Showing posts with label ಚಿನುಮಯ ಮೂರುತಿ gopala vittala suladi ಪ್ರಮೇಯ ಭಾಗ ಸುಳಾದಿ CHINUMAYA MOORUTI PRAMEYA BHAAGA SULADI. Show all posts
Showing posts with label ಚಿನುಮಯ ಮೂರುತಿ gopala vittala suladi ಪ್ರಮೇಯ ಭಾಗ ಸುಳಾದಿ CHINUMAYA MOORUTI PRAMEYA BHAAGA SULADI. Show all posts

Sunday 8 December 2019

ಚಿನುಮಯ ಮೂರುತಿ gopala vittala suladi ಪ್ರಮೇಯ ಭಾಗ ಸುಳಾದಿ CHINUMAYA MOORUTI PRAMEYA BHAAGA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಪ್ರಮೇಯ ಭಾಗ ಸುಳಾದಿ 

ರಾಗ ದೇಶ್  ಧ್ರುವತಾಳ 

ಚಿನುಮಯ ಮೂರುತಿ ಚಿತ್ರ ವಿಚಿತ್ರನೆ
ಘನಮಹಿಮ ಗಂಭೀರ ಕೀರ್ತಿ ದೋಷ ದೂರ
ಅನಿಮಿತ್ತ ಬಂಧು ದ್ರೌಪದಿ ಮಾನದೊಡಿಯಾ
ಗುಣಗಣ ಭರಿತ ಸೃಷ್ಟ್ಯಾದ್ಯಷ್ಟಕರ್ತನೆ
ಸನಕಾದಿಗಳೊಡೆಯ ಜ್ಞಾನಾನಂದ ಪೂರ್ಣ
ದಿನಕರ ಶತತೇಜ ದೀನ ಜನರ ಪಾಲ
ದನುಜಮರ್ದನರಂಗ ಧರ್ಮಜನುತ ಪಾಲ
ತನುಮನದೊಡೆಯ ಏ ತಾತ ಭಕ್ತವತ್ಸಲ
ಅಣೋರಣೀಯಾನ್ ಎಂಬೊ ಶ್ರುತಿಪಾದ್ಯ ಅಪ್ರಾಕೃತ
ಜನನ ಮರಣ ರಹಿತ ಜಾನಕೀ ರಮಣನೆ
ಕೊನೆಗಾಣರು ನಿನ್ನ ಗುಣ ಎಣಿಸಿ ಅಜಭವರು
ಇನಿತು ವರ್ಣಿಸೆ ನಿನ್ನ ಎನಗಳವಲ್ಲವು
ನಿನಗೆ ನೀ ಕರುಣಿಸಿ ನಿನ್ನ ಭಕ್ತರನ್ನ
ಘನತೆ ಮಾಡುವಿ ಎಣೆಯಾರು ನಿನಗಿನ್ನು
ದಿನಕರ ಶಶಿಗಳು ನಿನ್ನ ಆಜ್ಞೆಯಿಂದ 
ದಿನವ ಚರಿಸುತಲಿ ನಿನ್ನ ಸೇವಿಸುವರೋ
ನಿನಗೆ ಸಮ ವಸ್ತು ಇಲ್ಲ ಗೋಪಾಲವಿಠ್ಠಲ 
ನಿನಗೊಬ್ಬರು ಸಮರಿಲ್ಲ ಸರ್ವೋತ್ತಮ ॥ 1 ॥

