ಯಾಪಾರವ
ಪಿಡಿದಿರು ವಾಗೇಂದ್ರಿಯ ನಿಗ್ರಹವನು ಮಾಡಿ
ನುಡಿದಿರು ಹೆಜ್ಜಿ ಹೆಜ್ಜಿಗೆ ಭೇದವೆಂದು
ಹಿಡಿಯದಿರು ಒಕ್ಕುಡುತಿಗೆ ಹೆಚ್ಚಾಗಿ
ಪಿಡಿಯದಿರು ದ್ವೇಷಿಗಳ ಮನೆಯ ಧಾನ್ಯ
ಒಡಿಯ ಕತ್ಥಿನೆನಾಮ ವಿಜಯವಿಟ್ಠಲ ನಿಂ -
ದೆಡೆಯಲ್ಲಿ ಮರಿಯದೆ ನುಡಿ ಶುದ್ದ ಭಕುತಿಲಿ ॥ 4 ॥
ಆದಿತಾಳ
ಜಿಹ್ವೆ ಗುಹ್ಯೇಂದ್ರಿಯ ಉಪಸಂಹಾರವನ್ನು ಮಾಡುತ್ತ
ಗಂಹ್ವರ ಭಕುತಿಯಲ್ಲಿ ಸಿಂಹ ಲಂಘಿಣಿಯಂತೆ
ಜಾನ್ಹವಿ ಮಿಕ್ಕಾದ ನದಿ ಜಿಹ್ವಾಗ್ರದಿ ಕ್ಷೇತ್ರಕೆ
ತ್ವಂಹರಿದು ಪೋಗಿ ಪಾಪ ಸಂಹಾರವ ಗೈಸುತಲಿ
ಸಿಂಹ ನಾಮ ಪರದೈವ ವಿಜಯವಿಟ್ಠಲನ್ನ
ಜಿಹ್ವಾಗ್ರದಲ್ಲಿ ನೆನೆದು ಬಿಂಹ್ವಾ ಮಧ್ಯದಲ್ಲಿ ನಿಲಿಸೊ ॥ 5 ॥
ಜತೆ
ಕ್ಷೇತ್ರವುಳ್ಳಾಗ ಸಂಪಾದಿಸಿ ಗುರು ಕರುಣ
ಶತ್ರುತಾಪ ವಿಜಯವಿಟ್ಠಲನ್ನ ಬಲಗೊಳ್ಳೊ ॥
****