Showing posts with label ಹೆಂಡತಿ ಪ್ರಾಣ ಹಿಂಡುತಿ ದೊಡ್ಡ ಕೊಂಡ purandara vittala HENDATI PRAANA HINDUTI DODDA KONDA. Show all posts
Showing posts with label ಹೆಂಡತಿ ಪ್ರಾಣ ಹಿಂಡುತಿ ದೊಡ್ಡ ಕೊಂಡ purandara vittala HENDATI PRAANA HINDUTI DODDA KONDA. Show all posts

Saturday 6 November 2021

ಹೆಂಡತಿ ಪ್ರಾಣ ಹಿಂಡುತಿ ದೊಡ್ಡ ಕೊಂಡ purandara vittala HENDATI PRAANA HINDUTI DODDA KONDA



ಹೆಂಡತಿ, ಪ್ರಾಣ ಹಿಂಡುತಿ ||ಪ||

ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ||

ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ
ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ
ಉತ್ತಮ ಗುರುಹಿರಿಯರ ಮಾತು ಮೀರುತ್ತಿ
ಮೃತ್ಯು ದೇವತೆಯಂತೆ ಮನೆಯೊಳಗಿರುತ್ತಿ ||

ಇಲ್ಲದ್ದು ಬೇಡುತ್ತಿ ಸುಳ್ಳು ಮಾತಾಡುತ್ತಿ
ಒಳ್ಳೆ ಊಟವನುಂಡು ಕುಳಿತಿರ್ಪೆನೆಂತಿ
ಎಳ್ಳಿನಷ್ಟು ಕೆಲಸ ಮಾಡಲಾರೆನೆಂತಿ
ಎಲ್ಲೆಲ್ಲಿ ತಲೆಯೆತ್ತದ್ಹಾಂಗೆ ಮಾಡುತ್ತಿ ||

ಹಿರಿತನಕ್ಹೋಗುತ್ತಿ ಗರುವಿಕೆ ಮಾಡುತ್ತಿ
ನೆರೆಹೊರೆಯರ ಕೂಡ ಬಡಿದಾಡುತ್ತಿ
ದೊರೆ ಸಿರಿಪುರಂದರವಿಠಲನ ಸ್ಮರಿಸದೆ
ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ ||
****

pallavi

heNDadi prANa hiNDuti

anupallavi

doDDa koNDa kOtiyante kuNikuNisutta

caraNam 1

hottAre Elutti horage tirugADutti hottu hOyitu bhatya tArennutti
uttama guru hiriyara mAtu mIrutti mrtyu dEvateyande maneyoLagiruti

caraNam 2

illaddu bEDutti suLLu mAtADutti oLLe UtavanuNDu kuLitirpenetti
eLLinaSTu kelasa mADalArenenti ellelli taleyettadhAnge mADutti

caraNam 3

hiritanakhOkutti karuvike mADutti nere horeyara kUDa baDidADutti
dore siri purandara viTTalana smarisade duritakke guriyAgi nI nillutti
***


ರಾಗ ಕಾಮವರ್ಧನಿ/ಪಂತುವರಾಳಿ 
ಅಟತಾಳ (raga, taala may differ in audio)

Hendati, prana hinduti ||pa||
Dodda konda kotiyante kunikunisutti ||a||

Hottare elutti horage tirugadutti
Hottu hoyitu Batya tarennutti
Uttama guruhiriyara matu mirutti
Mrutyu devateyante maneyolagirutti ||

Illaddu bedutti sullu matadutti
Olle utavanundu kulitirpenenti
Ellinashtu kelasa madalarenenti
Ellelli taleyettad~hange madutti ||

Hiritanak~hogutti garuvike madutti
Nerehoreyara kuda badidadutti
Dore siripurandaravithalana smarisade
Duritakke guriyagi ni nillutti ||
***