 ಮಠ್ಯತಾಳ 

ಭಕ್ತವತ್ಸಲ ನೀನೆಂಬೊವದಕ್ಕಿನ್ನು
ಭಕ್ತರು ಕರಿಯೆ ಬಂದೊದಗೋದೆ ಸತ್ಯ
ಸಕಲ ದೋಷದೂರ ನೀನೆಂಬುವದಕ್ಕಿನ್ನು
ಸಕಲ ದೋಷಿ ಅಜಮಿಳನ ಕಾಯ್ದದೆ ಸತ್ಯ 
ಸಕಲ ಜ್ಞಾನಭರಿತ ನೀನೆಂಬುವದಕ್ಕೆ
ಭಕ್ತ ವಾಲ್ಮೀಕನ್ನ ಉಕುತಿನಿತ್ತದ್ದೆ ಸತ್ಯ
ಸಕಲ ಸಮರ್ಥನು ನೀನೆಂಬುವದಕ್ಕೆ
ಭಕ್ತ ಕುಬ್ಜಿಯನ್ನೆ ಚಕಿತ ಮಾಡಿದ್ದೆ ಸತ್ಯ
ಸಕಲ ಸುಖಪೂರ್ಣ ನೀನೆಂಬುವದಕ್ಕೆ
ಸಕಲ ಪದಾರ್ಥದಿ ಸಾರ ತೋರೋದೆ ಸತ್ಯ
ಲಕುಮಿರಮಣ ನಮ್ಮ ಗೋಪಾಲವಿಠ್ಠಲ 
ಭಕ್ತರಿಚ್ಛೆಯಗಾರಾ ಭಕ್ತರ ಮನದೊಡಿಯಾ ॥ 2 ॥

 ತ್ರಿಪುಟತಾಳ 

ಇನ್ನಾವ ಜನ್ಮದ ಎನ್ನ ಸಾಧನಿಯೊ
ಇನ್ನಾವ ಜನ್ಮದ ಸಜ್ಜನ ಸಂಗತಿಯೊ
ಇನ್ನಾವ ಜನ್ಮದ ಶ್ರವಣ ಮನನದ ಫಲವೊ
ಇನ್ನಾವ ಜನುಮದ ದಾನ ಧರ್ಮದ ಫಲವೊ
ಇನ್ನು ನಿನ್ನನು ಏನು ಅರಿಯದಲಿದ್ದೆನ್ನ
ಘನ್ನ ಮಾಡಿನ್ನ ಅರಿದು ನಿನ್ನ ಪಾದಸುಖ
ವನ್ನು ಸೇವಿಸುವ ಚನ್ನದಾಸರ ಮನೆ 
ಕುನ್ನಿ ಎನಿಸಿ ಎನ್ನ ನಿನ್ನ ಅಂಕಿತವಿತ್ತೆ 
ನಿನ್ನ ಕರುಣ ರಸಕ್ಕಿನ್ನು ಸರಿ ಉಂಟೆ
ಎನ್ನಪ್ಪ ಎನ್ನಯ್ಯ ಎನ್ನ ಸಾಕುವ ದೊರಿಯೆ
ನಿನ್ನ ಪಾದದ ಮೇಲೆ ಎನ್ನ ಶರೀರ
ವನ್ನು ನಿವಾಳಿಸೆ ಇನ್ನು ಬಿಡುವೆನಯ್ಯ 
ನಿನ್ನಂತೆ ಸಾಕುವರಿನ್ನೊಬ್ಬರಿಲ್ಲವೊ
ನಿನ್ನ ತೊತ್ತಿಗೆ ತೊತ್ತು ತೋಂಡ ನಾನಾಗುವೆ
ಇನ್ನು ಅಜನು ನಿನ್ನ ನಾಮದ ಬಲದ ಮೇಲೆ 
ನಿನ್ನ ತೊತ್ತುಕೊಂಬಿ ಅನ್ಯಾರನಲ್ಲಾಳು 
ಅನ್ನ ಭಕ್ಷವುಳ್ಳ ಮನೆಯಿಂದ ಯಬ್ಬಿಟ್ಟ
ಕಣ್ಣಿಯ ಕಟ್ಹೊರ ಮನೆಯ ಹೊಗಿಸಬ್ಯಾಡ
ನಿನ್ನ ಪಾದವ ನಂಬೆ ಅನ್ಯರಿಗಿತ್ತರೆ
ನಿನ್ನದೆ ಬಿರಿದಿನ್ನು ಎನ್ನದೇನಾಯಿತು
ಪುಣ್ಯೋತ್ತಮ ನಮ್ಮ ಗೋಪಾಲವಿಠ್ಠಲರೇಯ 
ಬೆನ್ನು ಬಿದ್ದೆನೊ ಬಲು ಬಣ್ಣಗೆಟ್ಟಿ ತೊತ್ತು ॥ 3 ॥

