ಶ್ರೀ ವೇಣುಗೋಪಾಲದಾಸಾರ್ಯ ವಿರಚಿತ ವಾದಿರಾಜರ ಮೇಲಿನ ಕೃತಿ
(ಪ್ರಸ್ತುತ ರಾಜರ ಮೇಲಿನ ಕೃತಿ ವ್ಯಾಸರಾಜರಿಗೂ - ವಾದಿರಾಜರಿಗೂ ಇದ್ದ ಸಂಬಂಧವನ್ನು ಸ್ಪಷ್ಟವಾಗಿ ದಾಖಲಿಸುತ್ತದೆ.)
ರಾಗ : ಹಿಂದೋಳ ತಾಳ : ತಿಶ್ರನಡೆ
ಸಂತೈಸು ತವದಾಸನೆಂದನ್ನನೂ ॥ಪ॥
ಸ್ವಾಂತದಲಿ ನೆಲಸಿ ಏಕಾಂತ ಭಕ್ತೋತ್ತಮನೆ ॥ಅ.ಪ॥
ವಾಗೀಶ ಮುನಿಕರಾಂಬುಜದಿಂದ ಸಂಭವಿಸಿ
ಆಗಮೋಕ್ತಾರ್ಥಗಳ ಶಿಷ್ಯರಾದ
ಭಾಗವತ ಜನರಿಗುಲ್ಹಾಸದಲಿ ಬಿಡದೆ
ಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು ಸುರತರುವೇ ॥೧॥
ಮೋದ ತೀರ್ಥಾರ್ಯರ ಸುವಂಶಾಂಬುನಿಧಿ ಚಂದ್ರ
ಸಾಧಿಸುವೆ ದುಃಶಾಸ್ತ್ರಗಳನೆ ಮುರಿದ್ದೂ
ವಾದದಿಂದಲಿ ಸಕಲ ಮೇದಿನಿಯೊಳಿಪ್ಪ ದು-
ರ್ವಾದಿಗಳ ಭಂಗಿಸಿದ ಮಾಧವನ ಪ್ರಿಯ ಪಾಹಿ ॥೩॥
ಕಲಿಕೃತಾಚರಣೆಗಳು ಬಲಿಯಲ್ಹರಿ ಆಜ್ಞದಿಂ
ದಿಳಿಯೊಳವತರಿಸಿ ಸಜ್ಜನರಿಗೆಲ್ಲಾ
ತಿಳುಹಿ ಪರತತ್ವವನು ಶಾಸ್ತ್ರಮುಖದಿಂದ ಯತಿ
ಕುಲತಿಲಕ ನಂಬಿದವರಿಗೆ ನಿತ್ಯ ಸುರಧೇನು ॥೩॥
ಪಾದಚಾರಿಗಳಾಗಿ ತೀರ್ಥಯಾತ್ರೆಗಳ ಸ-
ಮೋದದಲಿ ಚರಿಸುತ್ತ ಚಮತ್ಕೃತಿಯಲೀ
ಸಾಧು ಸಮ್ಮತವಾದ ತೀರ್ಥಪ್ರಬಂಧವನು
ಆದರದಿ ರಚಿಸಿದ ಮಹಾ ದಯಾಂಬುಧಿಯೆ ॥೪॥
ಕ್ಷೋಭಕಾಲದಲಿ ಸಂಚರಿಸುತಿರಲು ಅ-
ಹೋಬಲದಿ ನೈವೇದ್ಯ ಕಲಹದಿಂದ
ಕ್ಷೋಭಿಗರ ಮಿಶ್ರಿತಾನ್ನವನುಂಡು ಕರಗಿಸಿದೆ ।ಭಾವಿ
ಶ್ರೀಭಾರತಿರಮಣನಂತೆ ಹರಿಯ ಕರುಣದಲಿ ॥೫॥
ಚಂದ್ರಿಕಾಚಾರ್ಯರಲಿ ಶಿಷ್ಯರಿಂದಲಿ ಚರಿಸಿ ಆ -
ನಂದದಲಿ ವ್ಯಾಸಪ್ರತೀಕವನ್ನು
ತಂದು ನಿರ್ಭಯದಿ ಸರ್ವತ್ರದಲಿಮೆರೆದೆ ಯೋ -
ಗೀಂದ್ರ ದಂಡಕಾಷಾಯ ಧರಿಸಿದ ಗುರುವೆ ॥೬॥
ಅಂಕದಲ್ಲಿಪ್ಪ ಬಾಲಕ ಬರುತಲೆ ಕಂಡು
ಶಂಖಚಾಕ್ರಾಂಕಿತನು ಈತನೆಂದು
ಶಂಕಿಸದೆ ಎನಗೆ ಪ್ರಾಗ್ಜನಮದಲಿ ಪೇಳ್ದೆ ಅಕ-
ಳಂಕ ಸನ್ಮಹಿಮ ಹಯಮುಖನ ದಾಸಾಗ್ರಣಿಯೇ ॥೭॥
ಮಾರಪಿತ ನೀರಜಾಸನ ತೀವ್ರಗಮನ ಪ-
ದ್ಮಾರಿ ಮೌಳಿಗಳಿಂದ ಸಹಿತರಾಗಿ
ಸಾರಶ್ವೇತದೊಳಿಪ್ಪ ತೆರನಂತೆ
ಧೀರವೃಂದಾವನದಿ ತೋರುವೆ ನಿರಂತರದಿ ॥೮॥
ಸನ್ಮಹಿಮ ವೇಣುಗೋಪಾಲವಿಟ್ಠಲ ಯದುವ-
ರೇಣ್ಯನ ಕೃಪಾಪಾತ್ರನೆಂದೆನಿಸುವ
ಘನ್ನಋಜುಗಣದೊಳಗೆ ಮಾನ್ಯನಾಗಿಹ ಸುಪ್ರ -
ಸನ್ನ ದ್ವಿಜಕುಲರನ್ನ ನಂಬಿದೆನೋ ನಿನ್ನ ॥೯॥
*******