ಹೆಂಡತಿ ಪ್ರಾಣ ಹಿಂಡುತಿ

ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ||

ಹೊತ್ತಾರೆ ಏಳುತ್ತೀ, ಹೊರಗೆ ತಿರುಗಾಡುತ್ತಿ.|

ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ||

ಉತ್ತಮ ಗುರುಹಿರಿಯರ ಮಾತು ಮೀರುತ್ತಿ|

ಮೃತ್ತ್ಯುದೇವತೆಯಂತೆ ಮನೆಯೊಳಗೆ ಇರುತ್ತಿ.||1||

ಇಲ್ಲದ್ದು ಬೇಡುತ್ತಿ, ಸುಳ್ಳು ಮಾತನಾಡುತ್ತಿ|

ಒಳ್ಳೆ ಊಟವನುಂಡು ಕುಳಿತಿರ್ಪೆನಂತಿ.||

ಎಳ್ಳಿನಷ್ಟು ಕೆಲಸ ಮಾಡಲಾರೆನಂತಿ|

ಎಲ್ಲೆಲ್ಲೂ ತಲೆ ಎತ್ತದಾಂಗೆ ಮಾಡುತ್ತಿ|| 2 ||


ಹಿರಿಯತನಕೆ ಹೋಗುತ್ತಿ ಗರುವಿಕೆ ಮಾಡುತ್ತಿ|

ನೆರೆಹೊರೆಯವರ ಕಲ್ಲಿಗೆ ಬಡಿದಾಡುತ್ತಿ|

ದೊರೆಸಿರಿ ಪುರುಂದರವಿಠಲನ ಸ್ಮರಿಸದೇ

ದುರಿತಕ್ಕೆ ಗುರಿಯಾಗಿ ನೀ ನೀಗುತ್ತಿ ||3||



ಓ ಮನಸೇ -


ಜ್ಞಾನಿವರೇಣ್ಯರು ಪುರುಂದರ ದಾಸರು.

ಒಂದೆಡೆ 'ಹೆಂಡತಿ ಪ್ರಾಣ ಹಿಂಡತಿ' ಎನ್ನುತ್ತಾರೆ.

ಇನ್ನೊಂದೆಡೆ 'ಹೆಂಡತಿ ಸಂತತಿ ಸಾವಿರವಾಗಲಿ'. ಎನ್ಬುತ್ತಾರೆ.

ವಿರೋಧಾಭಾಸವೆನುಸುವದಿಲ್ಲವೇ?

ಸರಿ.  ಒಗಟಿನ ದಾಸರು ಅವರು. 

ಆಳಕ್ಕೆ ಇಳಿಯಿರಿ.

ಒಳ ಅರ್ಥ ತಿಳಿಯಿರಿ. 

ಎನ್ನುತ್ತಾರೆ ದಾಸರು.

ಮಥಿತಾರ್ಥ ನೋಡುವ ಪ್ರಯತ್ನವಿದು --

ಮೇಲಿನ ಪದ್ಯದ ಮೇಲಕ್ಕೆ ತೋರುವ ಒಟ್ಟು ಅರ್ಥ

ಅವನು ಪುರುಷ. 

ಇವಳು ಕನ್ಯೆ.

ಮದುವೆಯಾದರು. ನೂತನ ದಂಪತಿ.

ಹೆಂಡತಿ ಮಾತು ಮೀರದ ಗಂಡ.

ಅದು ಬೇಕು, ಇದು ಬೇಕು. 

ನೂರೆಂಟು ಬೇಡಿಕೆ ಮಂಡನೆ ಅವಳಿಂದ.

ತಕ್ಷಣ ಪೂರೈಕೆ ಇವನಿಂದ. ನಡೆಯಿತು.

ಅತ್ತೆ, ಮಾವಂದಿರನ್ನು ಧಿಕ್ಕರಿಸಿದಳು.

ಮತ್ತೆ ಮನೆ ಬೇರೆ. ಮನ ಬೇರೆ.

ಸುಳ್ಳು ಮಾತು. ಖರೆ ಜಗಳ. 

ನೆರೆ ಹೊರೆಯವರೊಂದಿಗೆ.

ಜೀವನ ಬಂಡಿ ಎತ್ತೆತ್ತೋ ಸಾಗಿತು. ಇಂಥದ್ದರಲ್ಲಿ ಎಲ್ಲಿ ದೇವರು, ಎಲ್ಲಿ ಧರ್ಮ! ತಿಲಾಂಜಲಿ.

ಸಾಧನೆ ಶೂನ್ಯ.

ಸಾಕಾಗಿ ಹೋಯಿತು ಗಂಡನಿಗೆ.

ಲೌಕಿಕದಲ್ಲಿ ನಡೆಯುವದನ್ನು ವಿವರಿಸಿದರು ದಾಸರು. ಉದ್ದೇಶ ಆಧ್ಯಾತ್ಮ.


ಹೆಂಡತಿ ಪ್ರಾಣ ಹಿಂಡುತಿ.

ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ||

ಹೊತ್ತಾರೆ ಏಳುತ್ತೀ, ಹೊರಗೆ ತಿರುಗಾಡುತ್ತಿ.|

ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ||

ಉತ್ತಮ ಗುರುಹಿರಿಯರ ಮಾತು ಮೀರುತ್ತಿ|

ಮೃತ್ತ್ಯುದೇವತೆಯಂತೆ ಮನೆಯೊಳಗೆ ಇರುತ್ತಿ.||1||


ಏನು ಅರ್ಥ?