 ಅಟ್ಟತಾಳ 

ಭೂತ ಹತ್ತಿದವಾ ಯಾತ್ಯಾತ ರೊಳಗಿನ್ನು
ನೀತ ವರಿಯದಲೆ ತಾ ತಿರುಗಿದಂತೆ
ನಾತ ಹತ್ತಿದ ಶ್ವಾನ ಜೋತು ಮುಖವು ಇರೆ
ಪಥ ಬೀಡೆನ್ನ ಮಾತು ಕೇಳುವದೆ
ವಾತಜಾತನ ಪ್ರೀತಿ ನಿನ್ನಲ್ಲಿ ಶಾಶ್ವಿತ -
ವಾದವ ನಿನ್ನ ಈ ತೆರದಿ ಬಿಡುವನೆ 
ಕೌತುಕವಲ್ಲ ಮನೋವಾಕ್ಕಾಯದಿ ಮಾಡಿಪ್ಪ
ದಾತರದಾತ ಎನ್ನಾತುಮ ಮೂರುತಿ
ಈ ತೆರದಿ ನೀ ಪ್ರೇರಕನಾಗಿ ಅನ್ಯಥ
ಕ್ಕೆರಗೀಸುವುದು ನೀತವಲ್ಲವೊ ದೇವ 
ಬಾತಿಗೆ ಬಾರದಿನ್ಯಾತಕ್ಕೆ ಜನ್ಮವು
ತಾ ತೆಗೆದಕೋದನ್ನ ಈ ದೇಹ ನಿನ್ನಲ್ಲಿ
ಪ್ರೀತಿ ಒಂದಿದ್ದರಾಯಿತೆ ಸಾಕು ಶಾ-
ಶ್ವಿತ ದೈವವೆ ಗೋಪಾಲವಿಠ್ಠಲ 
ಸೋತೆನೊ ವಿಷಯದ ಯಾತನೆ ಬಿಡಿಸೊ ॥ 4 ॥

 ಆದಿತಾಳ 

ನಿನ್ನಲ್ಲಿ ಭಕುತಿಯ ಇನ್ನು ನಿಯ್ಯದಲೇವೆ 
ಅನಂತ ಭಾಗ್ಯವು ಇತ್ತರೆ ನಾನೊಲ್ಲೆನೊ
ನಿನ್ನಲ್ಲಿ ಭಕುತಿಯ ಚನ್ನಾಗಿ ಇತ್ತಿನ್ನು
ಅನ್ಯರಿಲ್ಲದ ಅರಣ್ಯದೊಳಿಡು ಲೇಸು
ಮನ್ನಣೆ ಮಾಡಿಸು ನಿನ್ನ ಬಲ್ಲವರಿಂದ
ಮನ್ನಣೆ ಆನೊಲ್ಲೆ ನಿನ್ನರಿಯದವರಿಂದ
ಹೊನ್ನು ಹೆಣ್ಣು ಮಣ್ಣು ಸಮವು ಮಾಡಿದಂಥ
ಪುಣ್ಯಾತ್ಮರ ಮನೆಯ ಕುನ್ನಿ ಎಂದೆನಿಸು
ಪನ್ನಗಶಯನ ಗೋಪಾಲವಿಠ್ಠಲರೇಯ 
ನಿನ್ನ ನಾ ಬಿಡೆನಯ್ಯ ಅನಂತ ಕಾಲದಲ್ಲಿ ॥ 5 ॥

 ಜತೆ 

ಅನಂತ ಜನ್ಮಕ್ಕೆ ಅನಂತ ಮಾತಿಗೂ
ಅನಂತ ನೀನೆ ಗತಿ ಗೋಪಾಲವಿಠ್ಠಲ ॥
*****