ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ ಪ
ಬಾರೋ ಸದ್ಗುರುವರ ಸಾರಿದ ಸುಜನರ
ಘೋರ ದುರಿತವ ತರಿದು ಕರುಣದಿ
ಸಾರ ಸೌಖ್ಯವಗರಿದು ಪೊರಿಯಲು ಅ.ಪ
ಸೂರಿಜನಾಲಂಕೃತ ಸುರಪುರದಿ ವಿಠ್ಠ
ಲಾರ್ಯರಿಂದಲಿ ಪೂಜಿತ ಯದುಗಿರಿಯ
ಕ್ಷೇತ್ರಾಗಾರನೆಂದೆನಿಸಿ ನಿರುತ ಭಜಕರನು ಪೊರೆಯುತ
ವಾರವಾರಕೆ ಭೂಮಿಸುರ ಪರಿವಾರದಿಂ
ಸೇವೆಯನುಕೊಳ್ಳುತ
ಹಾರ ಪದಕಗಳಿಂದ ಬಲುಸಿಂಗಾರ
ತುರಗವನೇರಿ ಮೆರೆಯುತ1
ಭಕ್ತ್ಯಾದಿ ಫಲವೀವಂಥ ಗುರುವರನೆ ನಿಮ್ಮಯ
ಸ್ತೋತ್ರ ಪಠಣವ ಮಾಡುತ್ತ ಅನವರತ ಭಜ-
ನಾಸಕ್ತ ಜನರ ಕಾಮಿತ ನಾ ಕೊಡುವೆನೆನುತ
ಮತ್ತೆ ಎಡಬಲದಲ್ಲಿ ದ್ವಿಜಕೃತ ಛತ್ರಚಾಮರ
ವ್ಯಜನ ಸೇವಾ ನೃತ್ಯಗಾಯನ ವೈಭವದಿ ವರ
ಹಸ್ತಿವಾಹನ ವೇರಿ ಮೆರೆಯುತ 2
ಇಳಿಸುರರೊಳು ಪ್ರಖ್ಯಾತ ಲಿಂಗೇರಿ ಭೀಮಾ
ಹೊಳಿಯ ಸ್ಥಾನಕೆ ಬಂದಂಥ ಯದುಗಿರಿಯ ದ್ವಿಜವರ
ಗೊಲಿದರ್ಚನಿಯ ಗೊಂಬಂಥ ಶರ್ವಾದಿವಿನುತ
ಚಲುವ ಪ್ರಾಣನಾಥನ ಜಲಜಯುಗ ಸನ್ನಿಧಿ
ಯೊಳನುದಿನ ಪೊಳೆವ ವೃಂದಾವನದಿ ಭಕುತರಿ
ಗೊಲಿದು ಪೊರೆಯಲು ಕುಳಿತ ಯತಿವರ 3
ನಂದತೀರ್ಥರ ಸುಮತ ಸಿಂಧುವಿಗೆ ಪೂರ್ಣ
ಚಂದ್ರರೆಂದೆನಿಸಿ ದಂಥಾ ಕರ್ಮಂದಿವರ್ಯನೆ
ವಂದಿಸುವರ ದುರಿತ ಘನಮಾರುತ
ವಂದೆ ಮನದಲಿ ಬಂದು ನಿಮ್ಮಡಿ
ದ್ವಂದ್ವವನು ಶೇವಿಸುವ ಶರಣರ
ವೃಂದವನು ಪಾಲಿಸಲು ಸುಂದರಸ್ಯಂದನ-
ವೇರುತಲಿ ವಿಭವದಿ 4
ನೀರಜಾಸನ ವರಬಲದಿ ಸಮರಾರೆನುತ ಬಂ-
ಗಾರ ಕಶ್ಯಪ ಪೂರ್ವದಿ ಪ್ರಹ್ಲಾದ ರಾಜಕು
ಮಾರ ನಿನ್ನೊಳು ವೈರದಿ ಹರಿಯನ್ನು ಜವದಿ
ತೋರು ತೋರೆಂದೆನಲು ಕೋಪದಿ ಚಾರು ಕೃಷ್ಣಾ
ತೀರಕಾರ್ಪರ ನಾರಸಿಂಹನ ಸ್ತಂಭದಿಂದಲಿ
ತೋರಿಸಿದ ಗುರು ಸಾರ್ವಭೌಮನೆ 5
****