ಗಂಡ ಯಾರು? 

ಈ ದೇಹಧಾರಿ ಪುರುಷನೇ ಪತಿರಾಯ.

ಹೆಂಡತಿ ಯಾರು?

ಆತನ ಮನಸ್ಸೇ ಹೆಂಡತಿ.

'ಬುದ್ಧಿಃ ತು ಪ್ರಮದಾ' - ಭಾಗವತದ ಮಾತು.

ಬುದ್ಧಿಯೇ ಹೆಂಡತಿ. ಬುದ್ಧಿ ಮನಸ್ಸಿನ ಭಾಗ.

ಮನಸ್ಸೇ ಹೆಂಡತಿ.

ದಾಸರು ಹೇಳಿದ್ದೆಲ್ಲ ಮನಸ್ಸಿನ ಆಟ.

ಮನಸ್ಸು ಮರ್ಕಟದಂತೆ. ಬಹು ಚಂಚಲ.

ಟೊಂಗೆಯಿಂದ ಟೊಂಗೆಗೆ, ಗಿಡದಿಂದ ಗಿಡಕ್ಕೆ

ಹಾರುತ್ತ, ಇದ್ದಲ್ಲಿ ಇಲ್ಲದಿರುವದೇ ಮಂಗನ ಸ್ವಭಾವ. 

ಅದೇ ಮನದ ಲಕ್ಷಣವೂ ಹೌದು.

ಮನಸ್ಸನ್ನು ಅನುಸರಿಸುತ್ತಾನೆ ಮನುಷ್ಯ.

ಮನಸ್ಸು ಸಂಶಯಾತ್ಮಕ. ವಿಕಲ್ಪಾತ್ಮಕ.

ಸ್ಥಿರವಲ್ಲ. 

ಇಂದ್ರಿಯಗಳಿಗೆ ವಿಷಯಗಳ ಮೇಲೆ ಆಶೆ.

ಮನಸ್ಸಿಗೆ ಇಂದ್ರಿಯ ನಿಗ್ರಹವಿಲ್ಲ.

ಇಂದ್ರಿಯ ಬೇಡಿದ್ದು ಮನಸ್ಸು ಒಪ್ಪಿದ್ದು.

ಮನಬಂದಂತೆ ಇಂದ್ರಿಯಗಳ ಕುಣಿತ.

ಮನಸ್ಸು ವಿಷಯಗಳಿಗೆ ಬಲಿ.

ಸಾರಾಸಾರ ವಿಚಾರವಿಲ್ಲ. 

ಸ್ವೇಚ್ಛಾಚಾರದ ಮೇಲುಕೈ.

ಮನಸ್ಸಿಗೆ ಬಂದಾಗ ಏಳುವದು. ಮನಸು ಬಂದಲ್ಲಿ ತಿರುಗಾಡವದು.

ಅರ್ಥ

ಪಾರಮಾರ್ಥಿಕ ಇಲ್ಲ. ಲೌಕಿಕವೇ ಎಲ್ಲ.

ಹಾಳು ಹರಟೆ. ಕೀಳು ವಿಚಾರ. 

ದುರ್ಜನ ಸಂಗ. ನೇಮ ಭಂಗ.

ಹೊತ್ತು ಕಳೆದು ಹೋಯಿತು. 

ಮುತ್ತು ಒಡೆದು ಹೋಯಿತು. 

ಮತ್ತೆ ಬಾರದು. 

ಅದಕೆ ಭತ್ಯ ಬೇರೆ ದಂಡ.

ಧರ್ಮ, ಸದಾಚಾರಗಳಿಗೆ ಬೆಲೆಯೇ ಇಲ್ಲ.

ಇದೇ ಗುರು ಹಿರಿಯರ ಮಾತು ಮೀರುವದು.

ಇಂಥ ಲಗಾಮ ಇಲ್ಲದ ಮನಸ್ಸು ಆತನಿಗೇ ಮಾರಕ. 

ಅಂದರೆ ಮೃತ್ಯುವಾಗಿ ಅವನೊಳಗೇ ಇರುತ್ತದೆ. -1


ಇಲ್ಲದ್ದು ಬೇಡುತ್ತಿ, ಸುಳ್ಳು ಮಾತನಾಡುತ್ತಿ|

ಒಳ್ಳೆ ಊಟವನುಂಡು ಕುಳಿತಿರ್ಪೆನಂತಿ.||

ಎಳ್ಳಿನಷ್ಟು ಕೆಲಸ ಮಾಡಲಾರೆನಂತಿ|

ಎಲ್ಲೆಲ್ಲೂ ತಲೆ ಎತ್ತದಾಂಗೆ ಮಾಡುತ್ತಿ|| 2 ||


ಇದ್ದದ್ದು ಬೇಡ. ಇಲ್ಲದ್ದು ಬೇಕು.

