Audio by Vidwan Sumukh Moudgalya
ಶ್ರೀ ಪ್ರಸನ್ನವೆಂಕಟದಾಸರ ನವ ವಿಧ ಭಕ್ತಿ ಕೀರ್ತನೆಗಳು
೮ . " ಸಖ್ಯ ಭಕ್ತಿ
ರಾಗ : ಬಿಲಹರಿ ಖಂಡಛಾಪು
ಸಖ್ಯವಿರಬೇಕು ಹರಿಭಕ್ತಿ ಜನಕೆ
ಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ॥ಪ॥
ಅನಾದ್ಯನಂತಕಾಲಕ್ಕು ಸಾಯುಜ್ಯಸಖ
ಅನಂತಜೀವರಿಗೆ ಬಿಂಬರೂಪ
ತಾನೆ ಜೀವರಿಗನ್ನ ಪಾನಿತ್ತು ಪಾಲಿಸುವ
ಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ ॥೧॥
ಶ್ರೇಯಸವನೀವ ಪ್ರತಿಶ್ರೇಯಸದ ಬಯಕಿಲ್ಲ ನಿಃ-
ಶ್ರೇಯಸವನೀವ ಔದಾರ್ಯಗುಣದಿ
ಮಾಯಾದಾರಿದ್ರ್ಯವಿದ್ಯತಮೋಭಾನು
ವಾಯುಸಖ ಜ್ಞಾನಿಜನ ಪ್ರಿಯಸಖನೊಳು ॥೨॥
ಕ್ಷುತ್ತೃಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್-
ಶತ್ರುಸಂಹಾರಿ ಪರಾತ್ಪರಸಖ
ವೇತ್ತೃಜನಧೇನು ವೇದೋಪನಿಷದ್ವೇದ್ಯ
ಮಿತ್ರೇಂದು ಕೋಟಿ ಭ್ರಾಜಿತಗಾತ್ರಹರಿಯ ॥೩॥
ಕರುಣಾರ್ಣವನು ಶರಣಸುರವೃಕ್ಷ ಸುಖವಾರ್ಧಿ
ದುರಿತಭವದೂರ ನಿರ್ದೋಷಗುಣದಿ
ಸುರಮುನಿನಿಕರಸೇವ್ಯ ಶಾಶ್ವದೇಕೋ ಭವ್ಯ
ವರ ಸಹಸ್ರಾನಂತ ವಿಗ್ರಗನೊಳು ॥೪॥
ಪಾರ್ಥಸಖ ಗೋಪವಧುಗೋತ್ರ ಸ್ತ್ರೀಪುತ್ರ
ಮಿತ್ರದೇಹೇಂದ್ರಿಯಾತ್ಪ್ರಿಯ ಕೃಷ್ಣ
ಮಿತ್ರವರನೊಬ್ಬ ಸರ್ವತ್ರ ನಾರಾಯಣಾ-
ನ್ಯತ್ರ ಸ್ನೇಹವತ್ಯಜಿಸಿ ಶ್ರೀಪ್ರಸನ್ವೆಂಕಟಣ ॥೫॥
********