ಸುಖ ಪಡೆಯಲು ಸುಳ್ಳು ಮಾತುಗಳು. ಸಲ್ಲದ ಕಲಹ.

ಒಳ್ಳೆ ಊಟ ಉಂಡು ಕೂಡುತ್ತಿ -

ಅರ್ಥ -

ಮನಸ್ಸಿನ ಊಟ - ಲೋಕವಾರ್ತೆ ಮತ್ತೆ

ವಿಷಯ ಸುಖಗಳ ಬಯಕೆ.

ಏನಾದರೂ, ಎಷ್ಟಾದರೂ, ಮನಸ್ಸಿಗೆ ತೃಪ್ತಿ ಎಂಬುದಿಲ್ಲ.

ಅದು ಬೆಂಕಿಗೆ  ತುಪ್ಪ ಸುರಿದಂತೆ.

ಬೆಂಕಿ ಆರುವದಿಲ್ಲ. 

ಮತ್ತಷ್ಟು ಪ್ರಜ್ವಲಿಸುತ್ತದೆ.

ಮನಸೇ, 

ಇಂದ್ರಿಯಗಳು ಬಯಸಿದಂತೆ

ಬೆನ್ನುಹತ್ತುತ್ತಿ. ವಿಷಯಸುಖಗಳಲ್ಲಿ ಮಗ್ನವಾಗಿ ಬಿಡುತ್ತಿ.

ಪರಮಾತ್ಮನ ಮಹಾತ್ಮೆ ತಿಳಿಯುವದರಲ್ಲಿ

ಎಳ್ಳಷ್ಟೂ ಮುಂದುವರಿಯುವದಿಲ್ಲ.

ಕೇವಲ ಲೋಕ ವಾರ್ತೆ.

ಪರಲೋಕ ವಾರ್ತೆ ಇನ್ನಿಲ್ಲ.

ಲೌಕಿಕದಲ್ಲಿ ಮುಳುಗಿದಿ. 

ಸಂಸಾರದಲ್ಲಿ ಬಂತು, ಹೋತು, ಗಳಲ್ಲಿ ವಿಶೇಷ ಆಸಕ್ತಿ. 

ನೋವು ದುಃಖಗಳು. 

ಮಾನ ಅಪಮಾನಗಳು. 

ತಲೆ ಎತ್ತಿ ನಡೆಯದಂತೆ ಮಾಡಿತು.

'ತದಲಂ ಬಹುಲೋಕ ವಿಚಿಂತನಯಾ' - ದ್ವಾದಶ ಸ್ತೋತ್ರ.

ಲೌಕಿಕ ಸಾಕಷ್ಟಾಯಿತು. ಬಿಡಿ. ಪಾರಲೌಕಿಕ

ಹಿಡಿ. ಪಾರಾಗುವದು ಕಲಿ. 

ಪರಮಾತ್ಮನ ಪಾದಕಮಲಗಳಲ್ಲಿ ಮನಸ್ಸಿಡು. - 2


ಹಿರಿಯತನಕೆ ಹೋಗುತ್ತಿ ಗರುವಿಕೆ ಮಾಡುತ್ತಿ|

ನೆರೆಹೊರೆಯವರ ಕಲ್ಲಿಗೆ ಬಡಿದಾಡುತ್ತಿ|

ದೊರೆಸಿರಿ ಪುರುಂದರವಿಠಲನ ಸ್ಮರಿಸದೇ

ದುರಿತಕ್ಕೆ ಗುರಿಯಾಗಿ ನೀ ನೀಗುತ್ತಿ ||3||


ಮತ್ತೆ ಮನಸ್ಸಿನಗಾಥೆ ಮುಂದುವರೆಯುತ್ತೆ.

ಬುದ್ಧಿಯ ಮಾತು ಕೇಳಲಿಲ್ಲ. 

ಹಿರಿಯತನಕೆ ಹೊರಟಿ.

ವಿವೇಕಕ್ಕೆ  ಕಿವಿಕೊಡಲಿಲ್ಲ. 

ಅಂತಃಕರಣ ಶೂನ್ಯ. 

'ನಾನೇ ಮಾಡುವವನು' ಎಂಬ ಅಹಂಕಾರ, 'ಮಾಡಿದ್ದೆಲ್ಲ ನನ್ನದು' ಎಂಬ ಮಮಕಾರಗಳ ತುಂಬಿ ತುಳುಕಾಟ.

ನೇರ ಹಾದಿ ಬಿಟ್ಟಿ. 

ಅಡ್ಡ ದಾರಿ ಪಿಡಿದಿ.

ನೆರೆ ಹೊರೆಯಲ್ಲಿ ಕೈ ಹಾಕಿದಿ. 

ಹೊರೆ ಮಾಡಿಕೊಂಡಿ. ಬಹು ಬಳಲಿದಿ.

ಸಂಸಾರ ಸಾಗರದಲಿ ಮುಳುಗಿದಿ.

ತಾರಕ ಪುರುಂದರ ವಿಠ್ಠಲನನ್ನೇ ಮರೆತಿ.


ದಾಸರು ಎಚ್ಚರಿಸುತ್ತಾರೆ.

ಇದು ಮನಸ್ಸಿನ ಒಂದು ಮುಖ. ಕೆಟ್ಟ ಮುಖ. 

ಇನ್ನೊಂದು ಮುಖ. ಒಳ್ಳೇಯ ಮುಖವನ್ನೂ

ದಾಸರು ಹೇಳುತ್ತಾರೆ.

'ಹೆಂಡತಿ ಸಂತತಿ ಸಾವಿರವಾಗಲಿ'

ಹೆಂಡತಿ ಇಲ್ಲಿ ಒಳ್ಳೇ ಮನಸ್ಸಿನ ಪ್ರತೀಕ.

ನನ್ನ, ನಾನೇ ದೊರೆ ಎಂಬ ಅಹಂಕಾರ.

ಮನೆ, ಮಠ, ಸಂಪತ್ತು ನನ್ನದೆಂಬ ಮಮಕಾರ ತುಂಬಿತ್ತು.

ಹೆಂಡತಿ - (ಮನಸ್ಸು) ಸನ್ಮಾರ್ಗ ತೋರಿದಳು. ಸಾತ್ವಿಕ ಮಾರ್ಗದಲಿ ನಡೆಸಿದಳು.

ಮನಃ ಪರಿವರ್ತನವಾಯಿತು.

ಗೋಪಾಳ ಬುಟ್ಟಿ ಹಿಡಿದೆ. 

ಮಡದಿ - (ಮನಸ್ಸು)- ವಿರಕ್ತಿ ತಂದಳು.

ಮನಸ್ಸು ಪರಮಾತ್ಮನಲ್ಲಿ ರತ.

ಒಳ್ಳೇ ದಾರಿ ಹಿಡಿಯಿತು. 

ಭಕ್ತಿ, ಭವಸಾಗರ ತಾರಕವಾಯಿತು.

ಪುರುಂದರ ವಿಠ್ಠಲನ ಸ್ಮರಣೆ ಸಿಕ್ಕಿತು.

ಆನಂದವಾಯಿತು.

ಇಂತಹ ಹೆಂಡತಿ ಸಂತತಿ ಸಾವಿರವಾಗಲಿ.

ಅರ್ಥ ಒಳ್ಳೆಯ ಮನಸು ಕೊಡಲಿ. ಬೆಳೆಯಲಿ. ಸಾವಿರವಾಗಲಿ. ಅಭಿವೃದ್ಧಿಯಾಗಲಿ. ಸಾಧನೆಯ ದಾರಿ ಸುಗಮವಾಗಲಿ.

ದಾಸರು ಹೆಂಡತಿ ಎಂದು ಹೇಳಿದ್ದು 

ನೆಪ ಮಾತ್ರ.

ಹೀಗೆ ಮನಸ್ಸೆಂಬ ಮಡದಿ.

ಸಾದನೆಗೂ ಬಾಧನೆಗೂ ದಾರಿ.

'ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ'

ತಾಮಸ ಮನ ಮಾರಕ. ಸಾತ್ವಿಕ ಮನ ತಾರಕ. ಇದು ದಾಸರ ಉದ್ದೇಶ.

ದಾಸರ ಅಂತರ್ಗತ, ಮುಖ್ಯ ಪ್ರಾಣಾಂತರ್ಗತ ವಿಠ್ಠಲ ದೇವರಿಗೆ ಶಿ ಸಾ ನಮನಗಳು.
ಡಾ.ವಿಜಯೇಂದ್ರ. ದೇಸಾಯಿ.
ಶ್ರೀ ಕೃಷ್ಣಾರ್ಪಣಮಸ್ತು.
*******